Ranji Trophy Semi final: ಕುಸಿದ ಕರ್ನಾಟಕಕ್ಕೆ ಮಯಾಂಕ್ ಶತಕದಾಸರೆ, ಆಪದ್ಬಾಂಧವನಾದ ಶ್ರೀನಿವಾಸ

ಬೆಂಗಳೂರು: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ (Karnataka Vs Saurashtra Ranji semi final) ಪಂದ್ಯದಲ್ಲಿ ಮೊದಲ ದಿನವೇ ಕುಸಿತ ಕಂಡ ಆತಿಥೇಯ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ (Mayank Agarwal Century) ಆಸರೆಯಾಗಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ಆಘಾತ ಎದುರಿಸಿತು. ಉಪನಾಯಕ ಆರ್.ಸಮರ್ಥ್ ಕೇವಲ 3 ರನ್ ಗಳಿಸಿ ಔಟಾದ್ರೆ, ದೇವದತ್ತ್ ಪಡಿಕ್ಕಲ್ 9 ರನ್ನಿಗೆ ಪೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 68 ರನ್ ಆಗುವಷ್ಟರಲ್ಲಿ 4ನೇ ಕ್ರಮಾಂಕದ ಆಟಗಾರ ನಿಕಿನ್ ಜೋಸ್ (18) ಕೂಡ ಔಟ್.

ಈ ಹಂತದಲ್ಲಿ ನಾಯಕ ಮಯಾಂಕ್ ಅಗರ್ವಾಲ್ ಜೊತೆಯಾದ ಮನೀಶ್ ಪಾಂಡೆ ಜವಾಬ್ದಾರಿ ಪ್ರದರ್ಶಿಸುವ ಬದಲು ಇಲ್ಲದ ಹೊಡೆತಕ್ಕೆ ಕೈ ಹಾಕಿ ಕೇವಲ 7 ರನ್ನಿಗೆ ಔಟಾದ್ರು. ತಂಡದ ಮೊತ್ತ 112ರಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದ ಶತಕವೀರ ಶ್ರೇಯಸ್ ಗೋಪಾಲ್ (15) ಕೂಡ ಇಲ್ಲದ ರನ್ ಕದಿಯಲು ಹೋಗಿ ರನೌಟಾದ್ರು. ಹೀಗೆ 112 ರನ್ನಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಮತ್ತು ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಆಸರೆಯಾದರು. ಈ ಜೋಡಿ ಮುರಿಯದ 6ನೇ ವಿಕೆಟ್’ಗೆ 117 ರನ್ ಸೇರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು. ನಾಯಕನ ಜವಾಬ್ದಾರಿ ಪ್ರದರ್ಶಿಸಿದ ಮಯಾಂಕ್ ರಣದಿ ವೃತ್ತಿಜೀವನದಲ್ಲಿ 9ನೇ ಶತಕದೊಂದಿಗೆ ಮಿಂಚಿದರು. ಇದು ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಮಯಾಂಕ್ ಸಿಡಿಸಿದ 15ನೇ ಶತಕ.

ಮತ್ತೊಂದೆಡೆ ನಾಯಕನ ಜೊತೆ ಗಟ್ಟಿಯಾಗಿ ನಿಂತು ಶತಕದ ಜೊತೆಯಾಟದಲ್ಲಿ ಭಾಗಿಯಾದ ಶರತ್ ಶ್ರೀನಿವಾಸ್ ಆಕರ್ಷಕ ಅರ್ಧಶತಕ ಬಾರಿಸಿದರು. ದಿನದಂತ್ಯಕ್ಕೆ ಮಯಾಂಕ್ ಅಗರ್ವಾಲ್ 246 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 110 ರನ್ ಗಳಿಸಿದ್ರೆ, ತಾಳ್ಮೆಯ ಆಟ ಪ್ರದರ್ಶಿಸಿದ ಶರತ್ ಶ್ರೀನಿವಾಸ್ 143 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ ಅಜೇಯ 58 ರನ್ ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಕರ್ನಾಟಕ ಪ್ರಥಮ ದಿನದಂತ್ಯಕ್ಕೆ 87 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 229 ರನ್ ಕಲೆ ಹಾಕಿದೆ.

ಇದನ್ನೂ ಓದಿ : Gary Balance : ಎರಡು ದೇಶಗಳ ಪರ ಟೆಸ್ಟ್ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಜಿಂಬಾಬ್ವೆ ಕ್ರಿಕೆಟಿಗ

ಇದನ್ನೂ ಓದಿ : Duplicate Ashwin – Ravichandran Ashwin : ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕಾಂಗರೂಗಳ ಗೇಮ್ ಪ್ಲಾನ್ ಸೀಕ್ರೆಟ್ ಬಿಚ್ಚಿಟ್ಟ ಡುಪ್ಲಿಕೇಟ್ ಅಶ್ವಿನ್

Ranji Trophy Semi final mayank agarwal Century

Comments are closed.