T20 World Cup 2022 : ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವೈಫಲ್ಯದ ಹಿಂದಿನ ಅಸಲಿ ಕಥೆ..!

ಬೆಂಗಳೂರು : ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬಂದು ಟಿ20 ವಿಶ್ವಕಪ್ (T20 World Cup 2022)ಗೆಲ್ಲುತ್ತೆ- ಕಾರಣ ಐಪಿಎಲ್. ಆಸ್ಟ್ರೇಲಿಯಾ ತಂಡ ದುಬೈನಲ್ಲಿ ಟಿ20 ವಿಶ್ವಕಪ್ ಗೆಲ್ಲುತ್ತೆ- ಕಾರಣ ಐಪಿಎಲ್. ಭಾರತ ತಂಡ ಎಲ್ಲೇ ಹೋದರೂ ವಿಶ್ವಕಪ್ ಗೆಲ್ಲಲ್ಲ- ಅದಕ್ಕೂ ಕಾರಣ ಐಪಿಎಲ್.

ಇಂಗ್ಲೆಂಡ್, ಪಾಕಿಸ್ತಾನ ತಂಡಗಳು ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಫೈನಲ್ ತಲುಪುತ್ತವೆ- ಕಾರಣ ಬಿಗ್ ಬ್ಯಾಷ್ ಟಿ20 ಲೀಗ್. ನ್ಯೂಜಿಲೆಂಡ್ ತಂಡ ಜಗತ್ತಿನ ಯಾವುದೇ ಮೂಲೆಗೆ ಹೋದ್ರೂ ವಿಶ್ವಕಪ್’ನಲ್ಲಿ ಕನಿಷ್ಠ ಸೆಮಿಫೈನಲ್ ತಲುಪದೆ ವಾಪಸ್ ಹೋಗೋದೇ ಇಲ್ಲ- ಕಾರಣ ವಿದೇಶೀ ಟಿ20 ಲೀಗ್‌. ಕ್ರಿಕೆಟ್ ಆಡುವ ಜಗತ್ತಿನ ಪ್ರಮುಖ ದೇಶಗಳ ಆಟಗಾರರು ವಿದೇಶೀ ಟಿ20 ಲೀಗ್’ಗಳಲ್ಲಿ ಆಡುತ್ತಾ ತಮ್ಮ ಸಾಮರ್ಥ್ಯ, ಕೌಶಲ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ನಮ್ಮವರು ಮಾತ್ರ ಕೂಪ ಮಂಡೂಕಗಳಂತೆ ಐಪಿಎಲ್’ನಲ್ಲಿ ಮಾತ್ರ ಅಬ್ಬರಿಸುತ್ತಾ ವಿಶ್ವಕಪ್’ಗಳಲ್ಲಿ ಎಡವಿ ಎಡವಿ ಬೀಳುತ್ತಿದ್ದಾರೆ.

ಐಪಿಎಲ್’ನಂತೆ ಜಗತ್ತಿನಲ್ಲಿ ದೊಡ್ಡ ದೊಡ್ಡ ಟಿ20 ಲೀಗ್’ಗಳು ನಡೆಯುತ್ತವೆ. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್, ಇಂಗ್ಲೆಂಡ್’ನಲ್ಲಿ ಟಿ20 ಬ್ಲಾಸ್ಟ್, ಪಾಕಿಸ್ತಾನದಲ್ಲಿ ಪಿಎಸ್ಎಲ್, ಬಾಂಗ್ಲಾದೇಶದಲ್ಲಿ ಬಿಪಿಎಲ್, ವೆಸ್ಟ್ ಇಂಡೀಸ್’ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್, ದಕ್ಷಿಣ ಆಫ್ರಿಕಾದಲ್ಲಿ ಸೌತ್ ಆಫ್ರಿಕಾ ಟಿ20 ಲೀಗ್… ಈ ಎಲ್ಲಾ ಟೂರ್ನಿಗಳಲ್ಲಿ ಜಗತ್ತಿನ ಪ್ರಮುಖ ಆಟಗಾರರೆಲ್ಲಾ ಆಡುತ್ತಾರೆ. ಆದರೆ ನಮ್ಮವರಿಗೆ ಐಪಿಎಲ್ ಬಿಟ್ಟು ಬೇರೆ ಲೀಗ್’ಗಳಲ್ಲಿ ಆಡುವ ಅವಕಾಶವಿಲ್ಲ.

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುವಂತಿಲ್ಲ, ಒಪ್ಪಿಕೊಳ್ಳೋಣ. ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ… ಇಲ್ಲೆಲ್ಲಾ ನಮ್ಮ ಆಟಗಾರರಿಗೆ ಟಿ20 ಲೀಗ್ ಆಡಲು ಅವಕಾಶ ಕೊಟ್ಟರೆ ಲಾಭವಾಗುವುದು ನಮಗೇ ಹೊರತು ಅವರಿಗಿಲ್ಲ. ವಿದೇಶೀ ಟಿ20 ಲೀಗ್’ಗಳಲ್ಲಿ ಆಡುತ್ತಿರುವ ಒಂದಷ್ಟು ಮಂದಿ ಆಟಗಾರರು ತಮ್ಮ ತಂಡಗಳಿಗೆ ವಿಶ್ವಕಪ್ ಗೆದ್ದು ಕೊಡುತ್ತಿದ್ದಾರೆ. ತಂಡಗಳು ಸೆಮಿಫೈನಲ್, ಫೈನಲ್ ತಲುಪಲು ಕಾರಣವಾಗುತ್ತಿದ್ದಾರೆ.

ಅಷ್ಟಕ್ಕೂ ವಿದೇಶೀ ಟಿ20 ಲೀಗ್‌ಗಳಲ್ಲಿ ಆಡುವುದರಿಂದ ಏನು ಲಾಭ?
ಆ ದೇಶಗಳ ಕ್ರೀಡಾಂಗಣಗಳು, ಪಿಚ್, ವಾತಾವರಣ, ಆ ವಾತಾವರಣಕ್ಕೆ ಯಾವ ರೀತಿಯ ಆಟ ಸೂಕ್ತ..? ಗೇಮ್ ಪ್ಲಾನ್ ಹೇಗಿರಬೇಕು, ಯಾವ ಪಿಚ್‌ನಲ್ಲಿ ಯಾವ ರೀತಿಯ ಎಸೆತಗಳು ಪರಿಣಾಮಕಾರಿ..? ಶಾಟ್ ಸೆಲೆಕ್ಷನ್… ಈ ಎಲ್ಲಾ ವಿಚಾರಗಳ in & out ಮಾಹಿತಿ ಸಿಗ್ಬೇಕು ಅಂದ್ರೆ ಆ ದೇಶಗಳಿಗೆ ಹೋಗಿ ಹೆಚ್ಚು ಹೆಚ್ಚು ಮ್ಯಾಚ್’ಗಳನ್ನು ಆಡಬೇಕು. ಈಗಿರುವ ಅಂತಾರಾಷ್ಟ್ರೀಯ ವೇಳಾಪಟ್ಟಿ ಪ್ರಕಾರ ಅಷ್ಟೊಂದು ಪಂದ್ಯಗಳನ್ನು ಆಡುವ ಅವಕಾಶ ಆಟಗಾರರಿಗಿಲ್ಲ. ಉದಾಹರಣೆಗೆ ಭಾರತ ತಂಡ.. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್’ನಲ್ಲಿ ಭಾರತ ತಂಡಕ್ಕೆ ಪ್ರತೀ ವರ್ಷ ಆಡುವ ಅವಕಾಶ ಇದೆಯೇ..? ಇಲ್ಲ. ಎರಡು ವರ್ಷಕ್ಕೋ ನಾಲ್ಕು ವರ್ಷಕ್ಕೋ ಒಂದು ಟೂರ್. ಆ ಟೂರ್’ನಲ್ಲಿ 3-4 ಟೆಸ್ಟ್ ಮ್ಯಾಚ್, 4-5 ವಂಡೇ ಮ್ಯಾಚ್, 3-5 ಟಿ20 ಮ್ಯಾಚ್’ಗಳು. ಒಂದು ಟೂರ್’ನಲ್ಲಿ 10ರಿಂದ 12 ಮ್ಯಾಚ್’ಗಳು. ಅದೂ 2-3 ವರ್ಷಗಳಿಗೊಮ್ಮೆ.

ಅದೇ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದ ಆಟಗಾರರನ್ನು ನೋಡಿ… ಜಗತ್ತಿನ ಎಲ್ಲಾ ಕಡೆ ಟಿ20 ಲೀಗ್’ಗಳನ್ನಾಡುತ್ತಾರೆ. ಪಾಕಿಸ್ತಾನದವರಿಗೆ ಐಪಿಎಲ್ ಹೊರತು ಪಡಿಸಿ ಬೇರೆಲ್ಲಾ ಟಿ20 ಲೀಗ್’ಗಳಲ್ಲಿ ಎಂಟ್ರಿಯಿದೆ. ಅಲ್ಲಿ ಆಡುವ ಅನುಭವದ ಲಾಭವನ್ನು ಈ ದೇಶಗಳ ಆಟಗಾರರು ವಿಶ್ವಕಪ್’ನಂತಹ ಟೂರ್ನಿಗಳಲ್ಲಿ ಕಾರ್ಯರೂಪಕ್ಕೆ ಇಳಿಸಿ ಯಶಸ್ಸು ಗಳಿಸುತ್ತಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಇವತ್ತು ಜಗತ್ತಿನ ನಂ.1 ಟಿ20 ಬೌಲರ್ ಎನಿಸಿಕೊಂಡಿದ್ದಾನೆ ಅಂದ್ರೆ ಅದಕ್ಕೆ ಕಾರಣ ಫಾರಿನ್ ಟಿ20 ಲೀಗ್’ಗಳು. ನಮ್ಮ ಆಟಗಾರರಿಗೆ ಈ ಅವಕಾಶವಿಲ್ಲ. ಅವಕಾಶ ಸಿಗದಂತೆ ಮಾಡಿರುವುದು ಬಿಸಿಸಿಐ.

ಇದನ್ನೂ ಓದಿ : T20 World Cup 2022 : ವಿಶ್ವಕಪ್‌ ಫೈನಲ್‌ ರದ್ದಾಗುತ್ತಾ? ಟ್ರೋಫಿ ಹಂಚಿಕೊಳ್ತಾರಾ ಇಂಗ್ಲೆಂಡ್ – ಪಾಕಿಸ್ತಾನ

ಇದನ್ನೂ ಓದಿ : IPL 2023 :ಕೀರಾನ್ ಪೊಲಾರ್ಡ್ ಗೆ ಕೋಕ್ ಕೊಟ್ಟ ಮುಂಬೈ ಇಂಡಿಯನ್ಸ್‌

ಇದನ್ನೂ ಓದಿ : Exclusive : ಬೆಂಗಳೂರಿನಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ, KIOCನಲ್ಲಿ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಪ್ರಾಕ್ಟೀಸ್

ಭಾರತದ ಆಟಗಾರರು ವಿದೇಶೀ ಟಿ20 ಲೀಗ್’ಗಳಲ್ಲಿ ಆಡಿದ್ರೆ ಎಲ್ಲಿ ನಮ್ಮ ಐಪಿಎಲ್’ಗೆ ಪೆಟ್ಟು ಬೀಳುತ್ತದೆಯೋ ಎಂಬ ಭಯ. ಐಪಿಎಲ್ ಜನಪ್ರಿಯತೆ ಕಡಿಮೆಯಾಗುವ ಆತಂಕ. ಬಿಸಿಸಿಐ ಈ ಸಂಕುಚಿತ ಮನಸ್ಸನ್ನು ಬಿಟ್ಟು ಅದರಾಚೆ ಯೋಚನೆ ಮಾಡಬೇಕು. ಹಾಗೆ ಮಾಡದೇ ಇದ್ದರೆ ನಷ್ಟ ನಮಗೇ ಹೊರತು ಬೇರೆ ಯಾರಿಗೂ ಅಲ್ಲ.

T20 World Cup 2022: The real story behind Team India’s T20 World Cup failure..!

Comments are closed.