U19 World Cup: ಅಂಡರ್ 19 ವಿಶ್ವಕಪ್‌ನಲ್ಲಿ ಉಗಾಂಡಕ್ಕೆ ಸೋಲುಣಿಸಿದ ಭಾರತ; ಶಿಖರ್ ಧವನ್ ದಾಖಲೆ ಪುಡಿಪುಡಿ ಮಾಡಿದ ರಾಜ್ ಬಾವಾ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ (U19 World Cup) ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಉಗಾಂಡಾ ತಂಡವನ್ನು ಬರೋಬ್ಬರಿ 326 ರನ್‌ಗಳಿಂದ ಸೋಲಿಸಿ ಜಯಗಳಿಸಿದೆ. ಈ ಪಂದ್ಯದಲ್ಲಿ ಶಿಖರ್ ಧವನ್ (Shikhar Dhawan) ಅವರ ದಾಖಲೆಯೊಂದನ್ನು ಯುವ ಆಟಗಾರ ರಾಜ್ ಬಾವಾ (Raj Bawa) ಹಿಂದಿಕ್ಕುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಕೆರೆಬಿಯನ್ ದೇಶ ಟ್ರಿನಿಡಾಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಉಗಾಂಡ ವಿರುದ್ಧ ಶನಿವಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ರಾಜ್ ಬಾವಾ ಅಜೇಯ 162 ರನ್ ಗಳಿಸಿದ್ದಾರೆ. ಇದರೊಂದಿಗೆ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ಪರ ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಈವರೆಗೆ ಈ ದಾಖಲೆ ಶಿಖರ್ ಧವನ್ ಹೆಸರಲ್ಲಿತ್ತು. 2004ರಲ್ಲಿ ಕೀನ್ಯಾ ವಿರುದ್ಧ ಧವನ್ 155 ರನ್ ಬಾರಿಸಿದ್ದರು. ರಾಜ್ ಬಾವಾ ಅಮೋಘ ಬ್ಯಾಟಿಂಗ್‌ನಿಂದಾಗಿ ಟೀಂ ಇಂಡಿಯಾವು ಉಗಾಂಡ ವಿರುದ್ಧ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 405 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಉಗಾಂಡ ತಂಡವು ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 19.4 ಓವರ್‌ಗಳಲ್ಲಿ 79 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮವಾಗಿ 326 ರನ್‌ಗಳ ಭಾರಿ ಅಂತರದ ಗೆಲುವು ಭಾರತದ್ದಾಯಿತು. 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡವು ಈವರೆಗೆ ಮಾಡಿದ ಗರಿಷ್ಠ ರನ್ 425 ಆಗಿದೆ. ಇದೂ ಕೂಡ 2004ರಲ್ಲಿ ಧವನ್ 155 ರನ್ ಗಳಿಸಿದ್ದ ಪಂದ್ಯದಲ್ಲೇ ಮೂಡಿಬಂದಿತ್ತೆಂಬುದು ಗಮನಾರ್ಹ.

ಟೂರ್ನಿಯ ಆರಂಭದ ವೇಳೆಗೆ ಭಾರತ ತಂಡವು ಕೋವಿಡ್‌ನಿಂದಾಗಿ ತೊಂದರೆಗೆ ಸಿಲುಕಿತ್ತು. ನಾಯಕ ಯಶ ಧುಲ್, ಉಪ ನಾಯಕ ಶೇಖ್ ರಶೀದ್ ಹಾಗೂ ಇತರ ಐವರು ಆಟಗಾರರಲ್ಲಿ ಕೋವಿಡ್–19 ದೃಢಪಟ್ಟಿತ್ತು. ಬ್ಯಾಟರ್ ಆರಾಧ್ಯ ಯಾದವ್, ವಾಸು ವಾಟ್ಸ್, ಮಾನವ್ ಪ್ರಕಾಶ್ ಹಾಗೂ ಸಿದ್ಧಾರ್ಥ್ ಯಾದವ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಧುಲ್ ಅನುಪಸ್ಥಿತಿಯಲ್ಲಿ ನಿಶಾಂತ್ ಸಿಂಧು ತಂಡವನ್ನು ಮುನ್ನಡೆಸುತ್ತಿದ್ದಾರೆ.

2020ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡವು ರನ್ನರ್ ಅಪ್ ಆಗಿತ್ತು. ಬಾಂಗ್ಲಾದೇಶ ಚಾಂಪಿಯನ್ ಆಗಿತ್ತು.

ಇದನ್ನೂ ಓದಿ:Couple Therapy: ನಿಮ್ಮ ಸಂಗಾತಿ ಜೊತೆಗಿನ ಜಗಳ ಪರಿಹರಿಸಲು ನೆರವಾಗುವ ಚಟುವಟಿಕೆಗಳಿವು!

(U19 World Cup India defeat Uganda Raj Bawa Surpass Shikhar Dhawan To Become India’s Highest Individual Scorer)

Comments are closed.