Daniel Vettori : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್ ಸನ್ ರೈಸರ್ಸ್ ತಂಡಕ್ಕೆ ನೂತನ ಹೆಡ್ ಕೋಚ್

ಬೆಂಗಳೂರು: ಐಪಿಎಲ್’ನಲ್ಲಿ (Indian Premier League) ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ನೂತನ ಹೆಡ್ ಕೋಚ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕೋಚ್, ನ್ಯೂಜಿಲೆಂಡ್’ನ ಡೇನಿಯೆಲ್ ವೆಟೋರಿ (Daniel Vettori) ನೇಮಕಗೊಂಡಿದ್ದಾರೆ

ಕಳೆದ ಐಪಿಎಲ್’ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊನೆಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಹೆಡ್ ಕೋಚ್ ಆಗಿದ್ದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಯಾನ್ ಲಾರಾ ಅವರ ಜೊತೆಗಿನ ಒಪ್ಪಂದವನ್ನು ಮುಂದುವರಿಸದಿರಲು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿರ್ಧರಿಸಿದೆ. ಹೀಗಾಗಿ ಲಾರಾ ಬದಲು ವೆಟೋರಿ ಅವರನ್ನು ನೂತನ ಕೋಚ್ ಆಗಿ ನೇಮಕಗೊಳಿಸಲಾಗಿದೆ.

ಡೇನಿಯೆಲ್ ವೆಟೋರಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿದ್ದರು. ವೆಟೋರಿ ನಾಯಕತ್ವದಲ್ಲಿ ಆರ್’ಸಿಬಿ 2011ರ ಐಪಿಎಲ್’ನಲ್ಲಿ ಫೈನಲ್ ತಲುಪಿತ್ತು. ನಿವೃತ್ತಿಯ ನಂತರ ವೆಟೋರಿ ಕೆಲ ವರ್ಷಗಳ ಕಾಲ ಆರ್’ಸಿಬಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಐಪಿಎಲ್ ಜವಾಬ್ದಾರಿಯಿಂದ ಮುಕ್ತಗೊಂಡ ನಂತರ ವೆಟೋರಿ ಆಸ್ಟ್ರೇಲಿಯಾ ತಂಡದ ಅಸಿಸ್ಟಿಂಟ್ ಕೋಚ್ ಆಗಿದ್ದರು. ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ತರಬೇತುದಾರ ಜವಾಬ್ದಾರಿ ವಹಿಸಿಕೊಳ್ಳುವುದರೊಂದಿಗೆ ಮತ್ತೆ ಐಪಿಎಲ್’ಗೆ ಮರಳಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಪಾರ ಅನುಭವ ಹೊಂದಿರುವ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯೆಲ್ ವೆಟೋರಿ ಕಿವೀಸ್ ಪರ 113 ಟೆಸ್ಟ್, 295 ಏಕದಿನ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ. ಇದನ್ನೂ ಓದಿ : Maharaja Trophy T20: ಮಹಾರಾಜ ಟ್ರೋಫಿ ಟಿ20ಯಲ್ಲಿ ಕನ್ನಡವೇ ಇಲ್ಲ, ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ಕನ್ನಡಿಗರು ಗರಂ

2024ನೇ ಸಾಲಿನ ಐಪಿಎಲ್’ಗೆ ಫ್ರಾಂಚೈಸಿಗಳು ಸಜ್ಜಾಗುತ್ತಿದ್ದು, ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ಅವರನ್ನು ಹೆಡ್ ಕೋಚ್ ಆಗಿ ನೇಮಕಗೊಳಿಸಿತ್ತು. ಫ್ಲವರ್ ಕಳೆದೆರಡು ವರ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿದ್ದರು. ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ ಲಕ್ನೋ ತಂಡದ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ.

Daniel Vettori: The former coach of Royal Challengers Bangalore is the new head coach of Sunrisers

Comments are closed.