David Warner – Candice Warner : ಟೆಸ್ಟ್ ಕ್ರಿಕೆಟ್’ಗೆ ಡೇವಿಡ್ ವಾರ್ನರ್ ವಿದಾಯ? ರಹಸ್ಯ ಬಿಚ್ಚಿಟ್ಟ ಪತ್ನಿಯ ಇಸ್‌ಸ್ಟಾಗ್ರಾಂ ಪೋಸ್ಟ್

ಲಂಡನ್ : David Warner – Candice Warner : ಆಶಸ್ ಟೆಸ್ಟ್ (The Ashes 2023) ಸರಣಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ದಿಗ್ಗಜ ಎಡಗೈ ಓಪನರ್ ಡೇವಿಡ್ ವಾರ್ನರ್ (David Warner) ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆಯೇ? ಈ ಪ್ರಶ್ನೆಯನ್ನು ಹುಟ್ಟು ಹಾಕಿರುವುದು ಡೇವಿಡ್ ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್ (Candice Warner) ಅವರ ಇನ್‌ಸ್ಟಾಗ್ರಾಂ ಪೋಸ್ಟ್.

36 ವರ್ಷದ ಡೇವಿಡ್ ವಾರ್ನರ್ ಸದ್ಯ ಇಂಗ್ಲೆಂಡ್‌ನಲ್ಲಿದ್ದು ಐತಿಹಾಸಿಕ ಆಶಸ್ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್ ಪಂದ್ಯದ ಆರು ಇನ್ನಿಂಗ್ಸ್‌ಗಳಲ್ಲಿ ಡೇವಿಡ್ ವಾರ್ನರ್ 141 ರನ್ ಕಲೆ ಹಾಕಿದ್ದಾರೆ. ಲೀಡ್ಸ್‌ನ ಹೆಡಿಂಗ್ಲೇ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ತೃತೀಯ ಟೆಸ್ಟ್ ಪಂದ್ಯದಲ್ಲಿ ವಾರ್ನರ್ 4 ಹಾಗೂ 1 ರನ್ ಗಳಿಸಿದ್ದರು. 3ನೇ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಆತಿಥೇಯ ಇಂಗ್ಲೆಂಡ್ ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ಇಳಿಸಿಕೊಂಡಿದೆ.

ಆಶಸ್ ಸರಣಿಯ 4ನೇ ಟೆಸ್ಟ್ ಪಂದ್ಯ ಜುಲೈ 19ರಂದು ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದ್ದು, ಅದಕ್ಕೂ ಮೊದಲೇ ಡೇವಿಡ್ ವಾರ್ನರ್ ಅವರ ಟೆಸ್ಟ್ ನಿವೃತ್ತಿ ಸುದ್ದಿ ಹಬ್ಬಿದೆ. ವಾರ್ನರ್ ಪತ್ನಿಯ ಇನ್‌ಸ್ಟಾಗ್ರಾಂ ಪೋಸ್ಟ್ ಈ ಸುಳಿವು ನೀಡಿದೆ. ಅಷ್ಟಕ್ಕೂ ಡೇವಿಡ್ ವಾರ್ನರ್ ಪತ್ನಿಯ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲೇನಿದೆ? “ಟೆಸ್ಟ್ ಕ್ರಿಕೆಟ್ ಪ್ರಯಾಣದಲ್ಲಿ ನಮಗೆ ಯುಗಾಂತ್ಯವಾಗಿದೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು” ಎಂದು ಕ್ಯಾಂಡೀಸ್ ವಾರ್ನರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಜೊತೆಗೆ ಮೂವರು ಹೆಣ್ಣು ಮಕ್ಕಳು ಮತ್ತು ವಾರ್ನರ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ : Virat Kohli – Rahul Dravid : 11 ವರ್ಷಗಳ ನೆನಪಿನ ಕನವರಿಕೆ, ದ್ರಾವಿಡ್ ಜೊತೆಗಿನ ಫೋಟೋ ಶೇರ್ ಮಾಡಿ ಭಾವುಕರಾದ ವಿರಾಟ್ ಕೊಹ್ಲಿ

ಇದನ್ನೂ ಓದಿ : Dhoni in Chennai : ಹೊಸ ಗೆಟಪ್‌ನಲ್ಲಿ ಚೆನ್ನೈಗೆ ಬಂದಿಳಿದ “ಥಲಾ”, 2ನೇ ಮನೆಗೆ ಧೋನಿ ಬಂದದ್ದೇಕೆ ಗೊತ್ತಾ?

ಸ್ಫೋಟಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ 107 ಟೆಸ್ಟ್ ಪಂದ್ಯಗಳನ್ನಾಡಿದ್ದು, 44.61ರ ಸರಾಸರಿಯಲ್ಲಿ 25 ಶತಕಗಳು ಹಾಗೂ 35 ಅರ್ಧಶತಕಗಳ ಸಹಿತ 8343 ರನ್ ಕಲೆ ಹಾಕಿದ್ದಾರೆ. 142 ಏಕದಿನ ಪಂದ್ಯಗಳಿಂದ 19 ಶತಕ ಹಾಗೂ 27 ಅರ್ಧಶತಕಗಳೊಂದಿಗೆ 6030 ರನ್ ಗಳಿಸಿದ್ದಾರೆ. ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಡೇವಿಡ್ ವಾರ್ನರ್, ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುವ ಸಾಧ್ಯತೆಯಿದೆ.

David Warner – Candice Warner : David Warner to Retire from Test Cricket?

Comments are closed.