Dhoni in Chennai : ಚೆನ್ನೈನಲ್ಲಿ ಅಭಿಮಾನಿಗಳ ಆಸೆ ಈಡೇರಿಸಿದ “ಥಲಾ” ಧೋನಿ

ಚೆನ್ನೈ : Dhoni in Chennai : ಟೀಮ್ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿ ಮಹೇಂದ್ರ ಸಿಂಗ್ ಧೋನಿ (MS Dhoni) ಅಭಿಮಾನಿಗಳ ಪಾಲಿನ ಆರಾಧ್ಯದೈವವೂ ಹೌದು. ಭಾರತದಲ್ಲಿ ಸದ್ಯ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎಂ.ಎಸ್ ಧೋನಿ ಅವರಿಗೆ ಕಾಲಿಟ್ಟ ಕಡೆಯೆಲ್ಲಾ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಜಾರ್ಖಂಡ್”ನ ರಾಂಚಿಯವರಾದ ಎಂ.ಎಸ್ ಧೋನಿ, ಚೆನ್ನೈನ ದತ್ತು ಪುತ್ರನೂ ಹೌದು. ಕಾರಣ ಚೆನ್ನೈ ಸೂಪರ್ ಕಿಂಗ್ಸ್. ಕಳೆದ 14 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿ ಅವರಿಗೆ ಚೆನ್ನೈನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆ ಅಭಿಮಾನಿಗಳ ಪಾಲಿಗೆ ಧೋನಿಯೇ ದೇವರು.

ಸದ್ಯ ಎಂ.ಎಸ್ ಧೋನಿ ಚೆನ್ನೈನಲ್ಲಿದ್ದು, ಅಲ್ಲಿ ತಮ್ಮ ಇಬ್ಬರು ಅಭಿಮಾನಿಗಳ ಆಸೆಯನ್ನು ನೆರವೇರಿಸಿದ್ದಾರೆ. ಧೋನಿ ಜೊತೆ ಇಬ್ಬರು ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ, ತಮ್ಮಂತೆ “ಯೋ ಯೋ” ಶೈಲಿಯಲ್ಲಿ ಫೋಟೋಗೆ ಪೋಸ್ ಕೊಡುವಂತೆ ಧೋನಿ ಅವರನ್ನು ವಿನಂತಿಸಿಕೊಂಡಿದ್ದಾರೆ. ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಧೋನಿ, ಅವರಂತೆ ತಾವೂ ಕೈಯಲ್ಲಿ ಸನ್ನೆ ಮಾಡಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

42 ವರ್ಷದ ಧೋನಿ ತಮ್ಮ ತಮ್ಮ ಪ್ರೊಡಕ್ಷನ್ ಹೌಸ್’ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ “ಲೆಟ್ಸ್ ಗೆಟ್ ಮ್ಯಾರೀಡ್ (Let’s Get Married – LGM) ಸಿನಿಮಾ”ದ ಆಡಿಯೋ ಮತ್ತು ಟ್ರೈಲರ್ ಅನಾವರಣಕ್ಕೆ ಚೆನ್ನೈಗೆ ಆಗಮಿಸಿದ್ದರು. ಕೆಲ ತಿಂಗಳ ಹಿಂದಷ್ಟೇ ಧೋನಿ ಸಿನಿಮಾ ಜಗತ್ತಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು “ಧೋನಿ ಎಂಟರ್ಟೈನ್ಮೆಂಟ್” ಹೆಸರಿನ ತಮ್ಮದೇ ಪ್ರೊಡಕ್ಷನ್ ಹೌಸ್ ಅನ್ನು ಆರಂಭಿಸಿದ್ದರು. ಧೋನಿ ಎಂಟರ್ಟೈನ್ಮೆಂಟ್’ನ ಮೊದಲ ಸಿನಿಮಾವೇ ಲೆಟ್ಸ್ ಗೆಟ್ ಮ್ಯಾರೀಡ್. ತಮ್ಮ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಆಡಿಯೋ ಮತ್ತು ಟ್ರೈಲರನ್ನು ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಸೋಮವಾರ ಅನಾವರಣ ಮಾಡಿದ್ದಾರೆ.

ಐಪಿಎಲ್-2023 ಟೂರ್ನಿಯಲ್ಲಿ ಎಂ.ಎಸ್ ಧೋನಿ ದಾಖಲೆಯ 5ನೇ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ಹಾಗೂ 2023ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ವರ್ಷ ಐಪಿಎಲ್’ನಲ್ಲಿ ಆಡಿದ್ದು 12 ಬಾರಿ ಪ್ಲೇ ಆಫ್ ತಲುಪಿದೆ. 10 ಬಾರಿ ಫೈನಲ್ ತಲುಪಿ 5 ಬಾರಿ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ : Duleep Trophy final : ದಕ್ಷಿಣ ವಲಯಕ್ಕೆ ಮೊದಲ ದಿನವೇ ಆಘಾತ, ಮೇಲುಗೈ ಸಾಧಿಸಿದ ಪಶ್ಚಿಮ ವಲಯ

ಇದನ್ನೂ ಓದಿ : Let’s Get Married movie : ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ

2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜಾರ್ಖಂಡ್’ನ ರಾಂಚಿಯ ಎಂ.ಎಸ್ ಧೋನಿ ಭಾರತಕ್ಕೆ 2 ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ಖ್ಯಾತಿ ಧೋನಿ ಅವರದ್ದು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 538 ಪಂದ್ಯಗಳನ್ನಾಡಿರುವ ಎಂ.ಎಸ್ ಧೋನಿ, 16 ಶತಕ ಹಾಗೂ 108 ಅರ್ಧಶತಕಗಳ ಸಹಿತ 17,266 ರನ್ ಕಲೆ ಹಾಕಿದ್ದಾರೆ.

Dhoni in Chennai: “Thala” Dhoni fulfilled the wish of fans in Chennai

Comments are closed.