ಬೆಂಗಳೂರು: (Secret of Hardik Pandya’s Success) ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಯಶಸ್ಸಿನ ಹಿಂದಿನ ಮೂಲಶಕ್ತಿಯೇ ನಮ್ಮ ಕನ್ನಡಿಗ. ಅಚ್ಚರಿಯಾದರೂ ಇದು ಸತ್ಯ. 29 ವರ್ಷದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗ ತಮ್ಮ ವೃತ್ತಿಜೀವನದ ಅಮೋಘ ಲಯದಲ್ಲಿದ್ದಾರೆ. ಇತ್ತೀಚೆಗಷ್ಟೇ ಐಪಿಎಲ್-2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪಾಂಡ್ಯ, ಇಂಗ್ಲೆಂಡ್ ವಿರುದ್ಧ ಗುರುವಾರ ಸೌಥಾಂಪ್ಟನ್’ನಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಆಲ್ರೌಂಡ್ ಆಟವಾಡಿ ಭಾರತಕ್ಕೆ 50 ರನ್’ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.

ಮೊದಲು ಬ್ಯಾಟಿಂಗ್’ನಲ್ಲಿ ಮಿಂಚಿ 33 ಎಸೆತಗಳಲ್ಲಿ ಸ್ಫೋಟಕ 51 ರನ್ ಸಿಡಿಸಿದ್ದ ಪಾಂಡ್ಯ, ನಂತರ ಬೌಲಿಂಗ್’ನಲ್ಲೂ ಮಿಂಚಿ 33 ರನ್ನಿಗೆ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ ಬರೋಡ ಆಲ್ರೌಂಡರ್ ಪಾಂಡ್ಯ ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿ ಬೆಳೆದು ನಿಂತಿದ್ದರ ಹಿಂದೆ ಕನ್ನಡಿಗರೊಬ್ಬರ ದೊಡ್ಡ ಪಾತ್ರವಿದೆ. ಅವರು ಬೇರಾರೂ ಇಲ್ಲ, ಕರ್ನಾಟಕದ ಮಾಜಿ ಕ್ರಿಕೆಟಿಗ, ರಾಜ್ಯ ರಣಜಿ ತಂಡದ ಮಾಜಿ ಕೋಚ್ ಸನತ್ ಕುಮಾರ್. ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಲೆಗ್‌ಸ್ಪಿನ್ನರ್ ಆಗಿದ್ದವರು. ಸನತ್ ಕುಮಾರ್ ಬರೋಡ ತಂಡದ ಕೋಚ್ ಆಗಿದ್ದಾಗ ಹಾರ್ದಿಕ್ ಪಾಂಡ್ಯನ ಪ್ರತಿಭೆಯನ್ನು ಗುರುತಿಸಿದ್ದರು. ಸ್ಪಿನ್ನರ್ ಆಗಿದ್ದ ಪಾಂಡ್ಯ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗಿದ್ದು ಹೇಗೆ ಎಂಬ ಗುಟ್ಟನ್ನು ಸ್ವತಃ ಸನತ್ ಕುಮಾರ್ ಅವರೇ ಬಿಚ್ಚಿಟ್ಟಿದ್ದಾರೆ.

”ಒಂದು ದಿನ ಬರೋಡ ತಂಡದ ಅಭ್ಯಾಸ ನಡೆಯುತ್ತಿದ್ದ ವೇಳೆ ನೆಟ್ಸ್‌ನಲ್ಲಿ ವೇಗದ ಬೌಲರ್‌ಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲಿಯೇ ಇದ್ದ ಪಾಂಡ್ಯಗೆ ವೇಗದ ಬೌಲಿಂಗ್ ಮಾಡುವಂತೆ ಸೂಚಿಸಿದೆ. ನೆಟ್ಸ್‌ನಲ್ಲಿ ಆತನ ಬೌಲಿಂಗ್ ವೇಗ ನನಗೆ ಅಚ್ಚರಿ ಮೂಡಿಸಿತ್ತು. ಆಗಲೇ ಗಂಟೆಗೆ ಸುಮಾರು 130 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ. ಲೆಗ್ ಸ್ಪಿನ್ನರ್ ಆಗಿದ್ದ ಪಾಂಡ್ಯ ವೇಗದ ಬೌಲರ್ ಆಗಿ ಬದಲಾಗಿದ್ದು ಹೀಗೆ’’.
-ಸನತ್ ಕುಮಾರ್, ಕರ್ನಾಟಕ, ಬರೋಡ ತಂಡಗಳ ಮಾಜಿ ಕೋಚ್.
ಸನತ್ ಕುಮಾರ್ ಬರೋಡ ತಂಡದ ಕೋಚ್ ಆಗಿದ್ದಾಗ ಕಿರಿಯರ ಟೂರ್ನಿಗಳಲ್ಲಿ ಹಾರ್ದಿಕ್ ಆಟವನ್ನು ನೋಡಿದ್ದಂತೆ. ಟೂರ್ನಿಯೊಂದರಲ್ಲಿ ಶತಕ ಗಳಿಸಿದ ಪಾಂಡ್ಯ, ಸನತ್ ಕುಮಾರ್ ಗಮನ ಸೆಳೆದು ಬಿಟ್ಟಿದ್ದ. ‘’ಈ ಹುಡುಗನಿಗೆ ಪ್ರೋತ್ಸಾಹ ನೀಡಿದರೆ, ರಾಜ್ಯ ತಂಡಕ್ಕೆ ಉತ್ತಮ ಆಸ್ತಿಯಾಗಬಲ್ಲ ಎಂದು ಅನ್ನಿಸಿತು. ಬರೋಡದ ಏಕದಿನ ಹಾಗೂ ಟಿ20 ತಂಡದ ಆಯ್ಕೆಗೆ ಅಲ್ಲಿ 3 ತಂಡಗಳನ್ನು ರಚಿಸಿ ಟೂರ್ನಿಯೊಂದನ್ನು ಆಡಿಸುತ್ತಿದ್ದೆವು. ಆ ಟೂರ್ನಿಯಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಪಾಂಡ್ಯ ಕ್ರೀಡಾಂಗಣದಿಂದ ಬಹು ದೂರ ಬಾರಿಸಿಬಿಟ್ಟ. ತಡ ಮಾಡದೆ ಆತನನ್ನು ಟಿ20 ತಂಡಕ್ಕೆ ಸೇರಿಸಿಕೊಂಡೆ’’.
–ಸನತ್ ಕುಮಾರ್, ಕರ್ನಾಟಕ, ಬರೋಡ ತಂಡಗಳ ಮಾಜಿ ಕೋಚ್.

ಲೆಗ್ ಸ್ಪಿನ್ನರ್ ಆಗಿದ್ದ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆರಂಭಿಸಿದಾಗ ಬರೋಡಾ ಕ್ರಿಕೆಟ್ ಸಂಸ್ಥೆಯ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ವೇಗದ ಬೌಲರ್ ಆಗಿದ್ದ ಅಲ್ಲಿನ ಕೋಚ್ ಒಬ್ಬರ ಪುತ್ರನಿಗಾಗಿ ಪಾಂಡ್ಯ ಅವರನ್ನು ನಿರ್ಲಕ್ಷಿಸುವ ಯತ್ನವೂ ನಡೆದಿತ್ತು. ‘’ಹಾರ್ದಿಕ್ ವೇಗದ ಬೌಲಿಂಗ್ ಮಾಡುತ್ತಿದ್ದಾಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಒಂದು ವರ್ಷ ಆತನಿಗೆ ಬೌಲಿಂಗ್ ಮಾಡುವುದಕ್ಕೇ ಬಿಡಲಿಲ್ಲ. ಒಂದು ಬಾರಿಯಂತೂ ವಿಶೇಷ ಸಭೆ ಕರೆದ ಬರೋಡ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಪಾಂಡ್ಯ ಅವರ ಕೈಯಲ್ಲಿ ಏಕೆ ವೇಗದ ಬೌಲಿಂಗ್ ಮಾಡಿಸುತ್ತಿರುವಿರಿ ಎಂದು ನನ್ನನ್ನು ಪ್ರಶ್ನಿಸಿದರು. ಅದಕ್ಕೆ ನಾನು ಸೂಕ್ತ ಸ್ಪಷ್ಟನೆ ನೀಡಿ, ಈತ ಭವಿಷ್ಯದ ತಾರೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿದೆ,” ಎಂದು ಹಳೆಯ ಘಟನೆಯನ್ನು ಮೆಲುಕು ಹಾಕುತ್ತಾರೆ ಕೋಚ್ ಸನತ್ ಕುಮಾರ್.
ಇದನ್ನೂ ಓದಿ : ಬ್ಯಾಟಿಂಗ್ ದಿಗ್ಗಜನ ಮಹಾಪತನ, 6 ವರ್ಷಗಳಲ್ಲಿ ಮೊದಲ ಬಾರಿ ಟಾಪ್-10ನಿಂದ ವಿರಾಟ್ ಕೊಹ್ಲಿ ಔಟ್ !
ಇದನ್ನೂ ಓದಿ : Virat wrote emotional lines : ಧೋನಿ ಹುಟ್ಟುಹಬ್ಬಕ್ಕೆ 3 ಸಾಲುಗಳ ಭಾವನಾತ್ಮಕ ಸಂದೇಶ ಬರೆದ ಕಿಂಗ್ ಕೊಹ್ಲಿ
Exclusive The Real Secret of Hardik Pandya’s Success