Robin Uthappa : ರಾಬಿನ್ ಉತ್ತಪ್ಪ ಅಭಿಮಾನಿಗಳಿಗೆ ಗುಡ್ ನ್ಯೂಸ್.. ನಿವೃತ್ತಿಯಾದರೂ ಮತ್ತೆ ಆಡಲಿದ್ದಾರೆ ಕೊಡಗಿನ ವೀರ

ಬೆಂಗಳೂರು: (Robin Uthappa will play again ) ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಿರುವ ರಾಬಿನ್ ಉತ್ತಪ್ಪ, ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಹಾಗಂತ ಉತ್ತಪ್ಪ ಅಭಿಮಾನಿಗಳು ಪೂರ್ತಿ ನಿರಾಸೆಯಾಗಬೇಕಿಲ್ಲ. ಕೊಡಗಿನ ವೀರನ ಆಟವನ್ನು ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಗಲಿದೆ. 36 ವರ್ಷದ ಹೊಡಿಬಡಿಯ ದಾಂಡಿಗ ರಾಬಿನ್ ಉತ್ತಪ್ಪ, ಅಂತಾರಾಷ್ಟ್ರೀಯ ಕ್ರಿಕೆಟ್, ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ ಕ್ರಿಕೆಟ್’ಗೆ ಬುಧವಾರ ನಿವೃತ್ತಿ ಘೋಷಿಸಿದ್ದರು. ಟ್ವಿಟರ್’ನಲ್ಲಿ ವಿದಾಯದ ಸಂದೇಶ ಹಾಕಿದ್ದ ಉತ್ತಪ್ಪ, ಎಲ್ಲಾ ಪ್ರಕಾರದ ಕ್ರಿಕೆಟ್’ನಿಂದ ನಿವೃತ್ತಿಯಾಗುತ್ತಿರುವುದಾಗಿ ಬರೆದುಕೊಂಡಿದ್ದರು.

“ನಾನು ವೃತ್ತಿಪರ ಕ್ರಿಕೆಟ್ ಆಡಲು ಶುರು ಮಾಡಿ 20 ವರ್ಷಗಳಾದವು. ಈ ಅವಧಿಯಲ್ಲಿ ದೇಶ ಮತ್ತು ನನ್ನ ರಾಜ್ಯ ಕರ್ನಾಟಕ ಪರ ಆಡುವಂತಾಗಿದ್ದು ನನಗೆ ಸಿಕ್ಕ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಇದೊಂದು ಏರಿಳಿತಗಳಿಂದ ಕೂಡಿದ್ದ ಅದ್ಭುತ ಪ್ರಯಾಣವಾಗಿತ್ತು” ಎಂದು ರಾಬಿನ್ ಉತ್ತಪ್ಪ ವಿದಾಯದ ಸಂದೇಶ ಬರೆದಿದ್ದಾರೆ.

ಕಳೆದೆರಡು ಐಪಿಎಲ್ ಟೂರ್ನಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ರಾಬಿನ್ ಉತ್ತಪ್ಪ, 2021ರಲ್ಲಿ ಚೆನ್ನೈ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಇನ್ನು ಮುಂದೆ ಐಪಿಎಲ್’ನಲ್ಲಿ ಉತ್ತಪ್ಪ ಕಾಣಿಸಿಕೊಳ್ಳುವುದಿಲ್ಲ.

ನಮ್ಮ ಉತ್ತಪ್ಪನ ಆಟವನ್ನು ಮಿಸ್ ಮಾಡಿಕೊಳ್ಳುತ್ತೇವಲ್ಲಾ ಎಂಬ ನಿರಾಸೆಯಲ್ಲಿದ್ದ ಕೊಡಗಿನ ವೀರನ ಅಭಿಮಾನಿಗಳಿಗೆ ಕೊಂಚ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ಹೊರ ಬಿದ್ದಿದೆ. ರಾಬಿನ್ ಉತ್ತಪ್ಪ ವಿದೇಶೀ ಟಿ20 ಲೀಗ್’ಗಳಲ್ಲಿ ಆಡುವ ಸಾಧ್ಯತೆಗಳಿವೆ. ಈಗಾಗಲೇ ತಾವು ಕೊನೆಯ ಬಾರಿ ಪ್ರತಿನಿಧಿಸಿರುವ ಕೇರಳ ಕ್ರಿಕೆಟ್ ಸಂಸ್ಥೆಯಿಂದ ನಿರಕ್ಷೇಪಣಾ ಪತ್ರ (No Objection Certificate – NOC) ಪಡೆದುಕೊಂಡಿರುವ ಉತ್ತಪ್ಪ, ವಿದೇಶಿ ಟಿ20 ಲೀಗ್’ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಬಿಸಿಸಿಐನೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡರೆ ಮಾತ್ರ ಭಾರತೀಯ ಆಟಗಾರರು ವಿದೇಶಿ ಲೀಗ್’ಗಳಲ್ಲಿ ಆಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಬಿನ್ ಉತ್ತಪ್ಪ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆಷ್ಟೇ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ಸುರೇಶ್ ರೈನಾ, ವಿದೇಶೀ ಲೀಗ್’ಗಳಲ್ಲಿ ಆಡಲೆಂದೇ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಇದೀಗ ರಾಬಿನ್ ಉತ್ತಪ್ಪ ಸರದಿ.

ಇದನ್ನೂ ಓದಿ : Robin Uthappa: ಕಾರ್‌ನಲ್ಲೇ ನಿದ್ದೆ, ಆತ್ಮಹತ್ಯೆಯ ಯೋಚನೆ.. ಗೊತ್ತಾ ಕೊಡಗಿನ ಕುವರ ರಾಬಿನ್ ಉತ್ತಪ್ಪನ ಕಣ್ಣೀರ ಕಥೆ ?

ಇದನ್ನೂ ಓದಿ : Virat Kohli retire : ಐಸಿಸಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ?

Good news for Robin Uthappa fans Even though he retires, will play again

Comments are closed.