ICC New Rules in Cricket : ಅಕ್ಟೋಬರ್ 1ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 8 ಹೊಸ ನಿಯಮ ; ಏನೆಲ್ಲಾ ಬದಲಾವಣೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ದುಬೈ: ಟಿ20 ವಿಶ್ವಕಪ್’ಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಐಸಿಸಿ 8 ಹೊಸ ನಿಯಮಗಳನ್ನು(ICC New Rules in Cricket ) ಜಾರಿಗೆ ತಂದಿದ್ದು, ಈ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಬದಲಾದ ಹೊಸ ನಿಯಮಗಳ ಅಡಿಯಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council – ICC) ಬದಲಿಸಿರುವ 8 ನಿಯಮಗಳಲ್ಲಿ “ಮಂಕಡ್ ರನೌಟ್” ಕೂಡ ಸೇರಿದೆ. ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ಗೆ ಅನ್ವಯವಾಗುವಂತೆ ನಿಯಮಗಳನ್ನು ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ.

ಐಸಿಸಿ ಬದಲಿಸಿದ 8 ಪ್ರಮುಖ ನಿಯಮಗಳು (ICC New Rules in Cricket )

  1. ಕ್ಯಾಚ್ ಔಟ್ ಆದರೆ ಹೊಸ ಬ್ಯಾಟ್ಸ್’ಮನ್ ಸ್ಟ್ರೈಕ್:
    ಐಸಿಸಿಯ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕ್ಯಾಚ್ ಔಟಾದಾಗ ಕ್ರೀಸ್’ಗೆ ಬರುವ ಹೊಸ ಬ್ಯಾಟ್ಸ್’ಮನ್ ಸ್ಟ್ರೈಕ್ ತೆಗೆದು ಕೊಳ್ಳಬೇಕಾಗುತ್ತದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಈ ನಿಯಮವನ್ನ ಜಾರಿಗೆ ತರಲಾಗಿತ್ತು. ಈ ಹಿಂದಿನ ನಿಯಮದ ಪ್ರಕಾರ ಬ್ಯಾಟ್ಸ್’ಮನ್ ಕ್ಯಾಚ್ ಔಟಾದಾಗ ಫೀಲ್ಡರ್ ಕ್ಯಾಚ್ ಪಡೆಯುವ ಮೊದಲೇ ನಾನ್’ಸ್ಟ್ರೈಕರ್ ಬ್ಯಾಟಿಂಗ್ ತುದಿಯನ್ನು ತಲುಪಿದ್ದರೆ, ಮುಂದಿನ ಎಸೆತವನ್ನು ಆತನೇ ಎದುರಿಸುವ ಅವಕಾಶವಿತ್ತು. ಆದರೆ ಇನ್ನು ಮುಂದೆ ಹೊಸ ಬ್ಯಾಟ್ಸ್’ಮನ್ ಮುಂದಿನ ಎಸೆತವನ್ನು ಎದುರಿಸಬೇಕು.
  2. ಎಂಜಲು ಬಳಕೆ ಬ್ಯಾನ್ :
    ಕೋವಿಡ್-19 ಹಿನ್ನೆಲೆಯಲ್ಲಿ ಬೌಲರ್’ಗಳು ಮತ್ತು ಫೀಲ್ಡರ್’ಗಳು ಚೆಂಡಿಗೆ ಎಂಜಲು ಬಳಸುವುದನ್ನು ಕಳೆದೆರಡು ವರ್ಷಗಳಿಂದ ನಿಷೇಧೇಸಲಾಗಿತ್ತು. ಈ ನಿಯಮವನ್ನು ಐಸಿಸಿ ಶಾಶ್ವತವಾಗಿ ಮುಂದುವರಿಸಲು ನಿರ್ಧರಿಸಿದೆ.
  3. ಮಂಕಡ್ ರನೌಟ್:
    ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಇನ್ನು ಮುಂದೆ ಮಂಕಡ್ ರನೌಟ್ ನಿಯಮ ಇರುವುದಿಲ್ಲ. ಇನ್ನು ಮುಂದೆ ಮಂಕಡ್ ರನೌಟ್ ಅನ್ನು “ರನೌಟ್” ಎಂದೇ ಪರಿಗಣಿಸಲಾಗುತ್ತದೆ. ಬೌಲರ್ ಚೆಂಡೆಸೆಯುವ ಮೊದಲೇ ನಾನ್’ಸ್ಟ್ರೈಕ್ ಬ್ಯಾಟ್ಸ್’ಮನ್ ಕ್ರೀಸ್ ಬಿಟ್ಟಿದ್ದರೆ ಆತನನ್ನು ರನೌಟ್ ಮಾಡಬಹುದು.
  4. ಬ್ಯಾಟ್ಸ್’ಮನ್’ಗೆ 2 ನಿಮಿಷ ಸಮಯಾವಕಾಶ:
    ಹೊಸ ಬ್ಯಾಟ್ಸ್’ಮನ್ ಕ್ರೀಸ್’ಗೆ ಬಂದು 2 ನಿಮಿಷಗಳಲ್ಲಿ ಬ್ಯಾಟಿಂಗ್’ಗೆ ರೆಡಿಯಾಗಬೇಕಾಗುತ್ತದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ ಈ ಹಿಂದೆ ಹೊಸ ಬ್ಯಾಟ್ಸ್’ಮನ್’ಗೆ 3 ನಿಮಿಷಗಳ ಕಾಲಾವಕಾಶವಿತ್ತು. ಅದನ್ನು 2 ನಿಮಿಷಗಳಿಗೆ ಇಳಿಸಲಾಗಿದೆ. ಟಿ20 ಕ್ರಿಕೆಟ್’ನಲ್ಲಿ ಒಂದೂವರೆ ನಿಮಿಷಗಳ ಕಾಲಾವಕಾಶವಿದೆ. ಈ ಅವಧಿಯೊಳಗೆ ಬ್ಯಾಟ್ಸ್’ಮನ್ ರೆಡಿಯಾಗದೇ ಇದ್ದರೆ ಆತನನ್ನು ಔಟ್ ಎಂದು ಪರಿಗಣಿಸಬಹುದು.
  5. ಫೀಲ್ಡರ್ ಚಲನಾ ನಿಯಮ:
    ಬೌಲರ್ ತನ್ನ ಬೌಲಿಂಗ್ ರನ್-ಅಪ್’ನಲ್ಲಿದ್ದಾಗ ಫೀಲ್ಡರ್ ತನ್ನ ಸ್ಥಾನ ಬದಲಿಸಿ ಚಲಿಸುವಂತಿಲ್ಲ. ಒಂದು ವೇಳೆ ಫೀಲ್ಡರ್ ಒಬ್ಬ ಅಂತಹ ತಪ್ಪು ಮಾಡಿದರೆ ಬ್ಯಾಟಿಂಗ್ ತಂಡಕ್ಕೆ ಐದು ರನ್’ಗಳನ್ನು ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ಫೀಲ್ಡ್ ಅಂಪೈರ್ ಬೌಲಿಂಗ್ ತಂಡಕ್ಕೆ 5 ರನ್’ಗಳ ಪೆನಾಲ್ಟಿ ಶಿಕ್ಷೆಯನ್ನು ನೀಡಬಹುದು. ಇದಕ್ಕೂ ಮುಂಚೆ ಇಂತಹ ಘಟನೆಗಳು ನಡೆದರೆ ಆ ಎಸೆತವನ್ನು “ಡೆಡ್ ಬಾಲ್” ಎಂದು ಪರಿಗಣಿಸಲಾಗುತ್ತಿತ್ತು.
  6. ಬ್ಯಾಟ್ಸ್’ಮನ್ ಪಿಚ್’ನಲ್ಲೇ ಇರಬೇಕು:
    ಮತ್ತೊಂದು ಹೊಸ ನಿಯಮದ ಪ್ರಕಾರ ಬ್ಯಾಟ್ಸ್’ಮನ್ ಪಿಚ್ ಒಳಗೆ ಇದ್ದಾಗಲೇ ಹೊಡೆತವನ್ನು (ಶಾಟ್) ಬಾರಿಸಬೇಕು. ಒಂದು ವೇಳೆ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ದೇಹ ಪಿಚ್’ನಿಂದ ಹೊರಗೆ ಇದ್ದರೆ ಅದನ್ನು ರನ್ ಎಂದು ಪರಿಗಣಿಸಲಾಗುವುದಿಲ್ಲ. ಆ ಎಸೆತವನ್ನು “ಡೆಡ್ ಬಾಲ್” ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಪಿಚ್’ನಿಂದ ಹೊರ ಹೋಗುವ ಎಸೆತಗಳನ್ನು ಬೆನ್ನಟ್ಟಿ ಬಾರಿಸುವ ಅವಕಾಶವಿರುವುದಿಲ್ಲ.
  7. ಸ್ಲೋ ಓವರ್ ರೇಟ್ ರೂಲ್ಸ್:
    ಐಸಿಸಿಯ ಹೊಸ ನಿಯಮದ ಪ್ರಕಾರ ಬೌಲಿಂಗ್ ತಂಡ ನಿಗದಿತ ಸಮಯದಲ್ಲಿ ನಿಗದಿತ ಓವರ್’ಗಳನ್ನು ಮುಗಿಸಬೇಕು. ಒಂದು ವೇಳೆ ತಡವಾದರೆ ಬೌಂಡರಿ ಲೈನ್’ನಿಂದ ಒಬ್ಬ ಆಟಗಾರನ್ನು 30 ಯಾರ್ಡ್ ಸರ್ಕಲ್ ಒಳಗೆ ನಿಲ್ಲಿಸಬೇಕಾಗುತ್ತದೆ. ಟಿ20 ಕ್ರಿಕೆಟ್’ನಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ನಿಯಮ, ಇನ್ನು ಮುಂದೆ ಏಕದಿನ ಕ್ರಿಕೆಟ್’ಗೂ ಅನ್ವಯಿಸಲಿದೆ.
  8. ಸ್ಟ್ರೈಕ್ ಬ್ಯಾಟ್ಸ್’ಮನ್ ರನೌಟ್ ನಿಯಮ:
    ಬೌಲರ್ ಚೆಂಡನ್ನೆಸೆಯುವ ಮುನ್ನ ಸ್ಟ್ರೈಕ್ ಬ್ಯಾಟ್ಸ್’ಮನ್ ಕ್ರೀಸ್ ಬಿಟ್ಟು ಮುಂದೆ ಬಂದರೆ, ಆತನನ್ನು ನೇರವಾಗಿ ರನೌಟ್ ಮಾಡಲು ಬೌಲರ್’ಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಬೌಲರ್ ಚೆಂಡೆಸೆಯುವ ಮೊದಲೇ ಬ್ಯಾಟ್ಸ್’ಮನ್ ಕ್ರೀಸ್ ಬಿಟ್ಟು ಮುಂದೆ ಬಂತು ನಿಂತಿದ್ದರೆ, ಆಗ ಬೌಲರ್ ಚೆಂಡೆಸೆಯದೆ ಚೆಂಡನ್ನು ನೇರವಾಗಿ ವಿಕೆಟ್’ಗೆ ಎಸೆದು ಅಥವಾ ವಿಕೆಟ್ ಕೀಪರ್’ಗೆ ಎಸೆದು ರನೌಟ್ ಮಾಡುವ ಅವಕಾಶ ಇರುವುದಿಲ್ಲ. ಅಂತಹ ಸಮಯದಲ್ಲಿ ಆ ಎಸೆತವನ್ನು”ಡೆಡ್ ಬಾಲ್” ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : Yuvraj Singh SIX 6S : ಯುವಿ 6 ಸಿಕ್ಸರ್‌ಗಳ ವಿಶ್ವ ವಿಕ್ರಮಕ್ಕೆ ತುಂಬಿತು 15 ವರ್ಷ; ಮಗನ ಜೊತೆ ಕೂತು ಹೈಲೈಟ್ಸ್ ವೀಕ್ಷಿಸಿದ ಸಿಕ್ಸರ್ ಕಿಂಗ್

ಇದನ್ನೂ ಓದಿ : ಆಸೀಸ್ ವಿರುದ್ಧದ ಟಿ20 ಸರಣಿ: ಭಾರತ ತಂಡಕ್ಕೆ ಸಿಕ್ಕ ಹೊಸ ಬೌಲರ್; ಹೆಸರು ಕೇಳಿದ್ರೆ ಗಾಬರಿಯಾಗ್ತೀರಿ

ICC New Rules in Cricket 8 new rules Implement in October 1st

Comments are closed.