Virat Kohli : ಕ್ರಿಕೆಟ್ ದೇವರ 100 ಶತಕಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರೆ ವಿರಾಟ್ “ಕಿಂಗ್” ಕೊಹ್ಲಿ

ಮುಂಬೈ: (Virat Kohli world record) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಶತಕಗಳನ್ನು ಬಾರಿಸಿ ವಿಶ್ವದಾಖಲೆ ಬರೆದ ಜಗತ್ತಿನ ಏಕೈಕ ಆಟಗಾರ ಕ್ರಿಕೆಟ್ ದೇವರು ಬಿರುದಾಂಕಿತ ಸಚಿನ್ ತೆಂಡೂಲ್ಕರ್ (Sachin Tendulkar). 24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಒಟ್ಟು 782 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಟೆಸ್ಟ್’ನಲ್ಲಿ 51 ಶತಕ ಹಾಗೂ ಏಕದಿನ ಕ್ರಿಕೆಟ್’ನಲ್ಲಿ 49 ಶತಕಗಳು ಸೇರಿವೆ. ಕ್ರಿಕೆಟ್ ದೇವರ 100 ಶತಕಗಳ ವಿಶ್ವದಾಖಲೆಯನ್ನು ಪುಡಿಗಟ್ಟುವ ಸಾಮರ್ಥ್ಯವಿದ್ದರೆ ಅದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಮಾತ್ರ. ಕೊಹ್ಲಿ ಈಗಾಗ್ಲೇ 71 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಆದರೆ 71ನೇ ಶತಕಕ್ಕೆ ವಿರಾಟ್ ಕೊಹ್ಲಿ 34 ತಿಂಗಳುಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಕೊಹ್ಲಿ 100 ಶತಕದ ವಿಶ್ವದಾಖಲೆ ಪುಡಿಗಟ್ಟುವ ಬಗ್ಗೆ ಕ್ರಿಕೆಟ್ ಪ್ರಿಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ನಾಯಕ ರಿಕಿ ಪಾಂಟಿಂಗ್ (Ricky Ponting) ಅವರಿಗೆ ಕೊಹ್ಲಿ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಸಚಿನ್ ಅವರ ವಿಶ್ವದಾಖಲೆಯನ್ನು ವಿರಾಟ್ ಕೊಹ್ಲಿ ಪುಡಿಗಟ್ಟಿದ್ರೂ ಅಚ್ಚರಿಯಿಲ್ಲ ಎಂದಿದ್ದಾರೆ ಪಾಂಟಿಂಗ್.

“ವಿರಾಟ್ ಕೊಹ್ಲಿ ವಿಚಾರದಲ್ಲಿ ನಾನು ಇಂಥದ್ದು ಸಾಧ್ಯವಿಲ್ಲ ಎಂದು ಹೇಳಲಾರೆ. ಒಮ್ಮೆ ಕೊಹ್ಲಿ ಲಯಕ್ಕೆ ಮರಳಿದ ನಂತರ, ಆತನ ರನ್ ಹಸಿವು ಮತ್ತು ಯಶಸ್ಸಿಗಾಗಿ ತುಡಿಯುವ ವ್ಯಕ್ತಿತ್ವ ಎಂಥದ್ದು ಎಂಬುದು ಎಲ್ಲರೂ ಗೊತ್ತಿರುವ ಸಂಗತಿ. ಇನ್ನೂ 30 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸುವುದು ಸುಲಭವಲ್ಲ. ಆದರೆ ವಿರಾಟ್ ಕೊಹ್ಲಿಗೆ ಅದು ಸಾಧ್ಯವಲ್ಲ. ಇನ್ನೂ ಸಾಕಷ್ಟು ವರ್ಷಗಳ ಕ್ರಿಕೆಟ್ ಆಡುವ ಸಾಮರ್ಥ್ಯ ಅವರಲ್ಲಿದೆ. ಮುಂದಿನ 3-4 ವರ್ಷಗಳಲ್ಲಿ ಪ್ರತೀ ವರ್ಷ 5ರಿಂದ 6 ಟೆಸ್ಟ್ ಶತಕಗಳು, ಇದರ ಮಧ್ಯೆ ಒಂದೆರಡು ಏಕದಿನ ಅಥವಾ ಟಿ20 ಶತಕಗಳನ್ನು ಬಾರಿಸಿದರೆ ವಿರಾಟ್ ಕೊಹ್ಲಿ ಖಂಡಿತಾ 100 ಶತಕಗಳ ಗಡಿ ಮುಟ್ಟಲಿದ್ದಾರೆ”.

  • ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ.

ಕಳೆದ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರವನ್ನು ನೀಗಿಸಿಕೊಂಡಿದ್ದರು. 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದ ಕೊಹ್ಲಿ, ಅತೀ ಹೆಚ್ಚು ಶತಕ ಬಾರಿಸಿದವರ ಸಾಲಿನಲ್ಲಿ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳು (ಟಾಪ್ 10)

100: ಸಚಿನ್ ತೆಂಡೂಲ್ಕರ್ (ಭಾರತ), 782 ಇನ್ನಿಂಗ್ಸ್
71: ವಿರಾಟ್ ಕೊಹ್ಲಿ (ಭಾರತ), 522 ಇನ್ನಿಂಗ್ಸ್.
71: ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), 668 ಇನ್ನಿಂಗ್ಸ್
63: ಕುಮಾರ ಸಂಗಕ್ಕಾರ (ಶ್ರೀಲಂಕಾ), 666 ಇನ್ನಿಂಗ್ಸ್
62: ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ), 617 ಇನ್ನಿಂಗ್ಸ್
55: ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ), 437 ಇನ್ನಿಂಗ್ಸ್
54: ಮಹೇಲ ಜಯವರ್ಧನೆ (ಶ್ರೀಲಂಕಾ), 725 ಇನ್ನಿಂಗ್ಸ್
53: ಬ್ರಯಾನ್ ಲಾರಾ (ವೆಸ್ಟ್ ಇಂಡೀಸ್), 521 ಇನ್ನಿಂಗ್ಸ್
48: ರಾಹುಲ್ ದ್ರಾವಿಡ್ (ಭಾರತ), 605 ಇನ್ನಿಂಗ್ಸ್
47: ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), 484 ಇನ್ನಿಂಗ್ಸ್

ಅತೀ ವೇಗವಾಗಿ 71 ಅಂತಾರಾಷ್ಟ್ರೀಯ ಶತಕ (Virat Kohli Vs Sachin Tendulkar)
ವಿರಾಟ್ ಕೊಹ್ಲಿ: 522 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್: 523 ಇನ್ನಿಂಗ್ಸ್
ರಿಕಿ ಪಾಂಟಿಂಗ್: 652 ಇನ್ನಿಂಗ್ಸ್

ಇದನ್ನೂ ಓದಿ : ICC New Rules in Cricket : ಅಕ್ಟೋಬರ್ 1ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 8 ಹೊಸ ನಿಯಮ ; ಏನೆಲ್ಲಾ ಬದಲಾವಣೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Yuvraj Singh SIX 6S : ಯುವಿ 6 ಸಿಕ್ಸರ್‌ಗಳ ವಿಶ್ವ ವಿಕ್ರಮಕ್ಕೆ ತುಂಬಿತು 15 ವರ್ಷ; ಮಗನ ಜೊತೆ ಕೂತು ಹೈಲೈಟ್ಸ್ ವೀಕ್ಷಿಸಿದ ಸಿಕ್ಸರ್ ಕಿಂಗ್

Virat Kohli break world record of 100 centuries of Sachin Tendulkar

Comments are closed.