Raghavendra Divgi life story : ಭಾರತ ವಿಶ್ವಕಪ್ ತಂಡದಲ್ಲಿರುವ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರ ಮನಮಿಡಿಯುವ ಕಥೆ

ಬೆಂಗಳೂರು: ಜೀವನದಲ್ಲಿ ನೀವು ನಿಮ್ಮ ಕೆಲಸದ ಬಗ್ಗೆ ಶ್ರದ್ಧೆಯನ್ನು ತೋರಿಸಿದರೆ, ಅದು ನಿಮಗೆ ಸರಿಯಾದ ದಿಕ್ಕನ್ನೇ ತೋರಿಸುತ್ತದೆ. ನಿಮಗೆ ಜೀವನದಲ್ಲಿ ಸ್ಫೂರ್ತಿ ಬೇಕಾದರೆ, 37 ವರ್ಷದ ರಾಘವೇಂದ್ರ ಡ್ವಿಗಿ (Raghavendra Divgi life story) ಅವರ ಜೀವನಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿಲ್ಲ. ಕುಮಟಾ ತಾಲ್ಲೂಕಿನ ವಿವೇಕ್ ನಗರ ಮೂಲದ ಈ ಯುವಕ ತನ್ನ ಗುರಿ ಸಾಧಿಸುವವರೆಗೆ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದ್ಧಾರೆ. ತಿನ್ನಲು ಅನ್ನವಿಲ್ಲದೆ ಖಾಲಿ ಹೊಟ್ಟೆಯಲ್ಲಿ ದಿನಗಳನ್ನೂ ಕಳೆದಿದ್ದಾರೆ, ಸ್ಮಶಾನದಲ್ಲಿ ಮಲಗಿದ್ದಾರೆ. ಕುಮಟಾದಿಂದ ಮುಂಬಯಿ-ಕಾರವಾರ-ಹುಬ್ಬಳ್ಳಿ-ಬೆಂಗಳೂರು. ಬೆಂಗಳೂರಿನಿಂದ ಟೀಮ್ ಇಂಡಿಯಾಗೆ ರಘು ತಲುಪಿದ್ದೇ ಒಂದು ರೋಚಕ ಕಥೆ.

ಬಾಂಗ್ಲಾದೇಶ ವಿರುದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ 5 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ಮಳೆಯಿಂದ ತೊಂದರೆಗೊಳಗಾದ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು ರಘು ಕೂಡ ಕಾರಣರಾಗಿದ್ದರು. ಮೈದಾನ ಒದ್ದೆಯಾಗಿದ್ದಾಗ ಆಟಗಾರರು ಜಾರಿ ಬೀಳದಂತೆ ತಡೆಯಲು ರಘು ಹರಸಾಹಸವನ್ನೇ ಪಟ್ಟಿದ್ದರು. ಕೈಯಲ್ಲಿ ಬ್ರಷ್ ಹಿಡಿದು ಬೌಂಡರಿ ಗೆರೆಯ ಸುತ್ತ ಓಡಾಡುತ್ತಾ ಆಟಗಾರರ ಶೂ ಕೆಳಗೆ ಅಂಟಿದ್ದ ಮಣ್ಣನ್ನು ತೆಗೆಯುತ್ತಾ ಆಟಗಾರರಿಗೆ ನೆರವಾಗಿದ್ದರು. ಹಾಗ್ ನೋಡಿದ್ರೆ ಇದು ರಾಘವೇಂದ್ರ ಅವರ ಕೆಲಸ ಅಲ್ಲ. ತಂಡದಲ್ಲಿ ಅವರ ಜವಾಬ್ದಾರಿ ಥ್ರೊಡೌನ್ ಸ್ಪೆಷಲಿಸ್ಟ್. ಅಂದ್ರೆ ಸೈಡ್ ಆರ್ಮ್ ಮೂಲಕ ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡೆಸೆದು ನೆಟ್ಸ್’ನಲ್ಲಿ ಆಟಗಾರರ ಅಭ್ಯಾಸಕ್ಕೆ ನೆರವಾಗುವುದು. ಆದರೆ ತಂಡಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡಿರುವ ರಾಘವೇಂದ್ರ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೈಯಲ್ಲಿ ಬ್ರಷ್ ಹಿಡಿದು ಟೀಮ್ ಇಂಡಿಯಾ ಆಟಗಾರರ ಶೂ ಕ್ರೀನ್ ಮಾಡಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಒಂದು ಸಣ್ಣ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುವುದು ರಾಘವೇಂದ್ರ ಅವರ ವಿಶೇಷತೆ. ಇದನ್ನೆಲ್ಲಾ ಮಾಡಲು ರಘು ಯಾವತ್ತೂ ಹಿಂದೆ ಮುಂದೆ ನೋಡಿದವರೇ ಇಲ್ಲ. ಯಾಕಂದ್ರೆ ಜೀವನದಲ್ಲಿ ಅವರು ಎಂತೆಂಥದ್ದೋ ಕಷ್ಟಗಳನ್ನು ಅನುಭವಿಸಿ ಬಂದಿದ್ದಾರೆ. ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಹೇಳುವ ಪ್ರಕಾರ ರಾಘವೇಂದ್ರ ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞ. ರಘು ಇಲ್ಲದೆ ಭಾರತ ತಂಡವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಪ್ರತಿಯೊಬ್ಬರೂ ರಘು ಅವರ ಬಗ್ಗೆ ತುಂಬು ಹೃದಯದಿಂದ ಮಾತನಾಡುತ್ತಾರೆ, ಹೆಮ್ಮೆ ಪಡುತ್ತಾರೆ. ಅವರು ‘ಮೆನ್ ಇನ್ ಬ್ಲೂ’ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯನಷ್ಟೇ ಅಲ್ಲ, ಭಾರತ ತಂಡದ ಅವಿಭಾಜ್ಯ ಅಂಗವೂ ಹೌದು. ಇದು ದಿನ ಬೆಳಗಾಗುವಷ್ಟರಲ್ಲಿ ಸಿಕ್ಕ ಯಶಸ್ಸಲ್ಲ, ಇದಕ್ಕಾಗಿ ರಘು ಬರೀ ಬೆವರನ್ನಲ್ಲ, ರಕ್ತವನ್ನೇ ಬಸಿದಿದ್ದಾರೆ, ಹಸಿದ ಹೊಟ್ಟೆಯಲ್ಲಿ ದಿನಗಟ್ಟಲೆ ಮಲಗಿದ್ದಾರೆ, ಜೀವನವೇ ಸಾಕು ಎನ್ನುವಂತಹ ಕಷ್ಟಗಳನ್ನು ಎದುರಿಸಿದ್ದಾರೆ.

ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಮಲಗಿದ್ದರು ರಘು
ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ರಾಘವೇಂದ್ರ ಕ್ರಿಕೆಟ್ ಆಡುವ ಗುರಿಯೊಂದಿಗೆ 22 ವರ್ಷಗಳ ಹಿಂದೆ ಕುಮಟಾದಿಂದ ಹುಬ್ಬಳ್ಳಿಗೆ ಬರ್ತಾರೆ. ಆಗ ಅವರ ಬಳಿ ಇದ್ದದ್ದು ಕೇವಲ 21 ರೂಪಾಯಿ. ಹುಬ್ಬಳ್ಳಿಯಲ್ಲಿ ವಾಸಿಸಲು ಸ್ಥಳ ಕೂಡ ಇರಲಿಲ್ಲ. ಸುಮಾರು ಒಂದು ವಾರ ರಘು ಹುಬ್ಬಳ್ಳಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಲಗ್ತಾರೆ. ಅಲ್ಲಿಂದ ಪೊಲೀಸರು ಓಡಿಸಿದಾಗ, ಮುಂದೆ ಎರಡು ವಾರಗಳ ಕಾಲ ಹನುಮಾನ್ ದೇವಸ್ಥಾನದಲ್ಲಿ ಮಲಗ್ತಾರೆ. ಅಲ್ಲಿಂದಲೂ ಹೊರಹಾಕಿದಾಗ ಹುಬ್ಬಳ್ಳಿಯ ಈಗಿನ ರಾಜನಗರ ಕ್ರಿಕೆಟ್ ಮೈದಾನದ ಬಳಿಯಿರುವ ಸ್ಮಶಾನವೇ ರಾಘವೇಂದ್ರ ಅವರಿಗೆ ಮನೆಯಾಗಿ ಬಿಟ್ಟಿತ್ತು. ಒಂದಲ್ಲ, ಎರಡಲ್ಲ, ನಾಲ್ಕೂವರೆ ವರ್ಷಗಳ ಕಾಲ ಸ್ಮಶಾನದಲ್ಲೇ ಮಲಗಿದ್ರು ರಘು. ಸ್ಮಶಾನದಲ್ಲಿ ಕ್ರಿಕೆಟ್ ಮ್ಯಾಟೇ ಹಾಸಿಗೆ, ಅದೇ ಹೊದಿಕೆ.

ಕೈಗೆ ಗಾಯ, ಕ್ರಿಕೆಟಿಗನಾಗುವ ಕನಸು ಛಿದ್ರ
ಧಾರವಾಡ ವಲಯ ತಂಡ ತಂಡದ ಪರ ಆಡುತ್ತಿದ್ದ ರಾಘವೇಂದ್ರ, ಕಟ್ಟಡವೊಂದ ಮೆಟ್ಟಿಲ ಮೇಲಿಂದ ಬಿದ್ದು ಕೈಗೆ ಗಾಯ ಮಾಡಿಕೊಳ್ತಾರೆ. ಆಫ್ ಸ್ಪಿನ್ನರ್ ಆಗಿದ್ದ ರಘು ಅವರ ಬಲಗೈಗೆ ತುಂಬಾ ಪೆಟ್ಟಾಗಿ ಬಿಡತ್ತೆ. ಅಲ್ಲಿಗೆ ಕ್ರಿಕೆಟ್ ಆಡುವ ಕನಸು ಭಗ್ನವಾಗಿ ಬಿಟ್ಟಿತ್ತು. ನಂತರ ಸ್ಥಳೀಯ ಕ್ರಿಕೆಟ್ ಆಟಗಾರರ ನೆರವಿನಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದ ರಘು, ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಸಂಸ್ಥೆಗೆ ಸೇರಿಕೊಳ್ತಾರೆ. ಕೆಐಒಸಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಹಾಯ ಮಾಡ್ತಾರೆ. ಅಲ್ಲಿಂದ ಜಾವಗಲ್ ಶ್ರೀನಾಥ್ ಕಣ್ಣಿಗೆ ಬಿದ್ದ ರಘು ಮುಂದೆ ಕರ್ನಾಟಕ ತಂಡದ ಸಹಾಯಕ ಸಿಬ್ಬಂದಿಗೆ ಸೇರಿಕೊಳ್ತಾರೆ. ನೆನಪಿರ್ಲಿ, ಅದು ಸಂಬಳವಿಲ್ಲದ ಕೆಲಸ. ಆ ದಿನಗಳಲ್ಲಿ ರಘು ಎಷ್ಟೋ ದಿನಗಳ ಕಾಲ ನೀರು ಕುಡಿದು ಮಲಗಿದ ದಿನಗಳೂ ಇವೆ. ಬಾಳೆಹಣ್ಣು ತಿಂದು ರಾತ್ರಿ ಕಳೆದದ್ದೂ ಇದೆ.

ಕ್ರಿಕೆಟಿಗರು, ತರಬೇತುದಾರರು ಅವರಿಗೆ ಹಣವನ್ನು ನೀಡುವ ಅವಕಾಶಗಳನ್ನು ಕೊಟ್ಟಾಗ, ರಘು ಒಂದೇ ಒಂದು ಪೈಸಾವನ್ನು ಸಹ ಸ್ವೀಕರಿಸದೆ ನಿರಾಕರಿಸಿರುವ ಹಲವಾರು ಉದಾಹರಣೆಗಳಿವೆ. ಅವರ ಜೇಬು ಖಾಲಿಯಾಗಿದ್ದರೂ, ಎಂದಿಗೂ ತಮ್ಮ ಪ್ರಾಮಾಣಿಕತೆಯಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಯಾರ ಮುಂದೆ ಕೈಯೊಡ್ಡಲಿಲ್ಲ. ಯಾವ ನಿರೀಕ್ಷೆಯನ್ನೂ ಬಯಸದೆ ಸೇವೆ ಸಲ್ಲಿಸುವುದಷ್ಟೇ ಅವರ ಧ್ಯೇಯವಾಗಿತ್ತು. ಎಲ್ಲೋ ಇದ್ದ ರಘು ಅವರನ್ನು ಮತ್ತೆಲ್ಲಿಗೋ ಮುಟ್ಟಿಸಿ, ಇಂದು ಜಗತ್ತಿನ ಶ್ರೇಷ್ಠ ಕ್ರಿಕೆಟಿಗರೇ ಮೆಚ್ಚುವಂತಾಗಿದ್ದಕ್ಕೆ ಕಾರಣ ಪರಿಶ್ರಮ, ಪ್ರಾಮಾಣಿಕತೆ, ಸಂಯಮ, ದೃಢತೆ, ಬದ್ಧತೆ, ಗುರಿ ಮುಟ್ಟುವ ಛಲ, ಆ ಹಾದಿಯಲ್ಲಿ ನಿರಂತರ ತಪಸ್ಸು.

KSCAನಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಸೇರಿದ ರಘು ಅಲ್ಲೂ ನಾಲ್ಕೈದು ವರ್ಷಗಳ ಕಾಲ ಅನಧಿಕೃತ ಸಿಬ್ಬಂದಿಯಾಗಿ ಕೆಲಸ ಮಾಡ್ತಾರೆ. ನಂತ್ರ ಬಿಸಿಸಿಐ Level -1 ಕೋಚಿಂಗ್ ಕೋರ್ಸ್ ಕಂಪ್ಲೀಟ್ ಮಾಡಿ ಅಧಿಕೃತವಾಗಿ NCA ಸಿಬ್ಬಂದಿಯಾಗಿ ನೇಮಕಗೊಳ್ತಾರೆ. 2011ರಲ್ಲಿ ಭಾರತ ತಂಡಕ್ಕೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸೇರಿದ ರಘು, ಅಂದಿನಿಂದ ಇಂದಿನವರೆಗೆ ತಂಡದ ಯಶಸ್ಸಿನ ಶಕ್ತಿಯಾಗಿ ನಿಂತಿದ್ದಾರೆ. ಆಟಗಾರರಿಗೆ ನೆಟ್ಸ್’ನಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಸೈಡ್ ಆರ್ಮ್ ಮೂಲಕ ಚೆಂಡೆಸೆಯುವ ರಘು, ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳಿಗೆ ಗುಣಮಟ್ಟದ ಅಭ್ಯಾಸವನ್ನು ಒದಗಿಸುತ್ತಾ ಬಂದಿದ್ದಾರೆ.

ಮೂರು ಗಂಟೆಗಳ ತರಬೇತಿ ಅವಧಿಯಲ್ಲಿ ರಘು ಸುಮಾರು 1,000 ಎಸೆತಗಳನ್ನು ಎಸೆಯುತ್ತಾರೆ. ಅವರ ಎಸೆತಗಳು ಸತತವಾಗಿ 145+ ಕಿಲೋ ಮೀಟರ್ ವೇಗವನ್ನು ಮುಟ್ಟುತ್ತವೆ. ರಘು ಅವರು ಒದಗಿಸುವ ವಿಶ್ವಶ್ರೇಷ್ಠ ಗುಣಮಟ್ಟದ ಅಭ್ಯಾಸದ ಪರಿಣಾಮ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಜಗತ್ತಿನ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವಂತಾಗಿದೆ. ಇದನ್ನು ಕೊಹ್ಲಿ ಸಹಿತ ಟೀಂ ಇಂಡಿಯಾ ಆಟಗಾರರೇ ಸಾಕಷ್ಟು ಬಾರಿ ಹೇಳಿದ್ದಾರೆ.

ಇದನ್ನೂ ಓದಿ : India Vs Bangladesh: ಭಾರತದ ಗೆಲುವಿಗೆ ಕನ್ನಡಿಗನ ಕಿರು ಕಾಣಿಕೆ, ಬಾಂಗ್ಲಾ ವಿರುದ್ಧದ ಗೆಲುವಿನ ಹಿಂದೆ ‘ಬ್ರಷ್’ ಮಹಿಮೆ

ಇದನ್ನೂ ಓದಿ : Kannada Rojyotsava : ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಆರ್‌ಸಿಬಿ, ಬೆಂಗಳೂರು ಬುಲ್ಸ್

India Cricket Team Throwdown Specialist Raghavendra Divgi life story

Comments are closed.