Ishan Kishan – Virat Kohli : ಕೊಹ್ಲಿ ಕೃಪೆಯಿಂದ ಟೆಸ್ಟ್’ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಪೋರ್ಟ್ ಆಫ್ ಸ್ಪೇನ್ : Ishan Kishan – Virat Kohli : ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್’ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್’ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ.

4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಇಶಾನ್ ಕಿಶನ್ ಕೇವಲ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ ಅಜೇಯ 52 ರನ್ ಬಾರಿಸಿದರು. ಟೆಸ್ಟ್ ಕ್ರಿಕೆಟ್’ನಲ್ಲಿ 4ನೇ ಕ್ರಮಾಂಕ ವಿರಾಟ್ ಕೊಹ್ಲಿಯವರ ಖಾಯಂ ಸ್ಥಾನ. ಆ ಸ್ಥಾನದಲ್ಲಿ ಅವಕಾಶ ಪಡೆದ ಇಶಾನ್ ಕಿಶನ್ ಚೊಚ್ಚಲ ಟೆಸ್ಟ್ ಅರ್ಧಶತಕ ಬಾರಿಸಿದ್ದಾರೆ. ಇಶಾನ್ ಕಿಶನ್ ಅವರ ಅರ್ಧಶತಕದ ಹಿಂದೆ ವಿರಾಟ್ ಕೊಹ್ಲಿ ಕೃಪೆ ಇದೆ. ವಾಸ್ತವವಾಗಿ ಟೀಮ್ ಇಂಡಿಯಾದ ದ್ವಿತೀಯ ಇನ್ನಿಂಗ್ಸ್’ನಲ್ಲಿ ಇಶಾನ್ ಕಿಶನ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವಂತೆ ಟೀಮ್ ಮ್ಯಾನೇಜ್ಮೆಂಟ್’ಗೆ, ಅಂದ್ರೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಲಹೆ ನೀಡಿದ್ದೇ ವಿರಾಟ್ ಕೊಹ್ಲಿ.

ಪ್ರಥಮ ಇನ್ನಿಂಗ್ಸ್’ನಲ್ಲಿ 183 ರನ್’ಗಳ ದೊಡ್ಡ ಮುನ್ನಡೆ ಪಡೆದಿದ್ದ ಭಾರತ, ದ್ವಿತೀಯ ಇನ್ನಿಂಗ್ಸ್’ನಲ್ಲಿ ಕ್ಷಿಪ್ರಗತಿಯಲ್ಲಿ ರನ್ ಕಲೆ ಹಾಕುವ ರಣತಂತ್ರದೊಂದಿಗೆ ಕಣಕ್ಕಿಳಿಯಿತು. ನಾಯಕ ರೋಹಿತ್ 44 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದ್ರೆ, ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 38 ರನ್ ಸಿಡಿಸಿದರು. ವೇಗವಾಗಿ ರನ್ ಗಳಿಸುವ ಅವಶ್ಯಕತೆಯಿದ್ದ ಕಾರಣ 4ನೇ ಕ್ರಮಾಂಕದಲ್ಲಿ ತಾವು ಆಡುವ ಬದಲು ಸ್ಫೋಟಕ ಎಡಗೈ ಬ್ಯಾಟ್ಸ್’ಮನ್ ಇಶಾನ್ ಕಿಶನ್ ಅವರನ್ನು ಆಡಿಸುವಂತೆ ವಿರಾಟ್ ಕೊಹ್ಲಿ ಸಲಹೆ ನೀಡಿದರು. ಅದರಂತೆ 4ನೇ ಕ್ರಮಾಂಕದಲ್ಲಿ ಆಡಿದ ಇಶಾನ್ ಕಿಶನ್, ಚೊಚ್ಚಲ ಅರ್ಧಶತಕ ಸಿಡಿಸಿದರು.

ಇದನ್ನೂ ಓದಿ : Ashiwn breaks Bhajji record : ಅಶ್ವಿನ್ ಮತ್ತೊಂದು ಮೈಲುಗಲ್ಲು; ಭಜ್ಜಿ ದಾಖಲೆ ಮುರಿದ ಸ್ಪಿನ್ ಮಾಂತ್ರಿಕ, ಜಂಬೋ ದಾಖಲೆ ಮೇಲೆ ಕಣ್ಣು

4ನೇ ದಿನದಾಟದ ನಂತರ ಮಾತನಾಡಿದ ಇಶಾನ್ ಕಿಶನ್, ವಿರಾಟ್ ಕೊಹ್ಲಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. “ನನ್ನನ್ನು 4ನೇ ಕ್ರಮಾಂಕದಲ್ಲಿ ಆಡಿಸುವ ನಿರ್ಧಾರ ವಿರಾಟ್ ಕೊಹ್ಲಿ ಅವರದ್ದಾಗಿತ್ತು. ಕ್ರೀಸ್’ಗೆ ಇಳಿಯುವ ಮುನ್ನ ವಿರಾಟ್ ಭಾಯ್ ಜೊತೆ ಮಾತನಾಡಿದೆ. ಯಾವುದೇ ಒತ್ತಡವಿಲ್ಲದೆ ನಿನ್ನ ನೈಜ ಆಟವಾಡು ಎಂದು ಅವರು ಸಲಹೆ ನೀಡಿದರು” ಎಂದು ಇಶಾನ್ ಕಿಶನ್ ಹೇಳಿದ್ದಾರೆ. ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯರ ಗೆಲುವಿಗೆ ಟೀಮ್ ಇಂಡಿಯಾ 365 ರನ್’ಗಳ ಗುರಿ ನಿಗದಿ ಪಡಿಸಿತ್ತು. 4ನೇ ದಿನದಂತ್ಯಕ್ಕೆ ವೆಸ್ಟ್ ಇಂಡೀಸ್ ತಂಡ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ.

Ishan Kishan – Virat Kohli : Thanks to Kohli, Ishan Kishan scored his maiden Test fifty.

Comments are closed.