Karun Nair Exclusive : ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ಸರ್ಕಸ್, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ ಕನ್ನಡಿಗ ಕರುಣ್

ಬೆಂಗಳೂರು: ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಸ್ಟಾರ್ ಬ್ಯಾಟ್ಸ್‌ಮನ್ ಕರುಣ್ ನಾಯರ್ (Karun Nair), ಕಂಬ್ಯಾಕ್ ಕನಸು ಕಾಣುತ್ತಿದ್ದು ಇದಕ್ಕಾಗಿ ಇಂಗ್ಲೆಂಡ್‌ನಲ್ಲಿ ಮೈನಲ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮೈನರ್ ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ನಾಲ್ಕು ತಿಂಗಳ ಕಾಲ ಆಡಲಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಆ ಬಳಿಕ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಯಾವ ರಾಜ್ಯದ ಪರ ಆಡುವುದು ಎಂಬುದನ್ನು ನಿರ್ಧರಿಸಲಿದ್ದಾರೆ.

ಕಳೆದ ಸಾಲಿನಲ್ಲಿ ಕರುಣ್ ನಾಯರ್ ಅವರನ್ನು ಕ್ರಿಕೆಟ್‌ನ ಮೂರೂ ಫಾರ್ಮ್ಯಾಟ್‌ಗಳಲ್ಲಿ ಕರ್ನಾಟಕ ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಈ ಬಾರಿಯೂ ಕರುಣ್ ನಾಯರ್‌ಗೆ ಕರ್ನಾಟಕ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿಲ್ಲ. ಹೀಗಾಗಿ ಮುಂಬರುವ ದೇಶೀಯ ಕ್ರಿಕೆಟ್ ಸಾಲಿನಲ್ಲಿ ತವರು ರಾಜ್ಯ ಕರ್ನಾಟಕವನ್ನು ತೊರೆದು ಅನ್ಯರಾಜ್ಯದ ಪರ ಆಡುವುದು ಬಹುತೇಕ ಖಚಿತಗೊಂಡಿದೆ.

ಸತತ ವೈಫಲ್ಯಗಳ ಕಾರಣ ಕಳೆದ ಸಾಲಿನ ರಣಜಿ ಟ್ರೋಫಿ ಟೂರ್ನಿಗಾಗಿ ಆಯ್ಕೆ ಮಾಡಲಾಗಿದ್ದ ಕರ್ನಾಟಕ ತಂಡದಿಂದ ಕರುಣ್ ನಾಯರ್ ಅವರನ್ನು ಕೈಬಿಡಲಾಗಿತ್ತು. ಕರುಣ್ ಸ್ಥಾನದಲ್ಲಿ ಆಡಿದ್ದ ಯುವ ಬಲಗೈ ಬ್ಯಾಟ್ಸ್‌ಮನ್ ನಿಕಿನ್ ಜೋಸ್ ಭರವಸೆ ಮೂಡಿಸಿರುವ ಕಾರಣ, ಕರುಣ್ ಅವರ ಕಂಬ್ಯಾಕ್ ಕನಸು ಬಹುತೇಕ ಭಗ್ನಗೊಂಡಿದೆ. ಹೀಗಾಗಿ ಕ್ರಿಕೆಟ್ ಭವಿಷ್ಯದ ದೃಷ್ಠಿಯಿಂದ ಕರುಣ್ ಕರ್ನಾಟಕ ತಂಡವನ್ನು ತೊರೆದು ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಬೇರೆ ರಾಜ್ಯದ ಪರ ಆಡಲಿದ್ದಾರೆ ಎನ್ನಲಾಗ್ತಿದೆ.

ಕ್ರಿಕೆಟ್ ಭವಿಷ್ಯದ ಕುರಿತಾಗಿ ಕರುಣ್ ನಾಯರ್, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಸಲಹೆ ಪಡೆದಿದ್ದಾರೆ. ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೇ ಇದ್ದರೆ ರಾಜ್ಯ ತಂಡವನ್ನು ತೊರೆದು ಬೇರೆ ರಾಜ್ಯದ ಪರ ಆಡುವುದೇ ಒಳ್ಳೆಯದು ಎಂದು ಕರುಣ್ ನಾಯರ್ ಅವರಿಗೆ ದ್ರಾವಿಡ್ ಸಲಹೆ ನೀಡಿದ್ದಾರೆಂದು ಕರುಣ್ ಅವರ ಆಪ್ತಮೂಲಗಳು ತಿಳಿಸಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಆಟಗಾರನೆಂಬ ದಾಖಲೆ ಕರುಣ್ ನಾಯರ್ (Karun Nair) ಹೆಸರಲ್ಲಿದೆ.

2016ರ ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸುವ ಮೂಲಕ ಕರುಣ್ ನಾಯರ್ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಠಿಸಿದ್ದರು. ಆದರೆ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ಕರುಣ್ ನಾಯರ್, ನಂತರ ಕರ್ನಾಟಕ ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದಾರೆ.

ಭಾರತ ಪರ 6 ಟೆಸ್ಟ್ ಪಂದ್ಯಗಳನ್ನಾಡಿರುವ ಕರುಣ್ ನಾಯರ್ 62.33ರ ಸರಾಸರಿಯಲ್ಲಿ ಒಂದು ತ್ರಿಶತಕ ಸಹಿತ 374 ರನ್ ಕಲೆ ಹಾಕಿದ್ದಾರೆ. ಕರ್ನಾಟಕ ಪರ ರಣಜಿ ಪಂದ್ಯಗಳು ಸೇರಿದಂತೆ ವೃತ್ತಿಜೀವನದಲ್ಲಿ ಒಟ್ಟು 85 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಕರುಣ್, 48.94ರ ಸರಾಸರಿಯಲ್ಲಿ 15 ಶತಕ ಹಾಗೂ 27 ಅರ್ಧಶತಕಗಳ ನೆರವಿನಿಂದ 5922 ರನ್ ಗಳಿಸಿದ್ದಾರೆ. 90 ಲಿಸ್ಟ್ ಎ ಪಂದ್ಯಗಳಿಂದ 2 ಶತಕ ಸಹಿತ 2119 ರನ್ ಹಾಗೂ 150 ಟಿ20 ಪಂದ್ಯಗಳಿಂದ 2 ಶತಕ ಹಾಗೂ 16 ಅರ್ಧಶತಕಗಳೊಂದಿಗೆ 2989 ರನ್ ಗಳಿಸಿದ್ದಾರೆ.

ಇದನ್ನೂ ಓದಿ : MS Dhoni – Ravindra Jadeja : ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂ.ಎಸ್ ಧೋನಿ, ಥಲಾ ಹುಟ್ಟುಹಬ್ಬದ ದಿನವೇ ಸೀಕ್ರೆಟ್ ಬಿಚ್ಚಿಟ್ಟ ಜಡೇಜ

ಇದನ್ನೂ ಓದಿ : MS Dhoni birthday: ಹ್ಯಾಪಿ ಬರ್ತ್ ಡೇ ಎಂ.ಎಸ್ ಧೋನಿ, “ಥಲಾ” ಕಟೌಟ್’ಗೆ ಹಾಲಿನ ಅಭಿಷೇಕ

2014-15ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ತ್ರಿಶತಕ ಬಾರಿಸುವ ಮೂಲಕ ಕರ್ನಾಟಕ ತಂಡ ಸತತ 2ನೇ ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಕರುಣ್ ನಾಯರ್ ಮಹತ್ವದ ಪಾತ್ರ ವಹಿಸಿದ್ದರು. 2013-14ರಲ್ಲೂ ಕರ್ನಾಟಕ ತಂಡ ರಣಜಿ ಚಾಂಪಿಯನ್ ಆದಾಗ ಕರುಣ್ ನಾಯರ್ ತಂಡದಲ್ಲಿದ್ದರು.

Karun Nair Exclusive : Kannadigas Karun is playing county cricket in Circus, England to get a place in the Karnataka team

Comments are closed.