ಕನ್ನಡಿಗ ಕೆ.ಎಲ್.ರಾಹುಲ್ ಆಸ್ತಿ ಮೌಲ್ಯ ಎಷ್ಟಿದೆ ಗೊತ್ತಾ ?

ಕನ್ನಡಿಗ, ಕರಾವಳಿಯ ಹುಡುಗ ಕೆ.ಎಲ್.ರಾಹುಲ್ ಈ ಬಾರಿಯ ಐಪಿಎಲ್ ಹೀರೋ. ಅಂಡರ್ 19 ಮೂಲಕ ಕ್ರಿಕೆಟ್ ಲೋಕಕ್ಕೆ ಎಂಟ್ರಿಕೊಟ್ಟ ರಾಹುಲ್ ತಿರುಗಿ ನೋಡಿದ್ದೇ ಇಲ್ಲ. ಭಾರತ ತಂಡದ ಪರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿರುವ ರಾಹುಲ್, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಟಾಪ್ ಸ್ಕೋರರ್ ಕೂಡ ಹೌದು.

2011ರಲ್ಲಿ ಅಂಡರ್-19 ತಂಡದಲ್ಲಿ ಆಡುವ ಮೂಲಕ ಕ್ರಿಕೆಟ್ ಕೆರಿಯರ್ ಆರಂಭಿಸಿದ ರಾಹುಲ್ ನಂತರ ರಣಜಿ ತಂಡದಲ್ಲಿ ಮಿಂಚಿದರು. 2013ರಲ್ಲಿ ರಾಹುಲ್​ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆಯ್ಕೆ ಮಾಡಿಕೊಂಡಿತ್ತು.

2014-15 ರ ಸಾಲಿನಲ್ಲಿ ಹೈದ್ರಾಬಾದ್ ಪರ ಆಡಿದ್ದ ರಾಹುಲ್ ಮರು ವರ್ಷವೇ ಮತ್ತೆ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದರು.

ಆದರೆ 2018ರಲ್ಲಿ ಕಿಂಗ್ಸ್ ಇಲೆವೆನ್ ತಂಡಕ್ಕೆ ಭಾರೀ ಮೊತ್ತಕ್ಕೆ ಸೇಲ್ ಆಗಿದ್ದರು. ಉತ್ತಮ ನಿರ್ವಹಣೆಯಿಂದಲೇ ಈ ಬಾರಿ ಕನ್ನಡಿಗ ಕೆ.ಎಲ್.ರಾಹುಲ್ ಪಂಜಾಬ್ ತಂಡ ನಾಯಕರಾಗಿ ಹೊರಹೊಮ್ಮಿದ್ದಾರೆ.

ಐಪಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾತ್ರವಲ್ಲದೇ ಕೀಪಿಂಗ್ ನಲ್ಲಿಯೂ ಮಿಂಚು ಹರಿಸಿದ್ದಾರೆ. ಭಾರತದ ತಂಡ ನಾಯಕನ ರೇಸ್ ನಲ್ಲಿಯೂ ಕೆ.ಎಲ್.ರಾಹುಲ್ ಹೆಸರು ಮುಂಚೂಣಿಯಲ್ಲಿದೆ.

ಐಪಿಎಲ್ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ರಾಹುಲ್ ಬಿಸಿಸಿಐನಿಂದ ವರ್ಷಂಪ್ರತಿ ಸುಮಾರು 3.5 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಾರೆ.

ಅಲ್ಲದೇ ಕಿಂಗ್ಸ್ ಇಲವೆನ್ ಪಂಜಾಬ್ ತಂಡದಿಂದ ರಾಹುಲ್ ವರ್ಷಂಪ್ರತಿ 11 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ಕೆ.ಎಲ್.ರಾಹುಲ್ ಸಾಕಷ್ಟು ಪ್ರಖ್ಯಾತ ಬ್ರ್ಯಾಂಡ್ ಗಳಿಗೆ ರಾಯಭಾರಿಯಾಗಿದ್ದಾರೆ. ರಾಹುಲ್ ಒಟ್ಟು ಆಸ್ತಿ ಸುಮಾರು 50 ಕೋಟಿ ರೂಪಾಯಿ ಅಷ್ಟಿದೆ ಎನ್ನಲಾಗಿದೆ.

Comments are closed.