Lionel Messi Fifa World cup: ಕೊನೆಗೂ ನನಸಾಯ್ತು ಮೆಸ್ಸಿ ಕನಸು, ಜೀವನದ ಅತೀ ದೊಡ್ಡ ಕ್ಷಣಕ್ಕೆ ಸಾಕ್ಷಿಯಾದ ಅರ್ಜೆಂಟೀನಾ ಸೂಪರ್ ಸ್ಟಾರ್

ಕತಾರ್: ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ (Lionel Messi) ತಮ್ಮ ಜೀವನದ ಅತೀ ದೊಡ್ಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. ವೃತ್ತಿಜೀವನದಲ್ಲಿ ಎಲ್ಲಾ ಪ್ರಶಸ್ತಿಗಳನ್ನು ಗೆದ್ದರೂ ಫಿಫಾ ವಿಶ್ವಕಪ್ ಟ್ರೋಫಿ ಲಿಯೋನಲ್ ಮೆಸ್ಸಿಗೆ 16 ವರ್ಷಗಳಿಂದ ಮರೀಚಿಕೆಯಾಗುತ್ತಲೇ ಬಂದಿತ್ತು. 35 ವರ್ಷದ ಮೆಸ್ಸಿ 2006ರಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಮೆಸ್ಸಿ ಒಟ್ಟು 5 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. ಕೊನೆಗೂ 5ನೇ ಪ್ರಯತ್ನದಲ್ಲಿ ಮೆಸ್ಸಿಗೆ ವಿಶ್ವಕಪ್ ಒಲಿದಿದೆ.

ಕತಾರ್’ನ ಲುಸೈಲ್ ಫುಟ್ಬಾಲ್ ಸ್ಟೇಡಿಯಂನಲ್ಲಿ ಸೂಪರ್ ಸಂಡೇ ನಡೆದ ಫಿಫಾ ವಿಶ್ವಕಪ್ ಟೂರ್ನಿಯ (Fifa world cup 2022) ರೋಚಕ ಫೈನಲ್ ಹಣಾಹಣಿಯಲ್ಲಿ ಲಿಯೋನಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ (Argentina) ಹಾಲಿ ಚಾಂಪಿಯನ್ ಫ್ರಾನ್ಸ್ (France) ತಂಡವನ್ನು ಪೆನಾಲ್ಟಿ ಶೂಟೌಟ್’ನಲ್ಲಿ 4-2 ಅಂತರದಲ್ಲಿ ಸೋಲಿಸಿ 36 ವರ್ಷಗಳ ನಂತರ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿತು. 1986ರಲ್ಲಿ ಡಿಯಾಗೊ ಮರಡೋನಾ ನಾಯಕತ್ವದಲ್ಲಿ ಫಿಫಾ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾ ಮತ್ತೊಂದು ವಿಶ್ವಕಪ್’ಗಾಗಿ 36 ವರ್ಷಗಳ ಕಾಲ ಕಾಯಬೇಕಾಯಿತು. ಈ ಕಾಯುವಿಕೆಗೆ ಲಿಯೋನಲ್ ಮೆಸ್ಸಿ ಅಂತ್ಯ ಹಾಡಿದ್ದಾರೆ. ಮೂರೂವರೆ ದಶಕಗಳ ನಂತರ ಅರ್ಜೆಂಟೀನಾಗೆ ವಿಶ್ವಕಪ್ ಗೆದ್ದುಕೊಟ್ಟಿರುವ ಮೆಸ್ಸಿ, ತನ್ನ ಜೀವನದ ದೊಡ್ಡ ಕನಸನ್ನೂ ನನಗಾಸಿಕೊಂಡಿದ್ದಾರೆ.

ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಪೂರ್ಣಾವಧಿಯಲ್ಲಿ 3-3ರ ಅಂತರದಲ್ಲಿ ಸಮಬಲಗೊಂಡಿತ್ತು. ಅರ್ಜೆಂಟೀನಾ ಪರ ನಾಯಕ ಲಿಯೋನಲ್ ಮೆಸ್ಸಿ 23ನೇ ನಿಮಿಷ (ಪೆನಾಲ್ಟಿ) ಮತ್ತು 108ನೇ ನಿಮಿಷದಲ್ಲಿ ಡಬಲ್ ಗೋಲು ದಾಖಲಿಸಿದ್ರೆ, ಏಂಜಲ್ ಡಿ ಮಾರಿಯಾ 36ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಮತ್ತೊಂದು ಗೋಲು ಗಳಿಸಿದರು.
79ನೇ ನಿಮಿಷದವರೆಗೆ ಗೋಲು ಗಳಿಸಲು ವಿಫಲವಾದ ಫ್ರಾನ್ಸ್, 80ನೇ ನಿಮಿಷದಲ್ಲಿ ಗೋಲುಗಳ ಸುರಿಮಳೆಗೈಯಿತು. ತಂಡದ ಸ್ಟಾರ್ ಸ್ಟ್ರೈಕರ್ ಕೈಲಿಯನ್ ಎಂಬಾಪೆ ಅರ್ಜೆಂಟೀನಾ ಕೋಟೆಯೊಳಗೆ ಗೂಳಿಯಂತೆ ನುಗ್ಗಿ 80ನೇ ನಿಮಿಷ (ಪೆನಾಲ್ಟಿ), 81 ಹಾಗೂ 118ನೇ ನಿಮಿಷದಲ್ಲಿ (ಪೆನಾಲ್ಟಿ) ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು.

ಹೀಗಾಗಿ ಫಲಿತಾಂಶ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್’ನಲ್ಲಿ ಒತ್ತಡ ಮೆಟ್ಟಿ ನಿಂತ ಅರ್ಜೆಂಟೀನಾ 4-2ರ ಅಂತರದಲ್ಲಿ ಜಯಭೇರಿ ಬಾರಿಸಿ ವಿಶ್ವಕಪ್ ಮುಡಿಗೇಸಿಕೊಂಡಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಮೂಡಿ ಬಂದ ಲಿಯೋನಲ್ ಮೆಸ್ಸಿ ಈ ವಿಶ್ವಕಪ್’ನಲ್ಲಿ ಆಡಿದ 7 ಪಂದ್ಯಗಳಿಂದ 7 ಗೋಲು ಗಳಿಸಿ ಅರ್ಜೆಂಟೀನಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಫಿಫಾ ವಿಶ್ವಕಪ್: ಮೆಸ್ಸಿ ಸಾಧನೆ
ವರ್ಷ ಪಂದ್ಯ ಗೋಲು
2006 03 01
2010 05 00
2014 07 04
2018 04 01
2022 07 07

ಇದನ್ನೂ ಓದಿ : World Test Championship : 3ನೇ ಸ್ಥಾನಕ್ಕೆ ಜಿಗಿದ ಭಾರತ, ಫೈನಲ್ ತಲುಪಲು ಬೇಕಿನ್ನು 4 ಗೆಲುವು

ಇದನ್ನೂ ಓದಿ : KL Rahul Athiya Shetty wedding : “ಮಗಳ ಮದುವೆಯ ದಿನಾಂಕ ಫಿಕ್ಸ್ ಆದ್ರೆ ಹೇಳಿ, ನಾನೂ ಬರುವೆ ” ಹೀಗಂದರೇಕೆ ಸುನೀಲ್ ಶೆಟ್ಟಿ ?

English News : News Next Live

Lionel Messi dream has finally come true FIFA World Cup 2022 win argentina

Comments are closed.