Mayank Agarwal : ಟೀಮ್ ಇಂಡಿಯಾ ಕಂಬ್ಯಾಕ್‌ಗೆ ಕನ್ನಡಿಗನ ಕಸರತ್ತು, ಕಾಂಕ್ರೀಟ್ ಪಿಚ್‌ನಲ್ಲಿ ನೀರು, ಪ್ಲಾಸ್ಟಿಕ್ ಚೆಂಡಿನಲ್ಲಿ ಬ್ಯಾಟಿಂಗ್ ಅಭ್ಯಾಸ

ಬೆಂಗಳೂರು: ಕರ್ನಾಟಕದ ಸ್ಫೋಟಕ ಬಲಗೈ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal) ಸದ್ಯ ಭಾರತ ತಂಡದಿಂದ ಹೊರ ಬಿದ್ದಿದ್ದಾರೆ. 32 ವರ್ಷದ ಮಯಾಂಕ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪದೇ ಪದೇ ವಿಫಲರಾಗುತ್ತಾ ಬಂದಿದ್ದಾರೆ. ಆದರೆ ಪ್ರಯತ್ನವನ್ನಂತೂ ಬಿಟ್ಟಿಲ್ಲ.

ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಪಣ ತೊಟ್ಟಿರುವ ಮಯಾಂಕ್ ಅಗರ್ವಾಲ್ ಅದಕ್ಕಾಗಿ ವಿಶೇಷ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಸರ್ಜಾಪುರದಲ್ಲಿರುವ RX ಕ್ರಿಕೆಟ್ ಅಕಾಡೆಮಿಯಲ್ಲಿ ಕಾಂಕ್ರೀಟ್ ಪಿಚ್‌ಗೆ ನೀರು ಹಾಯಿಸಿ, ನೀರಿನಲ್ಲೇ ಪ್ಲಾಸ್ಟಿಕ್ ಚೆಂಡನ್ನು ಎದುರಿಸುತ್ತಿದ್ದಾರೆ. ಈ ವೀಡಿಯೊವನ್ನು ಮಯಾಂಕ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮಯಾಂಕ್ ಅಗರ್ವಾಲ್ ಅವರ ಟಾರ್ಗೆಟ್ ಟೀಮ್ ಇಂಡಿಯಾ ಕಂಬ್ಯಾಕ್. ಅದಕ್ಕೆ ದುಲೀಪ್ ಟ್ರೋಫಿಯನ್ನು ಮೆಟ್ಟಿಲಾಗಿಸಿಕೊಳ್ಳಲಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿ ಜೂಮ್ 28ರಿಂದ ಆರಂಭವಾಗಲಿದ್ದು, ಮಯಾಂಕ್ ದಕ್ಷಿಣ ವಲಯ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

2022ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡಿದ ನಂತರ ಮಯಾಂಕ್ ಅಗರ್ವಾಲ್ ಭಾರತ ಪರ ಮತ್ತೆ ವೈಟ್ & ವೈಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಟೆಸ್ಟ್ ತಂಡದಿಂದ ಹೊರ ಬಿದ್ದ ನಂತರ ಐಪಿಎಲ್‌ನಲ್ಲೂ ವೈಫಲ್ಯ ಎದುರಿಸಿದ್ದ ಮಯಾಂಕ್ ಐಪಿಎಲ್-2023 ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ 10 ಇನ್ನಿಂಗ್ಸ್‌ಗಳಿಂದ ಕೇವಲ ಒಂದು ಅರ್ಧಶತಕ ಸಹಿತ 270 ರನ್ ಕಲೆ ಹಾಕಿದ್ದರು. ಇದೀಗ ಮಯಾಂಕ್ ಅಗರ್ವಾಲ್ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡವನ್ನು ಆಂಧ್ರದ ಹನುಮ ವಿಹಾರಿ (Hanuma Vihari) ಮುನ್ನಡೆಸಲಿದ್ದು, ಮಯಾಂಕ್ ಅಗರ್ವಾಲ್ (Mayank Agarwal) ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರಾಜ್ಯದ ಮತ್ತೊಬ್ಬ ಭರವಸೆಯ ಬ್ಯಾಟ್ಸ್‌ಮನ್ ಆರ್.ಸಮರ್ಥ್, ಯುವ ಬಲಗೈ ವೇಗದ ಬೌಲರ್‌ಗಳಾದ ವೈಶಾಖ್ ವಿಜಯ್ ಕುಮಾರ್ ಮತ್ತು ವಿದ್ವತ್ ಕಾವೇರಪ್ಪ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಕೇಂದ್ರ ವಲಯ, ಮತ್ತು ಈಶಾನ್ಯ ವಲಯ ತಂಡಗಳು ಆಡಲಿವೆ.

ಇದನ್ನೂ ಓದಿ : ಮೊಣಕಾಲಿನ ಗಾಯದ ನಡುವಲ್ಲೂ CSK ಪರ IPL 2024 ಆಡ್ತಾರೆ ಎಂಎಸ್‌ ಧೋನಿ

ಇದನ್ನೂ ಓದಿ : Mandya Murder Case : ಹೆತ್ತ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ: ಪತ್ನಿಗೆ ಮಾರಣಾಂತಿಕ ಹಲ್ಲೆ

ದುಲೀಪ್ ಟ್ರೋಫಿ-2023 ಟೂರ್ನಿಗೆ ದಕ್ಷಿಣ ವಲಯ ತಂಡದ ಹೀಗಿದೆ:

  1. ಹನುಮ ವಿಹಾರಿ (ನಾಯಕ)
  2. ಮಯಾಂಕ್ ಅಗರ್ವಾಲ್ (ಉಪನಾಯಕ)
  3. ರವಿಕುಮಾರ್ ಸಮರ್ಥ್
  4. ತಿಲಕ್ ವರ್ಮಾ
  5. ಸಾಯಿ ಸುದರ್ಶನ್
  6. ರಿಕಿ ಭುಯಿ
  7. ಕೆ.ಎಸ್ ಭರತ್ (ವಿಕೆಟ್ ಕೀಪರ್)
  8. ವಾಷಿಂಗ್ಟನ್ ಸುಂದರ್
  9. ಸಚಿನ್ ಬೇಬಿ
  10. ಪ್ರದೋಶ್ ರಂಜನ್ ಪಾಲ್
  11. ಸಾಯಿ ಕಿಶೋರ್
  12. ವಿದ್ವತ್ ಕಾವೇರಪ್ಪ
  13. ವೈಶಾಖ್ ವಿಜಯ್ ಕುಮಾರ್
  14. ಕೆ.ವಿ ಸಸಿಕಾಂತ್
  15. ದರ್ಶನ್ ಮಿಸಾಲ್

Mayank Agarwal : Kannadigas drill for Team India comeback, water on concrete pitch, batting practice on plastic ball

Comments are closed.