ಮುಂಬೈ : ಆ ದಿನವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ. ಟೀಂ ಇಂಡಿಯಾ ಪಾಲಿಗೆ ನಿಜಕ್ಕೂ ಅದು ಐತಿಹಾಸಿಕ ಪಂದ್ಯ. ಇಂಗ್ಲೆಂಡ್ ವಿರುದ್ದ ಬರೋಬ್ಬರಿ 325ರನ್ ಸವಾಲು ಬೆನ್ನತ್ತಿ ನ್ಯಾಟ್ ವೆಸ್ಟ್ ಟ್ರೋಫಿ ಗೆದ್ದದಿನ. ಅದ್ರಲ್ಲೂ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ ನೆನಪಿಗೆ ಇದೀಗ 15 ವರ್ಷ.

ಅದು ಜುಲೈ 13, 2002 ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯ. ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾ ಬಲಿಷ್ಟವಾಗಿತ್ತು. ಗಂಗೂಲಿ, ಸಚಿನ್, ಸೆಹವಾಗ್, ದ್ರಾವಿಡ್ ಸೇರಿದಂತೆ ಘಟಾನುಘಟಿ ಆಟಗಾರರು ಟೀಂ ಇಂಡಿಯಾದಲ್ಲಿದ್ದರು. ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸಿ ಟೀಂ ಇಂಡಿಯಾಕ್ಕೆ ಬರೋಬ್ಬರಿ 325 ಗುರಿಯನ್ನು ನೀಡಿತ್ತು.

ಆರಂಭಿಕರಾದ ನಾಯಕ ಸೌರವ್ ಗಂಗೂಲಿ 43 ಎಸೆತಗಳಲ್ಲಿ 60 ರನ್ ಗಳಿಸಿದ್ರೆ ವೀರೇಂದ್ರ ಸೆಹ್ವಾಗ್ 45ರನ್ ನೆರವಿನೊಂದಿಗೆ 106 ರನ್ ಜೊತೆಯಾಟ ನೀಡಿದ್ರು. ಆದ್ರೆ ಆರಂಭಿಕ ದಿನೇಶ್ ಮೋಂಗಿಯಾ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ವೈಫಲ್ಯ ಅನುಭವಿಸಿದ್ರು. ಹೀಗಾಗಿ ಒಂದು ಹಂತದಲ್ಲಿ ಟೀಂ ಇಂಡಿಯಾ 146 ರನ್ ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗಷ್ಟೇ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದ ಅಂಡರ್ 19 ಹೀರೋಗಳಾಗದ ಮೊಹಮದ್ ಕೈಫ್ ಹಾಗೂ ಯುವರಾಜ್ ಸಿಂಗ್ ಅವರ ಭರ್ಜರಿ ಆಟದ ನೆರವಿನಿಂದ ಭಾರತ ಗೆಲುವಿನ ನಗೆಯನ್ನು ಬೀರಿತ್ತು.

ಫೈನಲ್ ಗೆಲ್ಲುತ್ತಿದ್ದಂತೆಯೇ ಫೆವಿಲಿಯನ್ ನಲ್ಲಿ ಕುಳಿತಿದ್ದ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಾಚರಣೆಯನ್ನು ಮಾಡಿದ್ರು. ಸೌರವ್ ಸಂಭ್ರಮಾಚರಣೆ ಭಾರೀ ಸುದ್ದಿ ಯಾಗಿತ್ತು. ಇದಕ್ಕೂ ಮೊದಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ತನ್ನ ಅಂಗಿಯನ್ನು ಬಿಚ್ಚಿ ಸಂಭ್ರಮಿಸಿದ್ರು. ಆದ್ರೆ ಗಂಗೂಲಿ ಲಾರ್ಡ್ಸ್ ಮೈದಾನದಲ್ಲಿ ಶರ್ಟ್ ಬಿಚ್ಚುವ ಮೂಲಕ ಸೇಡು ತೀರಿಸಿಕೊಂಡಿದ್ದರು.