R Ashwin : ಕಮಿಟ್ಮೆಂಟ್‌ಗೆ ಮತ್ತೊಂದು ಹೆಸರೇ ಅಶ್ವಿನ್, ತಮಿಳುನಾಡು ಡಿವಿಜನ್ ಲೀಗ್’ನಲ್ಲಿ ಆಡುತ್ತಿದ್ದಾರೆ ಸ್ಪಿನ್ ಮಾಂತ್ರಿಕ

ಚೆನ್ನೈ: “ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ಸಾಗಿ ಬಂದ ಹಾದಿಯನ್ನು ಮರೆಯಬಾರದು” ಎಂಬ ಮಾತಿದೆ. ಈ ಮಾತಿಗೆ ಬೆಸ್ಟ್ ಎಕ್ಸಾಂಪಲ್ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ (R Ashwin) ರವಿಚಂದ್ರನ್ ಅಶ್ವಿನ್. ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 700+ ವಿಕೆಟ್’ಗಳನ್ನು ಪಡೆದಿರುವ ಸ್ಪಿನ್ ಮಾಂತ್ರಿಕ. ಅನಿಲ್ ಕುಂಬ್ಳೆ ನಂತರ ಭಾರತದ ಬೆಸ್ಟ್ ಸ್ಪಿನ್ನರ್ ಎಂದು ಕರೆಸಿಕೊಂಡಿರುವ ಅಶ್ವಿನ್ ಅವರ ಈ ಸಾಧನೆಗೆ ಕಾರಣ ಅವರ ಬದ್ಧತೆ.

ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್’ನಲ್ಲಿ ಟೆಸ್ಟ್ ಸರಣಿಯನ್ನಾಡಿ ತವರಿಗೆ ವಾಪಸ್ಸಾಗಿದ್ದ ಅಶ್ವಿನ್, ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಡಿವಿಜನ್-1 ಲೀಗ್’ನಲ್ಲಿ (TNCA Division 1) ಆಡುತ್ತಿದ್ದಾರೆ. ಟಿಎನ್’ಸಿಎ ಡಿವಿಜನ್-1 ಲೀಗ್ ಟೂರ್ನಿಯಲ್ಲಿ ಅಶ್ವಿನ್ ಎಂಆರ್’ಸಿ ತಂಡದ ಪರ ಆಡುತ್ತಿದ್ದಾರೆ.

ಕ್ರಿಕೆಟ್ ಜೀವನ ಆರಂಭಿಸಿದ ದಿನದಿಂದ ರವಿಚಂದ್ರನ್ ಅಶ್ವಿನ್ MRC ಕ್ರಿಕೆಟ್ ಕ್ಲಬ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. MRC ಕ್ಲಬ್ ಅಶ್ವಿನ್ ಅವರ ಕ್ರಿಕೆಟ್ ಬದುಕಿಗೆ ಅಡಿಪಾಯ ಹಾಕಿರುವ ಕ್ಲಬ್. ಹೀಗಾಗಿ ತಾವು ಕ್ರಿಕೆಟ್’ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ಬಳಿಕವೂ ಆರಂಭಿಕ ದಿನಗಳಲ್ಲಿ ತಮ್ಮನ್ನು ಪೋಷಿಸಿದ ಕ್ಲಬ್ ತಂಡವನ್ನು ಅಶ್ವಿನ್ ಮರೆತಿಲ್ಲ. ಕ್ರಿಕೆಟ್’ನಿಂದ ವಿರಾಮ ಸಿಕ್ಕ ಬೆನ್ನಲ್ಲೇ ತಮ್ಮ ಬಾಲ್ಯದ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾರೆ.

ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಭಾರತ ಪರ 100 ಟೆಸ್ಟ್ ಪಂದ್ಯಗಳಾಡಿದ ನಂತರವೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಡಿವಿಜನ್ ಲೀಗ್ ಪಂದ್ಯದಲ್ಲಿ ಆಡಿದ್ದರು. ಕೆಲ ವರ್ಷಗಳ ಹಿಂದೆ ಬಿಯುಸಿಸಿ ಕ್ಲಬ್ ಪರ ದ್ರಾವಿಡ್ ಆಡಿದ್ದು ದೊಡ್ಡ ಸುದ್ದಿಯಾಗಿತ್ತು. ದ್ರಾವಿಡ್ ಹಾದಿಯಲ್ಲಿ ಅಶ್ವಿನ್ ಇದೀಗ ತಮ್ಮ ಹಳೆಯ ಕ್ರಿಕೆಟ್ ಕ್ಲಬ್ ಪರ ಆಡುವ ಮೂಲಕ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಶ್ವಿನ್ ಇದೀಗ 712 ವಿಕೆಟ್’ಗಳನ್ನು ಉರುಳಿಸಿದ್ದು, ಇಂಟರ್’ನ್ಯಾಷನಲ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಶ್ವಿನ್ 272 ಪಂದ್ಯಗಳ 354 ಇನ್ನಿಂಗ್ಸ್’ಗಳಿಂದ 712 ವಿಕೆಟ್’ಗಳನ್ನು ಪಡೆದಿದ್ದರೆ, ಹರ್ಭಜನ್ ಸಿಂಗ್ 365 ಪಂದ್ಯಗಳ 442 ಇನ್ನಿಂಗ್ಸ್’ಗಳಿಂದ 711 ವಿಕೆಟ್ ಕಬಳಿಸಿದ್ದಾರೆ. 401 ಪಂದ್ಯಗಳ 499 ಇನ್ನಿಂಗ್ಸ್’ಗಳಿಂದ 953 ವಿಕೆಟ್ ಪಡೆದಿರುವ ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 37 ವರ್ಷದ ಅಶ್ವಿನ್ ಆಡಿರುವ 94 ಟೆಸ್ಟ್ ಪಂದ್ಯಗಳಲ್ಲಿ 34 ಬಾರಿ ಇನ್ನಿಂಗ್ಸ್ ಒಂದರಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ವಿಕೆಟ್ ಉರುಳಿಸಿದ್ದಾರೆ. ಇದನ್ನೂ ಓದಿ : Ishan Kishan – Sanju Samson : ಸಂಜು ಸ್ಯಾಮ್ಸನ್ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಇಶಾನ್ ಕಿಶನ್

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅತೀ ಹೆಚ್ಚು ವಿಕೆಟ್ ಪಡೆದವರು (ಟಾಪ್ 5)
953: ಅನಿಲ್ ಕುಂಬ್ಳೆ (401 ಪಂದ್ಯ, 499 ಇನ್ನಿಂಗ್ಸ್)
712*: ರವಿಚಂದ್ರನ್ ಅಶ್ವಿನ್ (272 ಪಂದ್ಯ, 354 ಇನ್ನಿಂಗ್ಸ್)
711: ಹರ್ಭಜನ್ ಸಿಂಗ್ (365 ಪಂದ್ಯ, 442 ಇನ್ನಿಂಗ್ಸ್)
687: ಕಪಿಲ್ ದೇವ್ (356 ಪಂದ್ಯ, 448 ಇನ್ನಿಂಗ್ಸ್)
597: ಜಹೀರ್ ಖಾನ್ (303 ಪಂದ್ಯ, 373 ಇನ್ನಿಂಗ್ಸ್)

R Ashwin : Another name for commitment is Ashwin, a spin wizard playing in the Tamil Nadu Division League.

Comments are closed.