Arjun Tendulkar : ಸಚಿನ್ ತೆಂಡೂಲ್ಕರ್ ಮಗನ ಕ್ರಿಕೆಟ್ ಬದುಕಿಗೆ ಸಿಕ್ತು ಬಿಗ್ ಟ್ವಿಸ್ಟ್

ಬೆಂಗಳೂರು: Arjun Tendulkar : ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್, ವಿಶ್ವದಾಖಲೆಗಳ ಸರದಾರ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಶತಕಗಳನ್ನು ಬಾರಿಸಿದ ಜಗತ್ತಿನ ಏಕೈಕ ಆಟಗಾರ. ಆದರೆ ಮಗ ಅರ್ಜುನ್ ತೆಂಡೂಲ್ಕರ್ (Sachin Tendulkar’s son Arjun Tendulkar) ಮಾತ್ರ ಇನ್ನೂ ಕ್ರಿಕೆಟ್’ನಲ್ಲಿ ಕಣ್ಣು ಬಿಡುತ್ತಿರುವ ಕೂಸು. ತಂದೆ ಸಚಿನ್ 16ನೇ ವಯಸ್ಸಿನಲ್ಲೇ ಭಾರತ ಪರ ಆಡಿದ್ರೆ, ಮಗನಿಗೆ 23 ವರ್ಷಗಳಾದ್ರೂ ಕ್ರಿಕೆಟ್’ನಲ್ಲಿ ಬಿಗ್ ಬ್ರೇಕ್ ಇನ್ನೂ ಸಿಕ್ಕಿಲ್ಲ. ಕಳೆದ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೆಲ ಪಂದ್ಯಗಳನ್ನಾಡಿ ಗಮನ ಸೆಳೆದಿದ್ದ ಅರ್ಜುನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನಕ್ಕೆ ಈಗ ತಿರುವು ಸಿಕ್ಕಿದೆ.

ಭಾರತ ತಂಡದ ಭವಿಷ್ಯದ ಫಾಸ್ಟ್ ಬೌಲಿಂಗ್ ಆಲ್ರೌಂಡರ್’ಗಳನ್ನು ಹುಡುಕುತ್ತಿರುವ ಬಿಸಿಸಿಐ ಒಟ್ಟು 20 ಮಂದಿಯನ್ನು ಶಾರ್ಟ್ ಲಿಸ್ಟ್ ಮಾಡಿದೆ. ಆ 20 ಮಂದಿಯಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಒಬ್ಬರು. ಹಾರ್ದಿಕ್ ಪಾಂಡ್ಯ ಅವರಿಗೆ ರಿಪ್ಲೇಸ್ಮೆಂಟ್ ಹುಡುಕುತ್ತಿರುವ ಬಿಸಿಸಿಐ, ಒಟ್ಟು 20 ಮಂದಿ ಫಾಸ್ಟ್ ಬೌಲಿಂಗ್ ಆಲ್ರೌಂಡರ್’ಗಳನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy – NCA) ಶಿಬಿರಕ್ಕೆ ಆಯ್ಕೆ ಮಾಡಿದೆ.

ಅರ್ಜುನ್ ತೆಂಡೂಲ್ಕರ್ ಜೊತೆ ಚೇತನ್ ಸಕಾರಿಯಾ, ಹರ್ಷಿತ್ ರಾಣಾ ಸೇರಿದಂತೆ ಒಟ್ಟು 20 ಮಂದಿ ಆಟಗಾರರು ಈ ಶಿಬರಕ್ಕೆ ಆಯ್ಕೆಯಾಗಿದ್ದಾರೆ. ಈ 20 ಮಂದಿ 20 ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಯುವ ಆಲ್ರೌಂಡರ್’ಗಳಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನ ಮಾಡಲಿದ್ದಾರೆ. ಇಲ್ಲಿ ಗಮನ ಸೆಳೆಯುವ ಕೆಲ ಆಟಗಾರರು ಅಂಡರ್-23 ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ಎ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

23 ವರ್ಷದ ಅರ್ಜುನ್ ತೆಂಡೂಲ್ಕರ್ ಮುಂಬೈ ತಂಡದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಗೋವಾ ತಂಡಕ್ಕೆ ವಲಸೆ ಹೋಗಿದ್ದು, ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಗೋವಾ ಪರ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಪಂದ್ಯಗಳನ್ನಾಡಿದ್ದರು. ಒಟ್ಟು 7 ಪ್ರಥಮದರ್ಜೆ ಪಂದ್ಯಗಳನ್ನು ಆಡಿರುವ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ 12 ವಿಕೆಟ್ ಪಡೆದಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಿಂದ 8 ವಿಕೆಟ್ ಹಾಗೂ 13 ಟಿ20 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಒಂದು ಶತಕ ಬಾರಿಸಿರುವ ಅರ್ಜುನ್, 7 ಪಂದ್ಯಗಳಿಂದ 223 ರನ್ ಕಲೆ ಹಾಕಿದ್ದಾರೆ.

Sachin Tendulkar son Arjun Tendulkar Selected Training Session in National Cricket Academy NCA

Comments are closed.