Shreyanka Patil : ಹಾಂಕಾಂಗ್ ವಿರುದ್ಧ ಕನ್ನಡದ ಕುವರಿಯ ಭರ್ಜರಿ ಬೌಲಿಂಗ್, 2 ರನ್ನಿಗೆ 5 ವಿಕೆಟ್ ಪಡೆದ ಶ್ರೇಯಾಂಕಾ ಪಾಟೀಲ್

ಹಾಂಕಾಂಗ್ : ಕರ್ನಾಟಕದ ಆಟಗಾರ್ತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಸ್ಟಾರ್ ಶ್ರೇಯಾಂಕಾ ಪಾಟೀಲ್ (Shreyanka Patil) ಮಹಿಳಾ ಎಮರ್ಜಿಂಗ್ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ (WOMENS EMERGING TEAMS ASIA CUP 2023) ಹಾಂಕಾಂಗ್ ವಿರುದ್ಧ ಭರ್ಜರಿ ಪ್ರದರ್ಶನ ತೋರುವ ಮೂಲಕ ಭಾರತ ಎ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಹಾಂಕಾಂಗ್‌ನ ಟಿನ್ ವಾಂಗ್ ರೋಡ್ ರೀಕ್ರಿಯೇಷನ್ ಗ್ರೌಂಡ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಆಫ್‌ಸ್ಪಿನ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ 3 ಓವರ್‌ಗಳಲ್ಲಿ ಕೇವಲ 2 ರನ್ನಿತ್ತು 5 ವಿಕೆಟ್ ಕಬಳಿಸಿದರು. ಶ್ರೇಯಾಂಕಾ ಪಾಟೀಲ್ ಅವರ ಮಾರಕ ದಾಳಿಗೆ ತತ್ತರಿಸಿದ ಹಾಂಕಾಂಕ್ 14 ಓವರ್‌ಗಳಲ್ಲಿ ಕೇವಲ 34 ರನ್‌ಗಳಿಗೆ ಆಲೌಟಾಯಿತು. ಭಾರತ ಎ ತಂಡದ ಪರ ಶ್ರೇಯಾಂಕಾ ಪಾಟೀಲ್ ಜೊತೆ ಬೌಲಿಂಗ್‌ನಲ್ಲಿ ಮಿಂಚಿದ ಮನ್ನತ್ ಕಶ್ಯಪ್ 2 ರನ್ನಿಗೆ 2 ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ ಪಾರ್ಶವಿ ಚೋಪ್ರಾ 12 ರನ್ನಿತ್ತು 2 ವಿಕೆಟ್ ಕಬಳಿಸಿದರು.

ನಂತರ 35 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ಕಿರಿಯರ ತಂಡ 5.2 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ನಾಯಕಿ ಶ್ವೇತಾ ಸೆಹ್ರಾವತ್ 2 ರನ್ ಗಳಿಸಿ ಔಟಾದರೆ, ವಿಕೆಟ್ ಕೀಪರ್ ಉಮಾ ಛೆಟ್ರಿ ಅಜೇಯ 18 ರನ್ ಹಾಗೂ ಗಂಗೊಡಿ ತ್ರಿಷಾ ಅಜೇಯ 19 ರನ್ ಗಳಿಸಿದರು.

ಇದನ್ನೂ ಓದಿ : WTC final 2023 : WTC 2021-23ರಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಸರಾಸರಿ ನೋಡಿದ್ರೆ ಬೆಚ್ಚಿ ಬೀಳ್ತೀರಿ..!

20 ವರ್ಷದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಐಪಿಎಲ್‌ಗೂ ಮೊದಲು ನಡೆದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2023) ಮಿಂಚುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. WPL ಟೂರ್ನಿಯಲ್ಲಿ ತೋರಿದ ಸಾಧನೆಯ ಮಾನದಂಡದಲ್ಲಿ ಭಾರತ ಜ್ಯೂನಿಯರ್ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದ ಶ್ರೇಯಾಂಕಾ ಪಾಟೀಲ್, ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ತಮ್ಮ ಭರ್ಜರಿ ಬೌಲಿಂಗ್ ಪ್ರದರ್ಶನಕ್ಕೆ ಶ್ರೇಯಾಂಕಾ ಪಾಟೀಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಜೂನ್ 15ರಂದು ನಡೆಯುವ ಪಂದ್ಯದಲ್ಲಿ ಭಾರತ ಎ ತಂಡ ಥಾಯ್ಲೆಂಡ್ ತಂಡವನ್ನು ಎದುರಿಸಲಿದ್ರೆ, ಜೂನ್ 19ರಂದು ಭಾರತಕ್ಕೆ ಪಾಕಿಸ್ತಾನ ಎ ತಂಡ ಎದುರಾಳಿ.

Shreyanka Patil: Shreyanka Patil took 5 wickets for 2 runs against Hong Kong.

Comments are closed.