T20 World Cup 2024 : ಸೇಂಟ್ ವಿನ್ಸೆಂಟ್: ಸ್ಫೂರ್ತಿಯುತ ಅಫ್ಘಾನಿಸ್ತಾನ ತಂಡ (Afghanistan Cricket Team) ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ರನ್’ಗಳಿಂದ ಸೋಲಿಸಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಎ ಗುಂಪಿನಲ್ಲಿ ಕೇವಲ ಒಂದು ಪಂದ್ಯ ಗೆದ್ದು 2 ಅಂಕವಷ್ಚೇ ಗಳಿಸಿದ್ದ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ ಬಿದ್ದಿದೆ.
ಎ ಗುಂಪಿನಲ್ಲಿ ಆಡಿದ ಮೂರೂ ಸೂಪರ್-8 ಪಂದ್ಯಗಳನ್ನು ಗೆದ್ದಿರುವ ಭಾರತ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದರೆ, ಆಡಿದ ಮೂರು ಪಂದ್ಯಗಳಲ್ಲಿ ಭಾರತ ವಿರುದ್ಧ ಸೋತು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧ ಗೆದ್ದ ಅಫ್ಘಾನಿಸ್ತಾನ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಸೆಮಿಫೈನಲ್ ತಲುಪಲು ಗೆಲ್ಲಬೇಕಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್’ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.
ಬ್ಯಾಟಿಂಗ್ ಕಠಿಣವಾಗಿದ್ದ ಪಿಚ್’ನಲ್ಲಿ ನೆಲ ಕಚ್ಚಿ ನಿಂತು ಆಡಿದ ಓಪನರ್ ರಹ್ಮನುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 43 ರನ್ ಗಳಿಸಿದರೆ, ಸ್ಲಾಗ್ ಓವರ್’ಗಳಲ್ಲಿ ಅಬ್ಬರಿಸಿದ ನಾಯಕ ರಶೀದ್ ಖಾನ್ 10 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ ಅಜೇಯ 19 ರನ್ ಗಳಿಸಿದರು. ನಂತರ 116 ರನ್’ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ ವಿಕೆಟ್ ಕೀಪರ್ ಲಿಟ್ಟನ್ ದಾಸ್ ಅವರ ಹೋರಾಟಕಾರಿ ಅರ್ಧಶತಕದ ನಡುವೆ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಬ್ಯಾಟಿಂಗ್’ನಲ್ಲಿ ಅಬ್ಬರಿಸಿದ್ದ ಆಫ್ಘನ್ ನಾಯಕ ರಶೀದ್ ಖಾನ್ ಬೌಲಿಂಗ್’ನಲ್ಲೂ ಮಿಂಚಿ ನಾಲ್ಕು ವಿಕೆಟ್ ಪಡೆದು ಬಾಂಗ್ಲಾ ಮೇಲೆ ಮಾರಕವಾಗಿ ಎರಗಿದರು.
ಇದನ್ನೂ ಓದಿ : Maharaja Trophy 2024 : ಸ್ವಾತಂತ್ರ್ಯ ದಿನದಂದೇ ಶುರು ಕರುನಾಡ ಟಿ20 ಲೀಗ್, ಬೆಂಗಳೂರು ತಂಡದಲ್ಲೇ ಮತ್ತೆ ಮಯಾಂಕ್ ಆಟ
ಪಂದ್ಯದ ಮಧ್ಯೆ ಮಳೆ ಸುರಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶ ಗೆಲುವಿಗೆ 19 ಓವರ್’ಗಳಲ್ಲಿ 114 ರನ್’ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಯಿತು. ಅಂತಿಮವಾಗಿ ಬಾಂಗ್ಲಾದೇಶ 17.5 ಓವರ್’ಗಳಲ್ಲಿ 105 ರನ್’ಗಳಿಗೆ ಆಲೌಟಾಗುವುದರೊಂದಿಗೆ 8 ರನ್’ಗಳಿಂದ ರೋಚಕವಾಗಿ ಪಂದ್ಯ ಗೆದ್ದ ಅಫ್ಘಾನಿಸ್ತಾನ ಸೆಮಿಫೈನಲ್’ಗೆ ಲಗ್ಗೆ ಇಟ್ಟಿತು. ಗುರುವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : ಟಿ20 ವಿಶ್ವಕಪ್: ವಿಂಡೀಸ್ ಔಟ್, ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್
ಇದಕ್ಕೂ ಮೊದಲು ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ತನ್ನ ಅಂತಿಮ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 24 ರನ್’ಗಳ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯವನ್ನು ಗೆಲ್ಲುವ ಮೂಲಕ ಗ್ರೂಪ್-1ರಲ್ಲಿ ಆಡಿದ ಮೂರೂ ಸೂಪರ್-8 ಪಂದ್ಯಗಳನ್ನು ಗೆದ್ದ ಭಾರತ ಒಟ್ಟು 6 ಅಂಕಗಳೊಂದಿಗೆ ಅಜೇಯವಾಗಿ ಸೆಮಿಫೈನಲ್ ತಲುಪಿತು. ಗುರುವಾರ (ಜೂನ್ 27) ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ
T20 World Cup 2024 Australia out Afghanistan make history by reaching semi-finals