Thalaivas vs Pirates : ಟಾಪ್-6ಗೆ ತಲೈವಾಸ್, ಪೈರೇಟ್ಸ್ : ಇಂದು ಬೆಂಗಳೂರು Vs ಬೆಂಗಾಲ್ ಕದನ

ಹೈದರಾಬಾದ್ : ತಮಿಳ್ ತಲೈವಾಸ್ ಮತ್ತು ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡಗಳು (Thalaivas vs Pirates) ಪ್ರೊ ಕಬಡ್ಡಿ ಲೀಗ್’ನಲ್ಲಿ 7ನೇ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿವೆ.

ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 94ನೇ ಲೀಗ್ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ, 2ನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ತಂಡವನ್ನು 34-20ರಲ್ಲಿ 14 ಅಂಕಗಳ ಅಂತರದಿಂದ ಭರ್ಜರಿಯಾಗಿ ಬಗ್ಗು ಬಡಿಯಿತು. ಈ ಗೆಲುವಿನೊಂದಿಗೆ ಲೀಗ್’ನಲ್ಲಿ 7ನೇ ಗೆಲುವು ದಾಖಲಿಸಿದ ತಲೈವಾಸ್, ಒಟ್ಟು 48 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಇನ್ನುಳಿದ 6 ಲೀಗ್ ಪಂದ್ಯಗಳಲ್ಲಿ ಕನಿಷ್ಠ ಮೂರರಲ್ಲಿ ಗೆದ್ದರೆ ತಮಿಳ್ ತಲೈವಾಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

ದಿನದ 2ನೇ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 1 ಅಂಕದಿಂದ ರೋಚಕ ಗೆಲುವು ಸಾಧಿಸಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಕೊನೇ ಕ್ಷಣದ ಒತ್ತಡ ಮೆಟ್ಟಿ ನಿಂತ ಪೈರೇಟ್ಸ್ ಪಡೆ 36-35ರ ಅಂತರದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಜಯ ಗಳಿಸಿತು. ಇದರೊಂದಿಗೆ ಒಟ್ಟು 7ನೇ ಗೆಲುವು ತನ್ನದಾರಿಸಿಕೊಂಡ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ 47 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಲಗ್ಗೆ ಹಾಕಿತು.

ಪಾಟ್ನಾ ಪೈರೇಟ್ಸ್ ಪರ ಯುವ ರೇಡರ್ ಸಚಿನ್ ತವಾರ್ 14 ರೇಡ್ ಪಾಯಿಂಟ್’ಗಳನ್ನು ಗಳಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರೆ, ತೆಲುಗು ಟೈಟನ್ಸ್ ಪರ ಏಕಾಂಗಿ ಹೋರಾಟ ನಡಸಿದ ಸಿದ್ಧಾರ್ಥ್ ದೇಸಾಯಿ 15 ರೇಡ್ ಪಾಯಿಂಟ್ಸ್ ಗಳಿಸಿದರಾದರೂ ತಂಡವನ್ನುಗೆಲ್ಲಿಸಲಾಗಲಿಲ್ಲ. ಇದು ಪ್ರಸಕ್ತ ಟೂರ್ನಿಯಲ್ಲಿ ತೆಲುಗು ಟೈಟನ್ಸ್’ಗೆ ಎದುರಾದ 15ನೇ ಸೋಲು.

ಬುಧವಾರ ನಡೆಯುವ ರೋಚಕ ಪಂದ್ಯದಲ್ಲಿ ಲೀಗ್ ಲೀಡರ್ ಪುಣೇರಿ ಪಲ್ಟನ್ ಮತ್ತು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯ ಪುಣೇರಿ ಪಲ್ಟನ್ ಕ್ಯಾಪ್ಟನ್ ಫಜಲ್ ಅತ್ರಾಚಲಿ ಮತ್ತು ಪಿಂಕ್ ಪ್ಯಾಂಥರ್ಸ್ ಪಡೆಯ ಯುವ ರೇಡರ್ ಅರ್ಜುನ್ ದೇಶ್ವಾಲ್ ನಡುವಿನ ಜಿದ್ದಾಜಿದ್ದಿಯೆಂದೇ ಬಿಂಬಿತವಾಗಿದೆ. ಬುಧವಾರದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ.

ಪ್ರೊ ಕಬಡ್ಡಿ ಲೀಗ್-9: ಬುಧವಾರದ ಪಂದ್ಯಗಳು

  1. ಪುಣೇರಿ ಪಲ್ಟನ್ Vs ಜೈಪುರ ಪಿಂಕ್ ಪ್ಯಾಂಥರ್ಸ್
  2. ಬೆಂಗಳೂರು ಬುಲ್ಸ್ Vs ಬೆಂಗಾಲ್ ವಾರಿಯರ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Thalaivas, Pirates for Top-6: Bengaluru Vs Bengal Battle Today

Comments are closed.