Vidwath Kaverappa : ದೇಶೀಯ ಕ್ರಿಕೆಟ್’ನಲ್ಲಿ ಕೊಡಗಿನ ವೀರನ ರಣಾರ್ಭಟ, ಟೀಮ್ ಇಂಡಿಯಾ ಬಾಗಿಲು ಸದ್ಯದಲ್ಲೇ ಓಪನ್!

ಬೆಂಗಳೂರು: ಕರ್ನಾಟಕದಿಂದ ಮತ್ತೊಬ್ಬ ಕ್ರಿಕೆಟಿಗ ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಿದ್ದು, ಆ ಪ್ರತಿಭಾವಂತನಿಗೆ ಸದ್ಯದಲ್ಲೇ ಭಾರತ ತಂಡದ ಬಾಗಿಲು ತೆರೆಯುವ ಸಾಧ್ಯತೆಯಿದೆ. ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಿರುವ ಆ ಕೊಡಗಿನ ವೀರನ ಹೆಸರು ವಿದ್ವತ್ ಕಾವೇರಪ್ಪ (Vidwath Kaverappa). ಬಲಗೈ ಸ್ವಿಂಗ್ ಬೌಲರ್ ಆಗಿರುವ ವಿದ್ವತ್ ಕಾವೇರಪ್ಪ ದೇಶೀಯ ಕ್ರಿಕೆಟ್’ನಲ್ಲಿ ಅಮೋಘ ಪ್ರದರ್ಶನ ತೋರುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ (Duleep Trophy)ಫೈನಲ್’ನಲ್ಲಿ 8 ವಿಕೆಟ್ ಪಡೆದು ದಕ್ಷಿಣ ವಲಯ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ 24 ವರ್ಷದ ವಿದ್ವತ್ ಕಾವೇರಪ್ಪ, ಸೋಮವಾರ ಆರಂಭಗೊಂಡ ದೇವಧರ್ ಟ್ರೋಫಿ (Deodhar Trophy) ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರ ವಲಯ ವಿರುದ್ಧ ಅಮೋಘ ಪ್ರದರ್ಶನ ತೋರಿದ್ದಾರೆ.

ಪುದುಚೇರಿಯಲ್ಲಿ ನಡೆದ ಪಂದ್ಯದಲ್ಲಿ 17 ರನ್ನಿಗೆ 5 ವಿಕೆಟ್ ಪಡೆದ ವಿದ್ವತ್ ಕಾವೇರಪ್ಪ, ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ತಂಡಕ್ಕೆ 185 ರನ್’ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ ರೋಹನ್ ಕಣ್ಣುಮಲ್ (70), ನಾಯಕ ಮಯಾಂಕ್ ಅಗರ್ವಾಲ್ (64) ಮತ್ತು ಎನ್.ಜಗದೀಶನ್ (72) ಅವರ ಅರ್ಧಶತಕಗಳ ನೆರವಿನಿಂದ 50 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 303 ರನ್ ಕಲೆ ಹಾಕಿದ್ರೆ, ಗುರಿ ಬೆನ್ನಟ್ಟಿದ ಉತ್ತರ ವಲಯ, ವಿದ್ವತ್ ಕಾವೇರಪ್ಪ ಅವರ ಮಾರಕ ದಾಳಿಗೆ ತತ್ತರಿಸಿ 23 ಓವರ್’ಗಳಲ್ಲಿ ಕೇವಲ 60 ರನ್’ಗಳಿಗೆ ಆಲೌಟಾಯಿತು. ವಿಜೆಡಿ ನಿಯಮದ ಪ್ರಕಾರ ದಕ್ಷಿಣ ವಲಯ 185 ರನ್’ಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಇದನ್ನೂ ಓದಿ : VR Vanitha : ದೇಶದ ಇತಿಹಾಸದಲ್ಲಿ ಇದೇ ಮೊದಲು, ಪುರುಷರ ಕ್ರಿಕೆಟ್ ತಂಡಕ್ಕೆ ಮಹಿಳಾ ಕೋಚ್, ಕೆಎಸ್’ಸಿಯ ಟಿ20 ಲೀಗ್’ನಲ್ಲಿ ಹೊಸ ಪ್ರಯೋಗ

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಿದ 2 ಪಂದ್ಯಗಳಿಂದ ವಿದ್ವತ್ ಕಾವೇರಪ್ಪ 15 ವಿಕೆಟ್’ಗಳನ್ನು ಪಡೆದಿದ್ದರು. ಉತ್ತರ ವಲಯ ವಿರುದ್ಧದ ಸೆಮಿಫೈನಲ್’ನಲ್ಲಿ 7 ವಿಕೆಟ್ ಪಡೆದಿದ್ದ ವಿದ್ವತ್, ಪಶ್ಚಿಮ ವಲಯ ವಿರುದ್ಧದ ಫೈನಲ್’ನ ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ಸಹಿತ ಪಂದ್ಯದಲ್ಲಿ ಎಂಟು ವಿಕೆಟ್
ಕಬಳಿಸಿ ದಕ್ಷಿಣ ವಲಯ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ವಿದ್ವತ್ ಕಾವೇರಪ್ಪ, ಸ್ವಿಂಗ್ ಬೌಲಿಂಗ್’ನಿಂದ ಗಮನ ಸೆಳೆಯುತ್ತಿಯುವ ಯುವ ಪ್ರತಿಭೆ. ಇದುವರೆಗೆ ಒಟ್ಟು 12 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ವಿದ್ವತ್ ಕಾವೇರಪ್ಪ 4 ಬಾರಿ ಐದು ವಿಕೆಟ್’ಗಳ ಸಾಧನೆ ಸಹಿತ 49 ವಿಕೆಟ್ ಪಡೆದಿದ್ದಾರೆ. 9 ಲಿಸ್ಟ್ ಎ ಪಂದ್ಯಗಳಿಂದ 22 ವಿಕೆಟ್ ಹಾಗೂ 8 ಟಿ20 ಪಂದ್ಯಗಳಿಂದ 18 ವಿಕೆಟ್ ಪಡೆದಿರುವ ವಿದ್ವತ್ ಕಾವೇರಪ್ಪ, ಸದ್ಯದಲ್ಲೇ ಟೀಮ್ ಇಂಡಿಯಾಗೆ ಆಯ್ಕೆಯಾದರೂ ಅಚ್ಚರಿಯಿಲ್ಲ.

Vidwath Kaverappa: Kodagu hero’s debut in domestic cricket, the door of Team India is open soon!

Comments are closed.