ಬೆಂಗಳೂರು: (Virat Kohli MS Dhoni) ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ನಾಯಕರ ಪೈಕಿ ಅಗ್ರಗಣ್ಯ. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದಿರುವ ವಿಶ್ವದ ಏಕೈಕ ನಾಯಕ ಎಂ.ಎಸ್ ಧೋನಿ.
ಧೋನಿ ನಾಯಕತ್ವದಲ್ಲಿ ಪ್ರವರ್ಧಮಾನಕ್ಕೆ ಬಂದ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿಯೂ ಒಬ್ಬರು. ಧೋನಿ ಮತ್ತು ಕೊಹ್ಲಿ ಮಧ್ಯೆ ಸ್ನೇಹಿತರು, ಗುರು-ಶಿಷ್ಯರ ಬಾಂಧವ್ಯವಿದೆ. ಧೋನಿ ಭಾರತ ತಂಡದ ನಾಯಕರಾಗಿದ್ದಾಗ ವಿರಾಟ್ ಕೊಹ್ಲಿ ದೀರ್ಘ ಕಾಲ ಉಪನಾಯಕರಾಗಿದ್ದರು. ಇದೀಗ ಭಾರತ ತಂಡದಲ್ಲಿ ಧೋನಿ ಜೊತೆಗಿನ ಒಡನಾಟದ ಬಗ್ಗೆ ವಿರಾಟ್ ಕೊಹ್ಲಿ ಆಸಕ್ತಿಕರ ಸಂಗತಿಯೊಂದನ್ನು ಬಿಚ್ಟಿಟ್ಟಿದ್ದಾರೆ. ಧೋನಿ ಅವರಿಗೆ ಉಪನಾಯಕನಾಗಿದ್ದದ್ದು ನನ್ನ ವೃತ್ತಿಜೀವನ ಅತ್ಯಂತ ಆನಂದದ ಮತ್ತು ರೋಮಾಂಚಕಾರಿ ಅವಧಿ ಎಂದು ಧೋನಿ ಜೊತೆಗಿರುವ ಫೋಟೋವನ್ನು ಪ್ರಕಟಿಸಿ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
“ಈ ವ್ಯಕ್ತಿಯ ನಂಬಿಕಸ್ಥ ಉಪನಾಯಕನಾಗಿದ್ದದ್ದು ನನ್ನ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಸಂತೋಷದಾಯಕ ಮತ್ತು ರೋಮಾಂಚಕ ಅವಧಿ. ನಮ್ಮಿಬ್ಬರ ಜೊತೆಯಾಟ ನನ್ನ ಪಾಲಿಗೆ ಸದಾ ವಿಶೇಷ. 7+18” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಬದುಕಿನಲ್ಲಿ ಎಂ.ಎಸ್ ಧೋನಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಿದ್ದೇ ಧೋನಿ. ಅಷ್ಟೇ ಅಲ್ಲ, ಕೊಹ್ಲಿಯನ್ನು ತಮ್ಮ ಉಪನಾಯಕನನ್ನಾಗಿ ಆಯ್ಕೆ ಮಾಡಿಕೊಂಡದ್ದೇ ಎಂ.ಎಸ್ ಧೋನಿ. ಬಳಿಕ ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಲು ಸಿದ್ಧವಾಗಿದ್ದಾರೆ ಎಂಬ ನಂಬಿಕೆ ಬರುತ್ತಲೇ ತಂಡದ ನಾಯಕನ ಸ್ಥಾನವನ್ನು ಧೋನಿ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದಾಗಲೂ “ಅವರು ನನ್ನ ಪಾಲಿಗೆ ಸದಾ ನಾಯಕರಾಗಿರುತ್ತಾರೆ” ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು.
ಸದ್ಯ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಗಾಗಿ ದುಬೈನಲ್ಲಿದ್ದು, ಕಳೆದುಕೊಂಡಿರುವ ಬ್ಯಾಟಿಂಗ್ ಫಾರ್ಮನ್ನು ಮರಳಿ ಪಡೆಯುವ ವಿಶ್ವಾಸದಲ್ಲಿದ್ದಾರೆ. ಏಷ್ಯಾ ಕಪ್ ಟೂರ್ನಿ ನಾಳೆ (ಶನಿವಾರ) ಆರಂಭವಾಗಲಿದ್ದು, ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ : Rohit Sharma : ದುಬೈನಲ್ಲಿ ರೋಹಿತ್ ಶರ್ಮಾ ಕಿಕ್ ಸ್ಕೂಟರ್ ರೈಡಿಂಗ್, ವೀಡಿಯೋ ಸೂಪರ್
Virat Kohli MS Dhoni 7+18 Virat Kohli revealed an interesting fact about his relationship with MSD