BBMP 51 hospitals : ಬಿಬಿಎಂಪಿಯ 51 ಆಸ್ಪತ್ರೆಗಳು ಆರೋಗ್ಯ ಇಲಾಖೆ ಸುಪರ್ದಿಗೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾದ ಬಳಿಕ ಆರೋಗ್ಯದ ಜನರು ಹೆಚ್ಚಿನ ಕಾಳಜಿ ವಹಿಸಲಾರಂಭಿಸಿದ್ದಾರೆ. ಆದರೆ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆ ಗಳಲ್ಲಿ ಸೌಲಭ್ಯಗಳ ಕೊರತೆ ಜನರನ್ನು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವಂತೆ ಮಾಡಿದೆ. ಆದರೆ ಇನ್ಮುಂದೇ ರಾಜ್ಯ ರಾಜಧಾನಿಯ ಆರೋಗ್ಯ ಕೇಂದ್ರಗಳಲ್ಲೂ ಆರೋಗ್ಯ ಇಲಾಖೆಯ ಆಸ್ಪತ್ರೆಗಳಷ್ಟೇ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 51 ಆಸ್ಪತ್ರೆಗಳು (BBMP 51 hospitals) ಆರೋಗ್ಯ ಇಲಾಖೆ ತೆಕ್ಕೆಗೆ ತೆಗೆದುಕೊಂಡಿದೆ.

ಸರ್ಕಾರಿ ಸೌಲಭ್ಯ ಎಲ್ಲರಿಗೂ ಒಂದೇ ರೀತಿ ಸಿಗಬೇಕೆಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಈ ಕ್ರಮಕೈಗೊಂಡಿದೆ.‌ನಗರದಲ್ಲಿ 200 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಿದ್ದು, ಸಿಬ್ಬಂದಿ ಹಾಗೂ ಸೌಲಭ್ಯ ಕೊರತೆಯಿಂದ ಜನರು ಆರೋಗ್ಯ ಕೇಂದ್ರಗಳಿಂದ ಅಂತರ ಕಾಯ್ದುಕೊಂಡಿದ್ದರು. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳು ರಾಜ್ಯಾದ್ಯಂತ ಒಂದೇ ರೀತಿ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಹೊಸ ಹೆಜ್ಜೆ ಇಟ್ಟಿದ್ದು, ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಮತ್ತು ಸಮುದಾಯ ಕೇಂದ್ರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ.

ನಗರ ಆರೋಗ್ಯ ಅಭಿಯಾನ ದಡಿಯಲ್ಲಿ ಆರೋಗ್ಯ ಕೇಂದ್ರಗಳ ಪಟ್ಟಿ ಮಾಡಿದ ಆರೋಗ್ಯ ಇಲಾಖೆ ಬೆಂಗಳೂರು ನಗರದಲ್ಲಿ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 14 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ವಹಿಸಲು ಆಯ್ಕೆ‌ಮಾಡಿಕೊಂಡಿದೆ. ಬಿಬಿಎಂಪಿ ನೇಮಿಸಿರುವ ಸಿಬ್ಬಂದಿ ಮತ್ತು ಆಸ್ಪತ್ರೆಯ ಪಿಠೋಪಕರಣ, ಸಲಕರಣೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿಕೊಳ್ಳಲಿದ್ದು ಅಗತ್ಯ ಸಿಬ್ಬಂದಿ ಹಾಗೂ ಸವಲತ್ತುಗಳನ್ನು ಒದಗಿಸಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ರಾಜ್ಯ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಲ್ಲಿ ಸಮನ್ವಯ ಸಾಧಿಸಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ತಯಾರಿ ನಡೆದಿದ್ದು, ಒಂದೊಮ್ಮೆ ಆರೋಗ್ಯ ಇಲಾಖೆ ಈ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗುಣಾತ್ಮಕ ಬದಲಾವಣೆ ತಂದಲ್ಲಿ ಬಡವರು, ಜನಸಾಮಾನ್ಯರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿ ಮನೆ ಮಠಮಾರಾಟ ಮಾಡಿ ಚಿಕಿತ್ಸೆ ಪಡೆಯುವ ಸ್ಥಿತಿ ಬದಲಾಗಲಿದೆ.

ಇದನ್ನೂ ಓದಿ : ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ : ಗೃಹ ಬಳಕೆಯ ಸಿಲಿಂಡರ್​ ದರದಲ್ಲಿ 50 ರೂ. ಏರಿಕೆ

ಇದನ್ನೂ ಓದಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿದಂತೆ ಮೂವರು ಸಾವು

BBMP 51 hospitals Take over Department of Health

Comments are closed.