BJP Shirahatti MLA Chandru Lamani Arrest | Chalavadi Narayanaswamy: ಬೆಂಗಳೂರು: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಲೋಕಾಯುಕ್ತ ಟ್ರ್ಯಾಪ್ ಪ್ರಕರಣವು ಕೇವಲ ಭ್ರಷ್ಟಾಚಾರದ ವಿಚಾರವಲ್ಲ, ಅದೊಂದು ವ್ಯವಸ್ಥಿತ ಸಂಚು ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಇರುವ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಸ್ವಾಮೀಜಿಯೊಬ್ಬರಿಂದ ಸಂಚು?
“ಚಂದ್ರು ಲಮಾಣಿ ವಿರುದ್ಧದ ಷಡ್ಯಂತ್ರದ ಆಡಿಯೋ ನನಗೂ ಬಂದಿದೆ. ಈ ಪ್ರಕರಣದ ಹಿಂದೆ ಒಬ್ಬ ಸ್ವಾಮೀಜಿ ಸೇರಿ ಪ್ರಮುಖ ವ್ಯಕ್ತಿಗಳು ಸಂಚು ರೂಪಿಸಿದ್ದಾರೆ. ಇದು ನೇರವಾಗಿ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ‘ಟಾರ್ಗೆಟ್’ ರಾಜಕಾರಣ,” ಎಂದು ಅವರು ಆರೋಪಿಸಿದರು. ಬೈರತಿ ಬಸವರಾಜು, ಸಿ.ಕೆ. ರಾಮಮೂರ್ತಿ ಮತ್ತು ಆರ್. ಅಶೋಕ್ ಅವರಂತಹ ನಾಯಕರನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಅದೇ ಸಂಚಿನ ಭಾಗವಾಗಿ ಲಮಾಣಿ ಬಲಿಯಾಗಿದ್ದಾರೆ ಎಂದರು.
ನನ್ನ ವಿರುದ್ಧವೂ ‘ಪಿಎಚ್‌ಡಿ’ ನಡೆಯುತ್ತಿದೆ!
ತಮ್ಮ ವಿರುದ್ಧವೂ ಸರ್ಕಾರದ ಕಣ್ಣು ಬಿದ್ದಿದೆ ಎಂದ ನಾರಾಯಣಸ್ವಾಮಿ, “ನನ್ನನ್ನು ಸಿಲುಕಿಸಲು ನನ್ನ ಹಿಂದೆ ‘ಪಿಎಚ್‌ಡಿ’ (ನಿರಂತರ ಕಣ್ಗಾವಲು ಮತ್ತು ಸಂಶೋಧನೆ) ನಡೆಸುತ್ತಿದ್ದಾರೆ. ಆದರೆ ಅವರು ಏನೇ ಮಾಡಿದರೂ ನಾನು ಯಾವುದಕ್ಕೂ ಸಿಕ್ಕಿಬೀಳುವವನಲ್ಲ,” ಎಂದು ಸವಾಲು ಹಾಕಿದರು.
16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್? ಸಿಎಂ ಸಿದ್ದರಾಮಯ್ಯ ಹೊಸ ಮಾಸ್ಟರ್ ಪ್ಲಾನ್
ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ:
ತಮ್ಮ ರಾಜೀನಾಮೆಗೆ ಆಗ್ರಹಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ತೀವ್ರ ವಾಗ್ದಾಳಿ ನಡೆಸಿದರು:
- ನೈತಿಕತೆ ಇಲ್ಲ: “ಒಳಮೀಸಲಾತಿ ಬಗ್ಗೆ ಒಂದು ದಿನವೂ ಮಾತನಾಡದ ಪ್ರಿಯಾಂಕ್ ಖರ್ಗೆ ಅವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.”
- ಫೇಲ್ ಕ್ಯಾಂಡಿಡೇಟ್: “ಪ್ರಿಯಾಂಕ್ ಖರ್ಗೆ ಒಬ್ಬ ಫೇಲ್ ಕ್ಯಾಂಡಿಡೇಟ್. ಅವರು ತಮ್ಮ ತಂದೆಯ ನೆರಳಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೇಳಲು ಅವರೇನು ನನ್ನ ಯಜಮಾನರಲ್ಲ, ನಾನು ಅವರ ಸ್ವಯಾರ್ಜಿತ ಆಸ್ತಿಯೂ ಅಲ್ಲ.”
- ಅವಿವೇಕಿಗಳಿಗೆ ಉತ್ತರವಿಲ್ಲ: “ಕಾಂಗ್ರೆಸ್‌ನ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದೇನೆ ಅಷ್ಟೇ. ಜನರೇ ಕಾಂಗ್ರೆಸ್ ನಾಯಕರ ಫೋಟೋಗಳಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ. ನನ್ನ ಬಗ್ಗೆ ಏನೇ ಅಂದರೂ ಅಂತಹ ಅವಿವೇಕಿಗಳಿಗೆ ಉತ್ತರ ಕೊಡಲು ನಾನು ಹೋಗುವುದಿಲ್ಲ,” ಎಂದು ಮಾರ್ಮಿಕವಾಗಿ ನುಡಿದರು.


