DK Shivakumar Book: ಡಿಕೆ ಶಿವಕುಮಾರ್ ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಿದ ಸಿದ್ದರಾಮಯ್ಯ!

ಬೆಂಗಳೂರು: ಕರ್ನಾಟಕದ ಉಪ ಮುಖ್ಯಮಂತ್ರಿ (ಡಿಸಿಎಂ) ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಇದೀಗ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅವರು ರಚಿಸಿದ ‘ನೀರಿನ ಹೆಜ್ಜೆ’ ಕೃತಿಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಲೋಕಾರ್ಪಣೆಗೊಂಡಿದೆ.. ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನೀರು ಕೇವಲ ಸಂಪನ್ಮೂಲವಲ್ಲ, ಅದು ‘ನೀಲಿ ಬಂಗಾರಕ್ಕೆ’ ಸಮಾನ ಎಂದು ಬಣ್ಣಿಸಿದರು ಮತ್ತು ರಾಜ್ಯದ ನೀರಾವರಿ ಯೋಜನೆಗಳ ಕುರಿತು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

​’ನೀರಿನ ಹೆಜ್ಜೆ’ ಕೃತಿಯು ನೀರಿನ ಕುರಿತಾದ ಆಳವಾದ ಸಂಶೋಧನೆಯ ಫಲವಾಗಿದ್ದು, ಇದರಲ್ಲಿ ನೀರಿನ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದಗಳು, ರಾಜ್ಯದ ಎಲ್ಲಾ ಪ್ರಮುಖ ನದಿ ವಿವಾದಗಳು ಮತ್ತು ಈ ಸಮಸ್ಯೆಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತೆಗೆದುಕೊಂಡ ಮಹತ್ವದ ನಿರ್ಧಾರಗಳನ್ನು ದಾಖಲಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದೇವೇಗೌಡರ ಅಂತರಾಷ್ಟ್ರೀಯ ನೀರಾವರಿ ತೀರ್ಮಾನಗಳನ್ನು ಶ್ಲಾಘಿಸಿ, ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

​ಜಲ ವಿವಾದಗಳು ಇವತ್ತಿನದಲ್ಲ:

​ಭಾಷಣದಲ್ಲಿ, ಡಿಸಿಎಂ ಶಿವಕುಮಾರ್ ಅವರು ನೀರಾವರಿ ವಿವಾದಗಳು ಇಂದಿನ ಸಮಸ್ಯೆಗಳಲ್ಲ, ಅವು “ಹಿಂದಿನ ಕಾಲದಿಂದಲೂ ಬಂದಿರುವ ವಿವಾದಗಳು” ಎಂಬುದನ್ನು ಒತ್ತಿ ಹೇಳಿದರು. ಪುರಾಣಗಳಲ್ಲಿಯೂ ಸಹ ನೀರಿನ ವಿವಾದಗಳ ಬಗ್ಗೆ ಉಲ್ಲೇಖಗಳಿವೆ ಎಂದು ತಿಳಿಸಿದರು.

​ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ತಮಗೆ ವಹಿಸಿಕೊಟ್ಟಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದ ಅವರು, “ನೀರಿಗೆ ಬಣ್ಣವಿಲ್ಲ, ಜಾತಿ ಇಲ್ಲ, ಧರ್ಮ ಇಲ್ಲ. ನಮ್ಮ ಜೀವವೇ ಜಲ ಜೀವ” ಎಂದು ಸ್ಪಷ್ಟ ಸಂದೇಶ ನೀಡಿದರು. ಈ ಅವಧಿಯಲ್ಲಿ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ, ರೈತನ ಬದುಕನ್ನು ಹಸನುಗೊಳಿಸುವುದೇ ತಮ್ಮ ಪ್ರಮುಖ ಗುರಿ ಎಂದು ಘೋಷಿಸಿದರು.

ಇದನ್ನೂ ಓದಿ: ಸಿಗ್ನಲ್ ಇಲ್ಲದೆಯೂ ಕರೆ ಮಾಡಿ!

​ಟೀಕೆಗಳಿಗಿಂತ ಕೆಲಸ ಮುಖ್ಯ:

​ಇತ್ತೀಚೆಗೆ ನಡೆದ ಕಾವೇರಿ ಆರತಿ ವಿಚಾರದಲ್ಲಿ ನಡೆದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂದು ಹೇಳಿದರು. ಮೇಕೆದಾಟು ಯೋಜನೆಯ ಪರವಾಗಿ ಕಾಂಗ್ರೆಸ್ ಪಕ್ಷ ನಡೆಸಿದ ಪಾದಯಾತ್ರೆ ಮತ್ತು ಕಾನೂನು ಹೋರಾಟದ ಶ್ರಮದ ಫಲವೇ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಎಂದು ಉಲ್ಲೇಖಿಸಿದರು. “ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದ್ದೇ ಇದೆ” ಎಂಬ ಮಾತುಗಳೊಂದಿಗೆ ತಮ್ಮ ಕಾರ್ಯದಕ್ಷತೆಯನ್ನು ಸಮರ್ಥಿಸಿಕೊಂಡರು.

​ಕೇಂದ್ರದ ನೆರವಿನ ವಿಷಯದಲ್ಲಿ ರಾಜ್ಯದ ಬಿಜೆಪಿ ಸಂಸದರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ಅವರು ರಾಜ್ಯದ ನೀರಾವರಿ ಅಭಿವೃದ್ಧಿಗೋಸ್ಕರ ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ. ಬದಲಿಗೆ, ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದೇ ಅವರ ಕೆಲಸ ಆಗಿದೆ ಎಂದು ಆರೋಪಿಸಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories