ಡಿಕೆ ಶಿವಕುಮಾರ್‌ಗೆ ಬಲಗಡೆಯ ಹೂ ನೀಡಿದ ಗೋಕರ್ಣ ಮಹಾಗಣಪತಿ!
ಕಾರವಾರ: ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಅಧಿಕಾರ ಹಂಚಿಕೆ’ಯ ಸೂತ್ರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಡಿ.ಕೆ. ಶಿವಕುಮಾರ್ ಅವರು (DK Shivakumar) ಶುಕ್ರವಾರ (ಡಿಸೆಂಬರ್ 19, 2025) ಉತ್ತರ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಶಕ್ತಿ ಪ್ರದರ್ಶನದ ಜೊತೆಗೆ ‘ದೈವ’ ಪ್ರಸಾದಕ್ಕೆ (Karnataka Politics) ಮೊರೆ ಹೋಗಿದ್ದಾರೆ.
ಗೋಕರ್ಣ ಮಹಾಗಣಪತಿಯ ‘ಬಲಗಡೆ’ ಆಶೀರ್ವಾದ
ಗೋಕರ್ಣದ ಪವಿತ್ರ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿದ ನಂತರ, ಶಿವಕುಮಾರ್ ಅವರು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅರ್ಚಕರು ಡಿಕೆಶಿ ಅವರು ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡಿ ಗಣಪತಿಯ ತಲೆಯ ಮೇಲೆ ಹೂವಿಟ್ಟು ಪ್ರಾರ್ಥಿಸಿದಾಗ, ಗಣಪತಿಯು ಬಲಗಡೆಯಿಂದ ಹೂವಿನ ಪ್ರಸಾದ ನೀಡಿದ್ದಾನೆ. ಧಾರ್ಮಿಕ ನಂಬಿಕೆಯ ಪ್ರಕಾರ ಬಲಗಡೆಯಿಂದ ಹೂವು ಬೀಳುವುದು ಕಾರ್ಯ ಸಿದ್ಧಿಯ ಸಂಕೇತ ಎನ್ನಲಾಗಿದ್ದು, ಇದು ಡಿಕೆಶಿ ಬೆಂಬಲಿಗರಲ್ಲಿ ಹೊಸ ಉತ್ಸಾಹ ತುಂಬಿದೆ.
ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ ಏಕಾಂತ ಪೂಜೆ
ಅಂಕೋಲಾ ತಾಲ್ಲೂಕಿನ ಕಾರಣಿಕ ಕ್ಷೇತ್ರವೆಂದೇ ಹೆಸರಾದ ಆಂದ್ಲೆ ಗ್ರಾಮದ ಜಗದೀಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಡಿಕೆಶಿ ಅವರು ನಡೆಸಿದ ಪೂಜೆ ಅತ್ಯಂತ ರಹಸ್ಯವಾಗಿತ್ತು. ಜೊತೆಗಿದ್ದ ಸಚಿವರು ಮತ್ತು ಶಾಸಕರನ್ನು ಗರ್ಭಗುಡಿಯಿಂದ ಹೊರಗಿಟ್ಟು, ಸುಮಾರು ಒಂದೂವರೆ ಗಂಟೆಗಳ ಕಾಲ ಬಾಗಿಲು ಮುಚ್ಚಿ ಏಕಾಂತವಾಗಿ ‘ಪ್ರಶ್ನಾ ಕಾರ್ಯ’ ನಡೆಸಿದರು. ಅಡಿಕೆ ಹೂವಿನ (ಹಿಂಗಾರ) ಮೂಲಕ ದೇವಿಯ ಇಚ್ಛೆಯನ್ನು ಕೇಳಿದಾಗ, ಅಲ್ಲಿಯೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಅರ್ಚಕರು ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯಾಶನಲ್ ಫಾರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ ನೇಮಕಾತಿ ಆರಂಭ: ಜನವರಿ 18ರೊಳಗೆ ಅರ್ಜಿ ಸಲ್ಲಿಸಿ
ಒಪ್ಪಂದದ ಗುಟ್ಟು ಬಿಚ್ಚಿಟ್ಟ ಡಿಕೆಶಿ
ದೇಗುಲ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಂದು ಒಪ್ಪಂದವಿದೆ. ಆ ಒಪ್ಪಂದಕ್ಕೆ ಹೈಕಮಾಂಡ್ ಸಾಕ್ಷಿಯಾಗಿದೆ. ನಾವು ಅದರಂತೆಯೇ ನಡೆಯುತ್ತೇವೆ,” ಎಂದು ಹೇಳುವ ಮೂಲಕ ಸಿಎಂ ಕುರ್ಚಿಯ ಮೇಲಿನ ತಮ್ಮ ಹಕ್ಕನ್ನು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ.



