Egg Controversy : ಬೊಮ್ಮಾಯಿಗೆ ಮೊಟ್ಟೆ ಸಂಕಟ: ಲಿಂಗಾಯತರಿಂದಲೇ ಸರ್ಕಾರ ಪತನ ಎಂದ ಸ್ವಾಮೀಜಿ

ಬೆಂಗಳೂರು : ಪರಿಷತ್ ಚುನಾವಣೆ ಸವಾಲಿನ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮೊಟ್ಟೆ ಕಂಟಕ (Egg Controversy) ಎದುರಾಗಿದೆ. ಶಾಲೆ ಹಾಗೂ ಅಂಗನವಾಡಿ ಗಳಲ್ಲಿ ಅಪೌಷ್ಟಿಕತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ವಿತರಿಸಲು ನಿರ್ಧರಿಸಿದ್ದ ಮೊಟ್ಟೆ ರಾಜ್ಯ ಸರ್ಕಾರಕ್ಕೆ ತೀವ್ರ ಸಂಕಟ ತರೋ ಮುನ್ಸೂಚನೆ ನೀಡಿದ್ದು ರಾಜ್ಯ ಸರ್ಕಾರದ ಕ್ರಮಕ್ಕೆ ಲಿಂಗಾಯತ ಸ್ವಾಮೀಜಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸರ್ಕಾರ ತೀರ್ಮಾನ ಹಿಂಪಡೆಯದಿದ್ದರೇ, ಲಿಂಗಾಯತರಿಂದಲೇ ಸರ್ಕಾರ ಪತನವಾಗಲಿದೆ ಎಂಬ ಎಚ್ಚರಿಕೆಯನ್ನು ಲಿಂಗಾಯತ ಶ್ರೀಗಳು ಸರ್ಕಾರಕ್ಕೆ ರವಾನಿಸಿದ್ದಾರೆ.

ಕರ್ನಾಟಕದಲ್ಲಿ ಬಹುಸಂಖ್ಯಾತ ಲಿಂಗಾಯತ ಸಮುದಾಯವಿದೆ. ಶಾಲೆಗಳಲ್ಲಿ ಸಸ್ಯಹಾರ ಬಳಕೆ ಈ ಹಿಂದಿನಿಂದಲೂ ರೂಢಿಯಲ್ಲಿದೆ. ಹೀಗಿರುವಾಗ ಸರ್ಕಾರ ಪೌಷ್ಟಿಕತೆ ಹೆಸರಿನಲ್ಲಿ ಸಸ್ಯಹಾರಿ ಮಕ್ಕಳಿಗೆ ಮೊಟ್ಟೆ ವಿತರಿಸುವ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಲಿಂಗಾಯತ್ ಸಮುದಾಯದ ಹಲವು ಸ್ವಾಮೀಜಿಗಳು ಕಿಡಿಕಾರಿದ್ದಾರೆ.

ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು. ಅದನ್ನು ಬಿಟ್ಟು ಬಹುತೇಕ ಸಸ್ಯಹಾರಿಗಳೇ ಹೆಚ್ಚಿರುವ ಕರ್ನಾಟಕದಂತಹ ರಾಜ್ಯದಲ್ಲಿ ಮೊಟ್ಟೆ ವಿತರಣೆಯಂತಹ ತೀರ್ಮಾನದ ಮೂಲಕ ಸಸ್ಯಹಾರಿಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಇದು ಸರಿಯಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆ ಹಣ್ಣು ಕೊಡಿ ಎಂಬ ವಾದವೂ ಸರಿಯಲ್ಲ. ಶಾಲೆಗಳಲ್ಲಿ ಮಕ್ಕಳನ್ನು ಮಾಂಸಹಾರಿ, ಸಸ್ಯಹಾರಿ ಎಂದು ವರ್ಗೀಕರಣ ಮಾಡುವಂತೆ ಮಾಡುವ ಈ ಯೋಜನೆ ಅಗತ್ಯವಾದರೂ ಏನಿದೆ ಎಂದು ಸ್ವಾಮೀಜಿಗಳು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಾತ್ರವಲ್ಲ ಈ ಹಿಂದೆ ಜೆಡಿಎಸ್,ಕಾಂಗ್ರೆಸ್ ಸರ್ಕಾರಗಳು ವಿರೋಧದ ಕಾರಣಕ್ಕೆ ಕೈ ಬಿಟ್ಟ ಈ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲೇ ಬೇಕೆಂದು ಹೊರಟಿರೋದರ ಹಿಂದಿನ ಹುನ್ನಾರವೇನು ಎಂದು ಸ್ವಾಮೀಜಿಗಳು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಇನ್ನು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಶ್ರೀಗಳು ಹುಬ್ಬಳ್ಳಿಯಲ್ಲಿ ಮಾತನಾಡಿದ್ದು ಈಗಾಗಲೇ ಈ ಯೋಜನೆಯನ್ನು ವಿರೋಧಿಸಿ ಹಲವು ಲಿಂಗಾಯತ್ ಸಮುದಾಯದ ಶ್ರೀ ಗಳು ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ನಾವು ಇನ್ನು ಯಾರೊಂದಿಗೂ ಮಾತನಾಡುವುದಿಲ್ಲ. ಒಂದೊಮ್ಮೆ ಸರ್ಕಾರ ಈ ಯೋಜನೆಯನ್ನು ಕೈಬಿಡದೇ ಹೋದಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮಾತ್ರವಲ್ಲ ಲಿಂಗಾಯತ್ ರು,ಬ್ರಾಹ್ಮಣರು ಸೇರಿದಂತೆ ಮೇಲ್ವರ್ಗದ ಮತದಿಂದಲೇ ಸರ್ಕಾರ ಕಟ್ಟಿದ ಬಿಜೆಪಿ ಈ ಯೋಜನೆ ಕೈಬಿಡದೇ ಹೋದಲ್ಲಿ ಲಿಂಗಾಯತ್ ರಿಂದಲೇ ಸರ್ಕಾರ ಪತನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಏಳು ಬೀಳುಗಳ ಬಳಿಕ ಕೊನೆಗೂ ಸರ್ಕಾರ ಸ್ಥಿರವಾಗಿದೆ ಎಂದು ಬಿಜೆಪಿ ಸಂಭ್ರಮಿಸುವ ಹೊತ್ತಿನಲ್ಲೇ ಕಮಲ ಪಾಳಯಕ್ಕೆ ಮೊಟ್ಟೆ ಕಂಟಕ ಎದುರಾಗಿದ್ದು ಬೊಮ್ಮಾಯಿ ಸ್ವಜಾತಿಗರಿಂದಲೇ ಎದುರಾದ ಈ ಸಂಕಟಕ್ಕೆ ಹೇಗೆ ಪರಿಹಾರ ಕಂಡುಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ : Cabinet expansion: ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ..? ಮಹತ್ವದ ಮಾಹಿತಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ

ಇದನ್ನೂ ಓದಿ : Madhulika Rawat : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಮಧುಲಿಕಾ ರಾವತ್​​ ನಡೆದುಬಂದ ಹಾದಿಯ ಬಗ್ಗೆ ಇಲ್ಲಿದೆ ಮಾಹಿತಿ

( Egg Controversy to Bommayi : Swamiji calls government fall from Lingayats)

Comments are closed.