ಜನಾರ್ದನ ರೆಡ್ಡಿ, ಶ್ರೀರಾಮುಲು ಮಾಡೆಲ್ ಹೌಸ್‌ಗೆ ಬೆಂಕಿ, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ!

Fire at Janardhan Reddy Sriramulu model house: ಬಳ್ಳಾರಿ: ಇತ್ತೀಚೆಗಷ್ಟೇ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಮತ್ತು ಗುಂಡಿನ ಚಕಮಕಿಯಿಂದ ತತ್ತರಿಸಿದ್ದ ಬಳ್ಳಾರಿಯಲ್ಲಿ ಈಗ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸೇರಿದ ‘ಜಿ ಸ್ಕ್ವೇರ್’ ಲೇಔಟ್‌ನಲ್ಲಿರುವ ಕೋಟಿ ಮೌಲ್ಯದ ‘ಮಾಡೆಲ್ ಹೌಸ್’ ಬೆಂಕಿಗೆ ಆಹುತಿಯಾಗಿದೆ.

ಶುಕ್ರವಾರ ಸಂಜೆ ಸುಮಾರು 6:30ರ ವೇಳೆಗೆ ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಈ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಸುಮಾರು 109 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಈ ಲೇಔಟ್‌ನಲ್ಲಿ ಗ್ರಾಹಕರಿಗೆ ತೋರಿಸಲು ಸುಮಾರು 3 ರಿಂದ 4 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುಸಜ್ಜಿತ ಮನೆಯನ್ನು ನಿರ್ಮಿಸಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.

ಕಾಂಗ್ರೆಸ್ ಶಾಸಕರ ವಿರುದ್ಧ ಸೋಮಶೇಖರ್ ರೆಡ್ಡಿ ಆಕ್ರೋಶ:

ಈ ಘಟನೆಯ ಬಗ್ಗೆ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದಾರೆ. “ಇದು ಆಕಸ್ಮಿಕ ಅವಘಡವಲ್ಲ, ಬದಲಾಗಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕಿಟಕಿಯ ಗಾಜುಗಳನ್ನು ಒಡೆದು ಈ ಕೃತ್ಯ ಎಸಗಲಾಗಿದೆ. ಈ ಹಿಂದೆ ಬ್ಯಾನರ್ ಗಲಾಟೆ ನಡೆದಾಗಲೇ ಬಳ್ಳಾರಿಯನ್ನು ಭಸ್ಮ ಮಾಡುವುದಾಗಿ ಬೆದರಿಕೆ ಹಾಕಿದ್ದರು, ಅದರಂತೆ ಈಗ ಮಾಡಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ.

ಬೆಂಗಳೂರಿನಿಂದ ದೌಡಾಯಿಸಿದ ಜನಾರ್ದನ ರೆಡ್ಡಿ:

ಘಟನೆಯ ಸಮಯದಲ್ಲಿ ವಿಶೇಷ ಅಧಿವೇಶನದ ನಿಮಿತ್ತ ಬೆಂಗಳೂರಿನಲ್ಲಿದ್ದ ಶಾಸಕ ಜನಾರ್ದನ ರೆಡ್ಡಿ, ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿ ಎಸ್ಪಿ ಅವರೊಂದಿಗೆ ಮಾತನಾಡಿದ್ದಾರೆ. ಕೂಡಲೇ ಅಧಿವೇಶನ ಮುಗಿಸಿ ಬಳ್ಳಾರಿಯತ್ತ ಪ್ರಯಾಣ ಬೆಳೆಸಿದ್ದಾರೆ. “ಬ್ಯಾನರ್ ಗಲಾಟೆ ನಡೆದು 15 ದಿನ ಕಳೆಯುವ ಮುನ್ನವೇ ಇಂತಹ ಕೃತ್ಯ ನಡೆದಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾಧಿಕಾರಿಯ ಧಾರ್ಮಿಕ ಭಾವನೆಗಳನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕಿಲ್ಲ’ : ರಾಜ ಶೇಖರಾನಂದ ಸ್ವಾಮೀಜಿ

ಉದ್ವಿಗ್ನಗೊಂಡ ಬಳ್ಳಾರಿ ರಾಜಕಾರಣ:

ಬ್ಯಾನರ್ ಗಲಾಟೆಯ ಮುಂದುವರಿದ ಭಾಗ: ಕೆಲವು ದಿನಗಳ ಹಿಂದೆ ನಡೆದ ಬ್ಯಾನರ್ ಗಲಾಟೆಯಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದರು. ಅಂದಿನಿಂದ ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಗೆತನ ತಾರಕಕ್ಕೇರಿದೆ.

ಪೊಲೀಸ್ ತನಿಖೆ: ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಆಕಸ್ಮಿಕವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಅಗ್ನಿ ಅವಘಡವು ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories