ಮಹಿಳೆಯರ ಖಾತೆಗೆ 2 ಸಾವಿರ, ಬಸ್ಸುಗಳಲ್ಲಿ ಉಚಿತ ಪ್ರಯಾಣ : ಅಧಿಕೃತ ಆದೇಶ

ಬೆಂಗಳೂರು : ಮನೆಯ ಯಜಮಾನಿಯ ಖಾತೆಗೆ 2 ಸಾವಿರ ರೂಪಾಯಿ ಜಮೆಯಾಗುವುದು ಖಚಿತವಾಗಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆಯ (Gruha Lakshmi Scheme) ಜಾರಿಗೆ ಸಚಿವ ಸಂಪುಟದಲ್ಲಿ ತಾತ್ವಿಕ ಅನುಮೋದನೆ ದೊರಕಿದ್ದು, ಯೋಜನೆಯನ್ನು ಜಾರಿಗೊಳಿಸುವಂತೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಮತ್ತು ಹಿರಿಯ ನಾಯಕರೀಕರ ಸಬಲೀಕರಣ ಇಲಾಖೆಯ ಸರಕಾರದ ಜಂಟಿ ಕಾರ್ಯದರ್ಶಿ ಬಿಎಂ ಚಂದ್ರಶೇಖರ್‌ ಅವರು ತಾತ್ವಿಕ ಆದೇಶ ಹೊರಡಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಪ್ರಕಾರ ಕುಟುಂಬದ ಯಜಮಾನಿಗೆ ಪ್ರತೀ ತಿಂಗಳು 2000 ರೂಪಾಯಿ ನೀಡಲಾಗುತ್ತದೆ. ಆದರೆ ಈ ಯೋಜನೆ ನಿಯಮ ಮತ್ತು ಷರತ್ತುಗಳನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಮಹಿಳೆಯರಿಗೆ ರಾಜ್ಯದ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯ ಅನುಷ್ಠಾನಕ್ಕೆ ಸರಕಾರ ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮಹಿಳೆಯರು ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆಯ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ.

2022-23 ನೇ ಸಾಲಿನಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತೀ ತಿಂಗಳು 3 ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಶಿಕ್ಷಣ ಪಡೆದ ನಿರುದ್ಯೋಗಿ ಯುವಕರು ಪ್ರತೀ ತಿಂಗಳು 1,500 ರೂಪಾಯಿ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತದೆ. ಅಲ್ಲದೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಪಡಿತರ ಯೋಜನೆಯಡಿಯಲ್ಲಿ ಪ್ರತೀ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಈ ಐದು ಯೋಜನೆಗಳಿಗೆ ಸರಕಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಯಾವಾಗಿನಿಂದ ಈ ಯೋಜನೆ ಜಾರಿಗೆ ಬರಲಿದೆ ಅನ್ನೋದನ್ನು ಇನ್ನಷ್ಟೆ ತಿಳಿಯಬೇಕಾಗಿದೆ.

ಇದನ್ನೂ ಓದಿ : ಸಿದ್ದರಾಮಯ್ಯ ಪಟ್ಟಾಭಿಷೇಕ, ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ

ಇದನ್ನೂ ಓದಿ : ಕಾಂಗ್ರೆಸ್‌ ನ 5 ಗ್ಯಾರಂಟಿ ಅಧಿಕೃತ ಘೋಷಣೆ : ಸಿಎಂ ಸಿದ್ದರಾಮಯ್ಯ

Comments are closed.