ಸರ್ಕಾರಿ ಸಭೆಗಳಲ್ಲಿ ಕರಿದ ತಿನಿಸುಗಳಿಗೆ ನಿರ್ಬಂಧ : ಸಿರಿಧಾನ್ಯ ಆಧಾರಿತ ತಿನಿಸುಗಳಿಗಷ್ಟೇ ಅವಕಾಶ
ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗುವ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಇನ್ಮುಂದೆ ಕರಿದ ತಿಂಡಿಗಳು ಹಾಗೂ ಸಂಸ್ಕರಿಸಿದ ಆಹಾರಗಳನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ಈ ರೀತಿಯ ಆಹಾರಗಳಿಗೆ ರಾಜ್ಯ ಸರ್ಕಾರ ಕೋಕ್ ನೀಡಿದ್ದು, ಆರೋಗ್ಯಕರ ತಿಂಡಿ ತಿನಿಸುಗಳನ್ನು ಸರ್ಕಾರಿ ಸಭೆ ಸಮಾರಂಭಗಳಲ್ಲಿ ಇರಿಸಲು ಮಹತ್ವದ ಹೆಜ್ಜೆಯನ್ನಟ್ಟಿದೆ. ಹೀಗಾಗಿ ಇನ್ಮುಂದೆ ಸರ್ಕಾರ ಸಭೆ ಸಮಾರಂಭಗಳಲ್ಲಿ ನಿಮಗೆ ಆರೋಗ್ಯಕರ ತಿನಿಸುಗಳು ಮಾತ್ರ ಸಿಗಲಿವೆ.
ಹೌದು..! ಜನರಿಗೆ ಪೌಷ್ಠಿಕಾಂಶದ ಬಗ್ಗೆ ಅರಿವು ಮೂಡಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸುವ ದಿಶೆಯಿಂದ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಇನ್ಮುಂದೆ ಸಾವಯವ ಧಾನ್ಯಗಳಿಂದ ತಯಾರಿಸಿದ ತಿಂಡಿ – ತಿನಿಸುಗಳನ್ನು ಬಳಸಲು ಸಲಹೆ ನೀಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಸಾವಯವ ಹಾಗೂ ಸಿರಿಧಾನ್ಯ ಆಧಾರಿತ ತಿಂಡಿಗಳು ಹಾಗೂ ಪಾನೀಯಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬಯೋಮೆಟ್ರಿಕ್ ಹಾಜರಾತಿ ಪದ್ಧತಿಗೆ ಕೊನೆಗೂ ಬ್ರೇಕ್ : ಕರ್ತವ್ಯ ಆ್ಯಪ್ ಬಳಕೆ ಇನ್ಮುಂದೆ ಕಡ್ಡಾಯ
ಇನ್ನು ಇಂತಹ ಸಭೆಗಳಲ್ಲಿ ಹಣ್ಣು ಹಾಗೂ ತರಕಾರಿ ಆಧಾರಿತ ಸಲಾಡ್ಗಳಿಗೂ ಅವಕಾಶ ನೀಡಲಾಗಿದೆ. ಇದಕ್ಕಾಗಿ ಪಟ್ಟಿಯನ್ನೂ ತಯಾರಿಸಲಾಗಿದೆ. ಸಿರಿಧಾನ್ಯಗಳ ಕುಕ್ಕೀಸ್, ಸಿರಿಧಾನ್ಯಗಳ ಮೊಳಕೆ ಬರಿಸಿದ ಬಿಸ್ಕತ್ತು, ಬೂಂದಿ, ಜೋಳದ ಪಾಪ್ಸ್, ಎನರ್ಜಿ ಬಾರ್, ರಿಬ್ಬನ್ ಪಕೋಡಾ, ಕೋಡುಬಳೆ, ಮುರುಕು, ಸಿರಿಧಾನ್ಯಗಳ ಕ್ರಂಚ್ಬಾರ್, ಮಸಾಲಾ ಕುರುಕಲು ತಿಂಡಿ, ಸಿರಿಧಾನ್ಯಗಳ ಪಫ್, ಕುರುಕಲು ಮಿಕ್ಚ್ಸರ್, ರಾಗಿ – ಬೆಲ್ಲದ ಬಿಸ್ಕತ್ತುಗಳನ್ನು ಸಭೆ, ಸಮಾರಂಭಗಳಲ್ಲಿ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಈ ಮೂಲಕ ಪೌಷ್ಠಿಕಾಂಶ ಆಹಾರ ಸೇವನೆಯ ಮಹತ್ವವನ್ನು ನಾಡಿಗೆ ಸಾರುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.



