ತುಪ್ಪ ಬೇಕು ತುಪ್ಪಾ; ರಾಜ್ಯದಲ್ಲಿ ಕೆಎಂಎಫ್‌ ಇದ್ರೂ ತುಪ್ಪಕ್ಕೆ ಬರ, ಹೊಟೇಲ್ – ಬೇಕರಿ ಮಾಲೀಕರ ಪರದಾಟ

ಬೆಂಗಳೂರು : ಸಮಾರಂಭದಲ್ಲಿ ತಿನ್ನೋ ಸಿಹಿಯಿಂದ ಆರಂಭಿಸಿ ಬೆಳ್ಳಂಬೆಳಗ್ಗೆ ಮನೆಯಲ್ಲಿ ತಿನ್ನೋ ದೋಸೆ ತನಕ ಎಲ್ಲದರ ರುಚಿ ಹೆಚ್ಚಿಸೋಕೆ ಒಂದು ಸ್ಪೂನ್ ತುಪ್ಪ ಬೀಳಲೇ ಬೇಕು. ಆದರೆ ಸದ್ಯ ರಾಜ್ಯದ ತುಪ್ಪ ಉತ್ಪಾದನೆ ಸ್ಥಿತಿ ನೋಡಿದ್ರೇ ಸದ್ಯ ತುಪ್ಪ ನಿಮ್ಮ ಕೈಗೆ ಎಟುಕೋದೇ ಸುಳ್ಳು ಅನ್ನಿಸ್ತಿದೆ. ಹೌದು ಮದುವೆ, ಸಮಾರಂಭ ನಡೆಯೋ ಸೀಸನ್ ನಲ್ಲೇ ರಾಜ್ಯದಲ್ಲಿ ತುಪ್ಪಕ್ಕೆ (Ghee Shortage) ಹಾಹಾಕಾರವೆದ್ದಿದೆ.

ರಾಜ್ಯದಲ್ಲಿ ತುಪ್ಪಕ್ಕೆ ಹಾಹಾಕಾರವೆದ್ದಿದೆ. ಕೆಎಂಎಫ್ ತುಪ್ಪಕ್ಕೆ ದುಪ್ಪಟ್ಟು ಬೇಡಿಕೆ ಬರ್ತಿದ್ದು, ತುಪ್ಪ ಪೂರೈಸಲು ಕೆಎಂಎಫ್ ಹರಸಾಹಸ ಪಡ್ತಿದೆ. ಪ್ರತೀ ವರ್ಷ ಈ ಸೀಸನ್ ನಲ್ಲಿ ನಾರ್ಮಲ್ ಬೇಡಿಕೆಗಿಂತ ಶೇಕಡಾ 5 ರಿಂದ 6 ರಷ್ಟು ತುಪ್ಪದ ಬೇಡಿಕೆ ಹೆಚ್ಚುತ್ತಿತ್ತು. ಆದರೆ ಈ ಬಾರಿ ತುಪ್ಪಕ್ಕೆ 33% ಬೇಡಿಕೆ ಹೆಚ್ಚಳವಾಗಿದೆ. ಪ್ರತಿನಿತ್ಯ ತುಪ್ಪ ಬಳಸೋ ಹೊಟೇಲ್ ಗಳು, ಸ್ವೀಟ್ ಮೇಕರ್ಸ್ ಬೇಡಿಕೆಯಷ್ಟು ತುಪ್ಪ ಸಿಗದೇ ಕಂಗಾಲಾಗಿದ್ದಾರೆ. ಈಗಾಗಲೇ ತುಪ್ಪದ ಕೊರತೆ ಉಂಟಾಗಿ ತುಪ್ಪದ ಪದಾರ್ಥ ತಯಾರಿಸೋದನ್ನೇ ಹಲವು ಹೋಟೆಲ್ ಮತ್ತು ಸ್ವೀಟ್ ಅಂಗಡಿ ಮಾಲೀಕರು ನಿಲ್ಲಿಸಿದ್ದಾರಂತೆ.

ಕಳೆದ ಮೂರು ತಿಂಗಳಿನಿಂದ ತುಪ್ಪದ ಕೊರತೆ ಕಾಡ್ತಿದ್ದು, ಈಗ ಈ ತುಪ್ಪದ ಕೊರತೆ ಹೆಚ್ಚಿದೆ. ಅನೇಕ ಬಾರಿ ಈ ಬಗ್ಗೆ ಕೆಎಂಎಫ್ ಗೆ ಮನವಿ ಮಾಡಿರೋ ಹೋಟೆಲ್ ಮತ್ತು ಸ್ವೀಟ್ ಅಂಗಡಿ ಮಾಲೀಕರು ಬೇಡಿಕೆಗೆ ತಕ್ಕಷ್ಟು ತುಪ್ಪ ಪೊರೈಸುವಂತೆ ಮನವಿ ಮಾಡುತ್ತಲೇ ಇದ್ದಾರೆ.

Ghee Shortage : ಇದ್ದಕ್ಕಿದ್ದಂತೆ ತುಪ್ಪದ ಕೊರತೆಗೆ ಕಾರಣವೇನು ?

  • ಕೆಲ ತಿಂಗಳಿನಿಂದ ಕರ್ನಾಟಕದಲ್ಲಿ ಹಸುಗಳಿಗೆ ಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.
  • ರೋಗಪೀಡಿತ ಹಸುಗಳ ಹಾಲು ಬಳಕೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಹಾಲು ಸಂಗ್ರಹಿಸಿಲ್ಲ
  • ಹಾಲು ಉತ್ಪಾದನೆ ಕಡಿಮೆಯಾದ ಹಿನ್ನೆಲೆ ತುಪ್ಪ ಉತ್ಪಾದನೆಗೆ ಪೆಟ್ಟು
  • ನಂದಿನಿ ತುಪ್ಪದ ದರ ಕಡಿಮೆ, ಹೀಗಾಗಿ ಬೇರೆ ರಾಜ್ಯಗಳಿಂದಲೂ ಬೇಡಿಕೆ
  • ನಂದಿನಿ ತುಪ್ಪಕ್ಕೆ ಈ ಬಾರಿ ಮಿತಿ ಮೀರಿದ ಬೇಡಿಕೆ
  • ದೇಶದಲ್ಲೇ ಅತೀ ಕಡಿಮೆ ಬೆಲೆಗೆ ಮಾರಾಟವಾಗೋ ಎರಡನೇ ಸ್ಥಾನದಲ್ಲಿರೋ ನಂದಿನಿ ತುಪ್ಪ
  • ಮಾಮೂಲಿಗಿಂತ ಶೇಕಡಾ 33% ಹೆಚ್ಚಿದ ಬೇಡಿಕೆ

ಕೆಲ ದಿನಗಳ ಹಿಂದೆಯಷ್ಟೇ ರಾಜಧಾನಿಯಲ್ಲಿ ಹಾಲಿನ ಪೂರೈಕೆಯಲ್ಲಿ ಕುಸಿತವಾಗಿದೆ ಎಂಬ ಮಾತು ಕೇಳಿಬಂದಿತ್ತು. ಈಗ ಈ ಕೊರತೆ ತುಪ್ಪಕ್ಕೂ ವ್ಯಾಪಿಸಿದ್ದು ಕೆಎಂಎಫ್ ಬೇಡಿಕೆ ಈಡೇರಿಸಲು ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಬೇಸಿಗೆಗೆ ಶರ್ಬತ್‌, ಲಸ್ಸಿಕ್ಕಿಂತ ಕೋಕಮ್ ಪಾನೀಯ ಬೆಸ್ಟ್‌

ಇದನ್ನೂ ಓದಿ : ಮಹಾರಾಷ್ಟ್ರ ಆರೋಗ್ಯ ವಿಮಾ ಯೋಜನೆಯನ್ನು ಹಿಂಪಡೆಯುವಂತೆ ರಾಜ್ಯ ಸರಕಾರದಿಂದ ಎಚ್ಚರಿಕೆ

Comments are closed.