HD Kumaraswamy : ಸಹಕಾರ ಇಲಾಖೆಯಲ್ಲಿ ಲಂಚಾವತಾರ!! ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೀದರ್: ರಾಜ್ಯದ ಬಡ ಮಕ್ಕಳಿಗೆ ಪಾರದರ್ಶಕವಾಗಿ ಉದ್ಯೋಗ ಕೊಡುವ ಜವಾಬ್ದಾರಿಯನ್ನು ರಾಜ್ಯ ಸರಕಾರವು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ನೇರ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು; “ಪಿಎಸ್ʼಐ ನೇಮಕಾತಿ ಅಷ್ಟೇ ಅಲ್ಲ ಸಹಕಾರಿ ಕ್ಷೇತ್ರದಲ್ಲಿಯೂ ಸರಕಾರಿ ಉದ್ಯೋಗಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.

ಬೀದರ್ʼನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಅಲ್ಲಿ ಒಂದೊಂದು ಹುದ್ದೆಯ ನೇಮಕ 25ರಿಂದ 50 ಲಕ್ಷ ರೂಪಾಯಿವರೆಗೆ ಲಂಚವನ್ನು ನಿಗದಿ ಮಾಡಲಾಗಿದೆ. ಇದು ಎಲ್ಲ ಜಿಲ್ಲೆಗಳ ಹಾಲು ಒಕ್ಕೂಟಗಳಲ್ಲೂ ನಡೆಯುತ್ತಿದೆ. ಈ ಮಾಹಿತಿ ನನಗೆ ಮಾತ್ರವಲ್ಲದೆ, ಈವರೆಗೆ ಆಡಳಿತ ನಡೆಸಿದ, ಈಗ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿದೆ ಎಂದರು.

ಎಲ್ಲ ಇಲಾಖೆಗಳಲ್ಲಿಯೂ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತಿಲ್ಲ. ಕಮೀಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಸಹಕಾರಿ ಸಚಿವರು ವಾಸ್ತವಾಂಶವನ್ನು ಜನರ ಮುಂದೆ ಇಡಲಿ ಎಂದು ಅವರು ಒತ್ತಾಯಿಸಿದರು.

ಕೆಪಿಎಸ್ಸಿಯನ್ನು ಶುದ್ಧ ಮಾಡಿದರಾ?

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಕೆಪಿಎಸ್ಸಿಯನ್ನು (ಕರ್ನಾಟಕ ಲೋಕಸೇವಾ ಆಯೋಗ) ಶುದ್ಧ ಮಾಡುತ್ತೇವೆ ಎಂದು ಶ್ಯಾಂಭಟ್ ಎನ್ನುವ ಅಧಿಕಾರಿಯನ್ನು ಅಲ್ಲಿಗೆ ತಂದು ಕೂರಿಸಿದರು. ಆಮೇಲೆ ಅಲ್ಲಿದ ರೇಟು ಎಲ್ಲಿಗೆ ಹೋಯಿತು? ಒಂದೊಂದು ಅಸಿಸ್ಟಂಟ್ ಕಮೀಷನರ್ ಹುದ್ದೆಗೆ 1ರಿಂದ 1.5 ಕೋಟಿ ರೂಪಾಯಿವರೆಗೂ ಆ ರೇಟು ಹೋಗಿದೆ. ನೇಮಕಾತಿ ಮಾಡುವುದಕ್ಕೆ ಎಲ್ಲರ ಬಳಿಯೂ ಹಣ ಪಡೆದಿದ್ದಾರೆ. ಅದರಲ್ಲಿ ಹಣ ಕೊಟ್ಟವರಿಗೆ ಇನ್ನೂ ಕೆಲಸ ಸಿಗದೆ, ಅತ್ತ ಹಣವೂ ವಾಪಸ್ ಸಿಗದೇ ಅಲೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ನೇರ ಮಾತುಗಳಲ್ಲಿ ಹೇಳಿದರು.

ಬಡಮಕ್ಕಳು ಇಂಥವರಿಗೆ ಟ್ರ್ಯಾಪ್ ಆಗುತ್ತಿದ್ದಾರೆ. ಅತ್ತ ಕೆಲಸವೂ ಸಿದಗದೇ ಇತ್ತ ಕೊಟ್ಟ ಹಣವೂ ವಾಪಸ್ ಬರದೇ ಒದ್ದಾಡುತ್ತಿದ್ದಾರೆ. ಸರಕಾರಕ್ಕೆ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿ ಎನ್ನುವುದು ಇದ್ದರೆ ಮೊದಲು ಇಂಥ ಕೆಟ್ಟ ವ್ಯವಸ್ಥೆಯನ್ನು ಸರಿ ಮಾಡಬೇಕು. ಅಂಥ ಯಾವುದಾದರೂ ಕ್ರಮವನ್ನು ಸರಕಾರ ಕೈಗೊಂಡಿದೆಯಾ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ರಾಜ್ಯದ ಜನರಿಗೆ ಈಗ ನಡೆಯುತ್ತಿರುವ ಪಿಎಸ್ʼಐ ನೇಮಕಾತಿ ಅಕ್ರಮ ಒಂದು ಚಿಕ್ಕ ಉದಾಹಣೆ ಅಷ್ಟೆ. ಆದರೆ, ಸಹಕಾರ ಕ್ಷೇತ್ರದಲ್ಲಿ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ನೀಡಲು ಮಂತ್ರಿಗಳಿಗೇ ಅಡ್ವಾನ್ಸ್ ನೀಡಬೇಕು. ಇನ್ನು ಸರಕಾರಿ ಉದ್ಯೋಗ ಸಿಕ್ಕಿದರೆ ಸಾಕು ಜೀವನ ಚೆನ್ನಾಗಿರುತ್ತದೆ ಎಂದು ಮನೆ, ಮಠ ಮಾರಿ 25ರಿಂದ 50 ಲಕ್ಷ ರೂಪಾಯಿ ಕೊಟ್ಟು ಕೆಲಸಕ್ಕೆ ಸೇರುತ್ತಾರೆ. ಈಗ ಪಿ.ಎಸ್ʼಐ ಪ್ರಕರಣ ಹೊರಗೆ ಬಂದಿದೆ. ಅದರಂತೆ ಸಾಕಷ್ಟು ಪಕ್ರರಣಗಳು ಸರಕಾರದ ಮಟ್ಟದಲ್ಲಿ ನಡೆಯುತ್ತಿವೆ. ಇದಕ್ಕೆ ಸರಕಾರ ಅಂತಿಮ ತೆರೆ ಎಳೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯಿಸಿದರು.

ಪಿಎಸ್ʼಐ ಹಗರಣದಲ್ಲಿ ದೊಡ್ಡ ರಾಜಕಾರಣಿಗಳ ಪಾತ್ರ ಇದೆ ಅಂತ ನಾನು ಹೇಳುವುದಿಲ್ಲ. ಇದರಲ್ಲಿ ಕೆಳಹಂತದಲ್ಲಿ ಕೆಲ ಟೀಮ್ʼಗಳಿವೆ. ಸಿದ್ದರಾಮಯ್ಯ ಕಾಲದಲ್ಲಿ ಶಿವಕುಮಾರ್ ಎಂಬ ಕಿಂಗ ಪಿನ್ ಒಬ್ಬನನ್ನು ಬಂಧಿಸಿದರು. ಆದರೆ, ಏನೂ ಕ್ರಮವನ್ನೂ ಕೈಗೊಳ್ಳಲಿಲ್ಲ. ಹಾಗಾಗಿ ಇಂದಿನ ಪಿಎಸ್ʼಐ ಪರೀಕ್ಷೆಯಲ್ಲಿ ಪ್ರಾಮಾಣಿಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮುಖ್ಯಮಂತ್ರಿಗಳು ಪಾರದರ್ಶಕ ತನಿಖೆ ನಡೆಸಿ ನಿಜವಾದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ಮಾಡಿರುವುದಕ್ಕೆ ನನ್ನ ಸಹಮತವಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದಲ್ಲಿ ಯಾರಿಗೂ ಯಾರ ಮೇಲೆಯೂ ಹಿಡಿತವಿಲ್ಲ. ಬಿಜೆಪಿ ಹೈಕಮಾಂಡ್ ಚುನಾವಣೆಗಷ್ಟೇ ಸೀಮಿತವಾಗಿದೆ. ಬಿಜೆಪಿ ಜನರ ಬದುಕಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದೂ ಇಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ರಾಜ್ಯ ಸರಕಾರದಲ್ಲಿ 40% ಕಮೀಷನ್ ದಂಧೆ ಬಗ್ಗೆ ಮೌನವಾಗಿದ್ದಾರೆ. ದೇಶದಲ್ಲಿ ಜನಸಾಮಾನ್ಯನ ಜೀವನ ದುಬಾರಿಯಾಗಿದೆ. ಪಕ್ಕದ ಶ್ರೀಲಂಕಾದಲ್ಲಿರುವ ಪರಿಸ್ಥಿತಿ ಭಾರತದಲ್ಲಿ ಬಂದರೂ ನಾವು ಆಶ್ಚರ್ಯಪಡಬೇಕಾಗಿಲ್ಲ ಎಂದು ಸರಕಾರದ ವಿರುದ್ಧ ಅವರು ಹರಿಹಾಯ್ದರು.

ಲೋಕಾಯುಕ್ತವನ್ನು ಮುಗಿಸಿದ ಕಾಂಗ್ರೆಸ್

ಕಾಂಗ್ರೆಸ್ ಸರಕಾರವಿದ್ದಾಗ ಅವರ ಹಗರಣಗಳನ್ನು ಮುಚ್ಚಿಹಾಕಿಕೊಳ್ಳಲು ಲೋಕಾಯುಕ್ತಕ್ಕಿದ್ದ ಅಧಿಕಾರಕ್ಕೆ ಕತ್ತರಿ ಹಾಕಿದರು. ಇವತ್ತು ನೋಡಿದರೆ ಅದೇ ಪಕ್ಷದ ನಾಯಕರು ಹಾದಿಬೀದಿಯಲ್ಲಿ ನಿಂತು ಭ್ರಷ್ಟರನ್ನು ಬಂಧಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. 2006ರಲ್ಲಿ ನಾನು ಅಧಿಕಾರದಲ್ಲಿದಾಗ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೆ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ದೇಶದ ಪ್ರಜೆಗಳು ಚೆನ್ನಾಗಿರಬೇಕು ಎಂಬ ಪ್ರಜ್ಞೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ. ರಾಜ್ಯವನ್ನು ಲೂಟಿ ಹೊಡೆಯುತ್ತಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನನಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ ಜನರ ಕೆಲಸಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನುಇವರಿಗೆಲ್ಲ ತೋರಿಸಿ ಕೊಡುತ್ತೇನೆ ಎಂದರು ಮಾಜಿ ಮುಖ್ಯಮಂತ್ರಿಗಳು.

ಜಲಧಾರೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾರು ಏನೇ ಮಾತನಾಡಿದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಬಾದಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ್ದು ನಾನು. ಎರಡೂ ರಾಷ್ಟ್ರಿಯ ಪಕ್ಷಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ನಾನು ಕಡಿಮೆ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಇನ್ನ ನನಗೆ ಪೂರ್ಣ ಪ್ರಮಾಣದ ಸರಕಾರ ನೀಡಿದರೆ ಇನಷ್ಟು ಜನ ಪರ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು.

ಇದನ್ನೂ ಓದಿ : home minister araga Jnanendra : ಹುಬ್ಬಳ್ಳಿ ಗಲಭೆಯಲ್ಲಿ ಖಾಕಿ ನಡೆ ಪ್ರಶಂಸಿಸಿದ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ :Pakistani degrees : ಪಾಕಿಸ್ತಾನದಲ್ಲಿ ಪಡೆದ ಶೈಕ್ಷಣಿಕ ಪದವಿ ಮಾನ್ಯವಲ್ಲ:ಯುಜಿಸಿ

(HD Kumaraswamy reavels shocking information)

Comments are closed.