home minister araga Jnanendra : ಹುಬ್ಬಳ್ಳಿ ಗಲಭೆಯಲ್ಲಿ ಖಾಕಿ ನಡೆ ಪ್ರಶಂಸಿಸಿದ ಸಚಿವ ಆರಗ ಜ್ಞಾನೇಂದ್ರ

ಉಡುಪಿ : home minister araga Jnanendra : ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರ ನಡೆ ಶ್ಲಾಘನೀಯ. ಇಲ್ಲವಾದಲ್ಲಿ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಗಲಭೆ ನಡೆದ ಒಂದು ಗಂಟೆ ಒಳಗಾಗಿ ನಾವು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದರು.


ಈ ಪ್ರಕರಣದಲ್ಲಿ ಸುಮಾರು 1500 ಮಂದಿ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸ್​ ಫೋರ್ಸ್ ಕಡಿಮೆ ಇದ್ದರೂ ಸಹ ನಾಜೂಕಾಗಿ ಈ ಪರಿಸ್ಥಿತಿಯನ್ನು ಹ್ಯಾಂಡಲ್​ ಮಾಡಿದ್ದಾರೆ. ಪೊಲೀಸ್ ಬಹಳ ಚೆನ್ನಾಗಿ ಪ್ರಕರಣವನ್ನು ನಿಭಾಯಿಸಿದ್ದಾರೆ,ಇಲ್ಲವಾದರೆ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಹುಬ್ಬಳ್ಳಿಯನ್ನು ಮತ್ತೊಂದು ಕೆಜೆ ಹಳ್ಳಿ, ಡಿಜೆಹಳ್ಳಿ ಆಗದಂತೆ ನೋಡಿಕೊಂಡ ಪೊಲೀಸರಿಗೆ ಅಭಿನಂದನೆಗಳು ಎಂದು ಹೇಳಿದರು.


ಇನ್ನು ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ರಾಜ್ಯ ಸರ್ಕಾರದ ವೈಫಲ್ಯತೆ ಕಾರಣ ಎಂಬ ಕಾಂಗ್ರೆಸ್​ ಆರೋಪವನ್ನು ತಳ್ಳಿ ಹಾಕಿದ ಆರಗ ಜ್ಞಾನೇಂದ್ರ ಹುಬ್ಬಳ್ಳಿ ಗಲಾಟೆ ರಾಜ್ಯ ಸರಕಾರ ವೈಫಲ್ಯತೆ ಹೇಗೆ ಆಗುತ್ತದೆ? ಈ ಗಲಭೆಯನ್ನು ಎತ್ತಿ ಬೆಳೆಸಿದವರೇ ಕಾಂಗ್ರೆಸ್ಸಿಗರು. ಒಂದು ಕೋಮನ್ನು ಎತ್ತಿ ಕಟ್ಟಿ, ಅವರು ತಪ್ಪು ಮಾಡಿದರೂ ಎನೂ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಪಿಎಫ್​​ಐನಂತಹ ಮತೀಯ ಸಂಘಟನೆಗಳ ವಿರುದ್ಧದ ಬಹುತೇಕ ಕೇಸ್​ಗಳನ್ನು ವಿತ್​ ಡ್ರಾ ಮಾಡಿದ್ದು ಕಾಂಗ್ರೆಸ್​. ಹುಬ್ಬಳ್ಳಿ ಪ್ರಕರಣದಲ್ಲಿ ಇದುವರೆಗೂ 738 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಗಲಾಟೆಯಲ್ಲಿ ಭಾಗಿಯಾದ ಸಮಾಜ ಘಾತುಕ ಶಕ್ತಿಗಳನ್ನು ಬೇರು ಸಹಿತ ಕೀಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.


ರಾಜ್ಯದಲ್ಲಿಯೂ ಬುಲ್ಡೋಜರ್ ಓಡುತ್ತಾ ಎಂಬ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಅವರು, ಕರ್ನಾಟಕ ಬೇರೆ ಉತ್ತರ ಪ್ರದೇಶ ಬೇರೆ, ಅಲ್ಲಿರುವ ಪರಿಸ್ಥಿತಿಗಳೆ ಬೇರೆ. ಅಲ್ಲಿ ಯೋಗಿ ಆದಿತ್ಯನಾಥ ಅವರು ಬರುವ ಮೊದಲು ರೌಡಿಗಳೆ ಆಡಳಿತ ಮಾಡಿದ್ದರು .ಯೋಗಿ ಆದಿತ್ಯನಾಥ್​ ಬಂದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಅನಿವಾರ್ಯ ಎಂದಾಗ ಈ ರೀತಿಯ ದಂಡ ಪ್ರಯೋಗ ಮಾಡಬೇಕಾಗುತ್ತದೆ. ಕಾನೂನು, ಸಂವಿಧಾನಗಳಿಗೆ ಬೆಲೆ ನೀಡದವರಿಗೆ ಈ ರೀತಿಯೇ ಪಾಠ ಕಲಿಸಬೇಕಾಗುತ್ತೆ. ಸಧ್ಯಕ್ಕೆ ಈ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ ಎಂದು ಹೇಳಿದರು.


ಪಿಎಸ್​ಐ ಪರೀಕ್ಷೆಯಲ್ಲಿ ಅವ್ಯವಹಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು ಪಿಎಸ್ ಐ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಗೊತ್ತಾದ ತಕ್ಷಣ ಸಿಓಡಿ ತನಿಖೆಗೆ ಆದೇಶಿಸಿದ್ದೆ. ಒಂದು ಒಳ್ಳೆಯ ತಂಡ ರಚನೆ ಮಾಡಿ ಆಮೂಲಾಗ್ರವಾಗಿ ತನಿಖೆ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಆದೇಶಿಸಿದ್ದೆ. ಆದರೆ ಈಗ ಕಾಂಗ್ರೆಸ್ ನವರು ನಮಗೆ ಏನೋ‌ ಸಿಕ್ಕಿದೆ ಎನ್ನುತ್ತಿದ್ದಾರೆ, ಆದರೆ ಅದರಲ್ಲಿ ಏನು ಇಲ್ಲ.ಏಕಂದರೆ ಈ ಪ್ರಕರಣದಲ್ಲಿ ಅವರ ಶಿಷ್ಯಂದಿರೇ ಇಬ್ಬರು ಸಿಲುಕಿಕೊಂಡಿದ್ದಾರೆ. ಇದಾದ ಬಳಿಕ ನಮ್ಮ ಬಳಿ ಆಡಿಯೋ ಇದೆ ಎಂದು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಈ ಮೊದಲು ಇದೇ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದರು. ಆಗ ಏಕೆ ಆಡಿಯೋ ಬಗ್ಗೆ ಬಹಿರಂಗವಾಗಿಲ್ಲ. ಕಾಂಗ್ರೆಸ್​ ಈ ವಿಚಾರದಲ್ಲಿ ಕೇವಲ ರಾಜಕೀಯ ಲಾಭ ಪಡೆಯುತ್ತಿದೆ ಎಂದು ಗುಡುಗಿದರು.

ಇದನ್ನು ಓದಿ : JDS: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಎಲ್ಲವೂ ಸುಲಭವಿಲ್ಲ: ಆಮ್ ಆದ್ಮಿ, ಎನ್‌ಸಿಪಿ ಸ್ಪರ್ಧೆಗೆ ಇಳಿಯಲಿದೆ

ಇದನ್ನೂ ಓದಿ : DK Shivakumar : ನನ್ನ ಹೆಸರು ಕೇಳಿದರೆ ಕೆಲವರಿಗೆ ಶಕ್ತಿ ಬರುತ್ತೆ : ಡಿ.ಕೆ ಶಿವಕುಮಾರ್ ವ್ಯಂಗ್ಯ

home minister araga Jnanendra’s response to the Hubli riots

Comments are closed.