Honnavar Paresh Mesta : ನಾಲ್ಕೂವರೆ ವರ್ಷದ ತನಿಖೆ ಅಂತ್ಯ: ಪರೇಶ್ ಮೇಸ್ತಾ ಕೇಸ್‌ನಲ್ಲಿ ಬಿ ರಿಪೋರ್ಟ್

ಕಾರವಾರ : ಹಿಂದೂ ಕಾರ್ಯಕರ್ತರ ಹತ್ಯೆ ಕುರಿತು ಚರ್ಚೆ ಜೋರಾಗಿರುವಾಗಲೇ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪರೇಶ್ ಮೇಸ್ತಾ (Honnavar Paresh Mesta) ಕೇಸ್ ನಲ್ಲಿ ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ (CBI) ಬಿ ರಿಪೋರ್ಟ್ ಸಲ್ಲಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ (Paresh Mesta) ಸಾವು ಆಕಸ್ಮಿಕವಾಗಿದ್ದು ಕೊಲೆಯಲ್ಲ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.

ಕಳೆದ ನಾಲ್ಕೂವರೆ ವರ್ಷಗಳಿಂದ ತನಿಖೆ ನಡೆಸಿದ್ದ ಸಿಬಿಐ ಇಂದು ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ 16 ಕ್ಕೆ ಮುಂದೂಡಿದೆ. 2017 ರ ಡಿಸೆಂಬರ್ 6 ರಂದು ಹೊನ್ನಾವರದಲ್ಲಿ ನಡೆದಿದ್ದ ಗಲಾಟೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಪರೇಶ್ ಮೇಸ್ತಾ ಮನೆಯಿಂದ ಕಾಣೆಯಾದ ಎರಡು ದಿನದ ಬಳಿಕ ಅಂದ್ರೇ ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿದೇವಾಲಯದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವ ಸಂಪೂರ್ಣ ಕೊಳೆತ ರೀತಿಯಲ್ಲಿ ಪತ್ತೆಯಾಗಿತ್ತು.

ಇದು ಅನ್ಯಕೋಮಿನವರಿಂದ‌ ನಡೆದ ಹತ್ಯೆ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಆರೋಪಿಸಿದ್ದರು. ಅಲ್ಲದೇ ಮೃತ ಪರೇಶ್ ಮೇಸ್ತಾ ಬಿಜೆಪಿ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಹೊನ್ನಾವರದಲ್ಲಿ ಕೋಮು ಸಾಮರಸ್ಯ ಕದಡಿ ಹೊನ್ನಾವರ ಹೊತ್ತಿ ಉರಿದಿತ್ತು. ಇದಾದ ಬಳಿಕ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ನಾಯಕರು ಹೋರಾಟಕ್ಕೆ ಮತ್ತಷ್ಟು ಬಲ ತುಂಬಿ ಘಟನೆಗೆ ರಾಜಕೀಯ ಬಣ್ಣ ತುಂಬಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂದಿನ ವಿರೋಧ ಪಕ್ಷದ ನಾಯಕ ಬಿಎಸ್ವೈ, ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ ಹಲವು ಬಿಜೆಪಿ ನಾಯಕರು ಪರೇಶ್ ಮೇಸ್ತಾ ಮನೆಗೆ ತೆರಳಿ ಸಾಂತ್ವನ ಹೇಳಿ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಈ ಹೋರಾಟಗಳಿಂದ ಎಚ್ಚೆತ್ತ ಅಂದಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಐದು ಜನರನ್ನು ಬಂಧಿಸಲಾಗಿತ್ತು. ಈಗ ನಾಲ್ಕೂವರೆ ವರ್ಷದ ಬಳಿಕ ಸಿಬಿಐ ವರದಿ ಸಲ್ಲಿಸಿದೆ. ಪರೇಶ್ ಮೇಸ್ತಾ ಕೇಸ್‌ನಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿರೋದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : Man Carries His Wife on Shoulders : ಪತ್ನಿಯನ್ನು ಹೊತ್ತು ತಿರುಪತಿ ಬೆಟ್ಟ ಹತ್ತಿದ ಪತಿ: ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ !

ಇದನ್ನೂ ಓದಿ : 26 Killed Kanpur : ಕೆರೆಗೆ ಉರುಳಿದ ಟ್ರ್ಯಾಕ್ಟರ್‌ : 26 ಮಂದಿ ಯಾತ್ರಾರ್ಥಿಗ: ದುರ್ಮರಣ, ಪ್ರಧಾನಿ ಮೋದಿ ಸಂತಾಪ

Honnavar Paresh Mesta not Murder is Accidental Death, CBI Submitted A Report

Comments are closed.