ಮನುಷ್ಯರಂತೆ ಪ್ರಾಣಿಗಳಿಗೂ ಇನ್ಮುಂದೆ ಆಧಾರ್ ಕಾರ್ಡ್ : ಕ್ಯೂಆರ್ ಕೋಡ್ನಲ್ಲಿರಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆದರೆ ಈಗ ವಿಷಯ ಏನು ಅಂದ್ರೆ, ಮನುಷ್ಯರಂತೆಯೇ ಪ್ರಾಣಿಗಳಿಗೂ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆ ಸಿದ್ಧಗೊಂಡಿದೆ.
ಎನಿಮಲ್ ಐಡೆಂಟಿಫಿಕೇಷನ್ ಕಾರ್ಡ್ ನೀಡಲು ಸ್ಮಾರ್ಟ್ ಪ್ಲಾಕ್ ಅಪ್ಲಿಕೇಶನ್ ಸಿದ್ಧಗೊಳಿಸಲಾಗಿದೆ. ಈ ಆ್ಯಪ್ನ ಮೂಲಕ ಜಾನುವಾರು ಹಾಗೂ ಬೀದಿ ನಾಯಿಗಳ ನಿರ್ವಹಣೆ ಮಾಡಲು ಹುಬ್ಬಳ್ಳಿ – ಧಾರವಾಡ ಪಾಲಿಕೆ ಸಿದ್ಧಗೊಂಡಿದೆ.
ಮನುಷ್ಯನ ಫಿಂಗರ್ ಪ್ರಿಂಟ್ ಮೂಲಕ ಆಧಾರ್ ಕಾರ್ಡ್ ನೀಡಲಾಗುತ್ತದೆ. ಅದೇ ರೀತಿ ಮೂಖ ಪ್ರಾಣಿಗಳು ಮೂಗು, ಬಾಯಿ ಕಲರ್ ಮಾದರಿಯನ್ನು ಆಧರಿಸಿ ಗುರುತಿನ ಚೀಟಿ ನೀಡಲಾಗುತ್ತದೆ. ಧಾರವಾಡ ಐಐಟಿ ಇನ್ಕ್ಯೂಬೇಷನ್ ಸೆಂಟರ್ನಲ್ಲಿ ಐಡಿಎಎಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ನ ಪ್ರಸಾದ್ ಹಾಗೂ ಸುಚಿತ್ ಎಂಬವರು ಇಂತಹ ಬಯೋಮೆಟ್ರಿಕ್ ಟ್ಯಾಗಿಂಗ್ ತಂತ್ರಾಶವನ್ನು ತಂದಿದ್ದಾರೆ.
ಪ್ರಾಣಿಗಳಿಗೆ ಗುರುತಿನ ಕಾರ್ಡ್ನಲ್ಲಿ ನೋಂದಣಿ ಸಂಖ್ಯೆ ಹಾಗೂ ಸ್ಕ್ಯಾನರ್ ಕೋಡ್ ಒದಗಿಸಲಾಗುತ್ತದೆ. ಇದರಲ್ಲಿ ಪ್ರಾಣಿ ಮಾಲೀಕನ ವಿಳಾಸ, ಮೊಬೈಲ್ ಸಂಖ್ಯೆ,ಪ್ರಾಣಿಯ ಲಿಂಗ, ತಳಿ, ವಯಸ್ಸು ಎಲ್ಲವೂ ಇರುತ್ತದೆ.ಈ ಟ್ಯಾಗ್ನ್ನು ಪ್ರಾಣಿಯ ಕಿವಿಗೆ ಹಾಕಲಾಗಿರುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆ ಆರಂಭ; ಡಿಎಲ್, ಆರ್‌ಸಿಯಲ್ಲಿ ಮಹತ್ವದ ಬದಲಾವಣೆ
ಇದನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರಾಣಿಗಳ ಸಂಪೂರ್ಣ ವಿವರ ಪಡೆಯಬಹುದಾಗಿದೆ. ಈ ಮೂಲಕ ಪ್ರಾಣಿಗಳ್ಳತನದ ಅಪಾಯವನ್ನು ಕಡಿಮೆ ಮಾಡಲು ಹುಬ್ಬಳ್ಳಿ ಧಾರವಾಡ ಪಾಲಿಕೆ ಚಿಂತನೆ ನಡೆಸಿದೆ.
ಹುಬ್ಬಳ್ಳಿ – ಧಾರವಾಡ ಪಾಲಿಕೆಯ ಈ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಲ್ಲಿ ಹುಬ್ಬಳ್ಳಿ – ಧಾರವಾಡ ಪಾಲಿಕೆ ಯಶಸ್ವಿಯಾದಲ್ಲಿ ಭವಿಷ್ಯದಲ್ಲಿ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆಯಿದೆ.



