Anna Bhagya Rice : ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಾಟ : ಲಾರಿ ವಶ, ಇಬ್ಬರ ಬಂಧನ

ಕುಂದಾಪುರ : ರಾಜ್ಯ ಸರಕಾರ ಬಡವರಿಗಾಗಿ ಅನ್ನಭಾಗ್ಯ (Anna Bhagya Rice ) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆ ಇದೀಗ ಕಂಡವರ ಪಾಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕದ್ದು ಮಾರಾಟ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಎಂಬಲ್ಲಿ ನಡೆದಿದೆ.

ಕುಂದಾಪುರದ ಡಿವೈಎಸ್‌ಪಿ ಶ್ರೀಕಾಂತ್‌ ಕೆ. ಅವರು ರಾತ್ರಿಯ ವೇಳೆಯಲ್ಲಿ ಗಸ್ತಿನಲ್ಲಿ ಇದ್ದಾಗ, ಶಿರೂರು ಕಡೆಯಿಂದ ಲಾರಿಯೊಂದು ಬಂದಿತ್ತು. ಅನುಮಾನಗೊಂಡ ಪೊಲೀಸರು ಲಾರಿಯನ್ನು ಅಡ್ಡಗಟ್ಟಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ರಾಜ್ಯ ಸರಕಾರ ಬಡವರಿಗಾಗಿ ಉಚಿತವಾಗಿ ನೀಡಲಾಗುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಲಾರಿಯ ಮೂಲಕ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

ಬೆಂಗಳೂರು ದಕ್ಷಿಣದ ನಿವಾಸಿ ಲಾರಿ ಚಾಲಕ ಹೊನ್ನಗಟ್ಟಿ ನಿವಾಸಿ ಸುನೀಲ್‌ ಹೆಚ್‌.ಆರ್‌ (22 ವರ್ಷ) ಮತ್ತು ಇನ್ನೋರ್ವ ವ್ಯಕ್ತಿ ಭಟ್ಕಳ ನಿವಾಸಿ ಮಹಮ್ಮದ್‌ ಸಮೀರ (25 ವರ್ಷ) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯನ್ನು ಅಡ್ಡಗಟ್ಟಿದಾಗ ಪೊಲೀಸರಿಗೆ ಅಕ್ಕಿಯ ಲೋಡ್‌ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರು ಅಕ್ಕಿಯ ಚೀಲಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಎನ್ನುವುದು ತಿಳಿದು ಬಂದಿದೆ.

ಲಾರಿಯಲ್ಲಿ ಸುಮಾರು 320 ಚೀಲದಲ್ಲಿ ಸುಮಾರು 16 ಟನ್ ನಷ್ಟು ಅಕ್ಕಿ ಪತ್ತೆಯಾಗಿದ್ದು, ಈ ಪಡಿತರ ಅಕ್ಕಿ ಮೌಲ್ಯ 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಪೊಲೀಸರು ಲಾರಿಯ ಜೊತೆಗೆ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಕ್ಕಿಯ ಮೂಲವನ್ನು ಹುಡುಕುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : 10 ರೂಪಾಯಿಯಲ್ಲಿ ದೃಷ್ಟಿ ತೆಗೆದು 25 ಸಾವಿರಕ್ಕೆ ಡಿಮ್ಯಾಂಡ್‌ : ಗೃಹ ಪ್ರವೇಶದ ಮನೆಯಲ್ಲಿ ಮಂಗಳಮುಖಿಯರ ದಾಂಧಲೆ

ಇದನ್ನೂ ಓದಿ : Shopian Encounter Update : ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ, ಉಗ್ರನನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸರು

Illegal smuggling of Anna Bhagya Rice two persons Arrested kundapura police

Comments are closed.