Kannada Rajyotsava 2022: ಅಂದು ಇವರಿಲ್ಲದಿದ್ದರೆ ಕನ್ನಡದ ಭವಿಷ್ಯ ಏನಾಗುತ್ತಿತ್ತೋ.. ಅಷ್ಟಕ್ಕೂ ಯಾರೀ ಕನ್ನಡದ ಕಣ್ವ..

Kannada Rajyotsava 2022: ಸುಮಾರು 70 ವರ್ಷಗಳ ಹಿಂದಿನ ಮಾತದು. ಆಗೆಲ್ಲಾ ಭಾರತದಲ್ಲಿ ಬ್ರಿಟಿಷರದ್ದೇ ಪ್ರಾಬಲ್ಯ. ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚಪಡುತ್ತಿದ್ದ ಕಾಲವದು. ಎಲ್ಲಾ ಕೆಲಸಗಳೂ ಇಂಗ್ಲಿಷ್ ನಲ್ಲೇ ನಡೆಯುತ್ತಿದ್ದವು. ಕನ್ನಡಕ್ಕೆ ಸಮಾಜದಲ್ಲಿ ಯಾವ ಸ್ಥಾನಮಾನಗಳು ಇರಲಿಲ್ಲ. ಅಂಥ ಸಮಯದಲ್ಲಿ ಹೇಗಾದರೂ ಸರಿ, ಕನ್ನಡಕ್ಕೆ ಅದರ ಹಕ್ಕನ್ನು ದೊರಕಿಸಿಕೊಡಬೇಕು ಎಂಬ ಛಲವನ್ನು ಕಟ್ಟಿ ಕರುನಾಡಿನ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾರೆ ಬಿ.ಎಂ.ಶ್ರೀಕಂಠಯ್ಯ..

‘ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂದು ಕನ್ನಡದ ಉಳಿವಿಗಾಗಿ ಹೋರಾಟ ನಡೆಸಿದವರೇ ಬಿ.ಎಂ.ಶ್ರೀ ಅವರು. ಮಂಡ್ಯದ ಬೆಳ್ಳೂರಿನವರಾದ ಮೇಲಾರಯ್ಯ ಮತ್ತು ಭಾಗೀರಥಮ್ಮ ದಂಪತಿ ಮಗನಾಗಿ 1884ರ ಜನವರಿ 3ರಂದು ಜನಿಸಿದರು. ಬೆಳ್ಳೂರಿನಲ್ಲಿ ತಮ್ಮ ಬಾಲ್ಯಶಿಕ್ಷಣ ಮುಗಿಸಿ ಶ್ರೀರಂಗಪಟ್ಟಣ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರಿನಲ್ಲಿ ಬಿ.ಎ ಪದವಿ, ಮದರಾಸಿನಲ್ಲಿ ಎಂ.ಎ ಹಾಗೂ ಎಂ.ಎಲ್.ಬಿ ಪೂರ್ಣಗೊಳಿಸುತ್ತಾರೆ. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾರೆ. ಆಗೆಲ್ಲಾ ರಾಜ್ಯದಲ್ಲಿ ಪ್ರತಿ ಮನೆ-ಮನದಲ್ಲೂ ಇಂಗ್ಲಿಷ್ ವ್ಯಾಮೋಹ ತಳವೂರಿ ಬಿಟ್ಟಿತ್ತು. ಅಂಥ ಸಂದರ್ಭದಲ್ಲಿ ಬಿ.ಎಂ.ಶ್ರೀ ಅವರಿಗೆ ಜ್ಞಾನೋದಯವಾಗಿ , ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಬೇಕೆಂಬ ಬಯಕೆ ಮೂಡಿತ್ತು. ಅಂದಿನಿಂದ ಅವರು ಸದಾ ಕನ್ನಡಕ್ಕಾಗಿಯೇ ದುಡಿದರು.

ಇದನ್ನೂ ಓದಿ:Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!

ಕನ್ನಡ ಉಳಿವಿನತ್ತ ಮೊದಲ ಹೆಜ್ಜೆ..!

1910ರಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಭಾಷಣ ಮಾಡಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮೊದಲ ಹೆಜ್ಜೆ ಇಟ್ಟರು. ಕನ್ನಡ ನಾಡಿನ ಮೂಲೆಮೂಲೆಗಳಿಗೂ ಸಂಚರಿಸಿ ತಮ್ಮ ಪ್ರಖರವಾದ ಭಾಷಣಗಳ ಮೂಲಕ ಕನ್ನಡವನ್ನು ಬೆಳೆಸಲು ತನು, ಮನ, ಧನ, ಶಕ್ತಿಯನ್ನು ಧಾರೆ ಎರೆದರು. ಹೀಗಾಗಿ ಬಿ.ಎಂ.ಶ್ರೀ ಅವರನ್ನು ಕನ್ನಡದ ಕಣ್ವ ಎಂದೇ ಹೆಸರಿಸಲಾಗಿದೆ. ಹೆಸರಾಂತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕುವೆಂಪು, ಶ್ರೀಕಂಠಯ್ಯ, ಎಸ್.ವಿ.ರಂಗಣ್ಣ, ಜಿ.ಪಿ.ರಾಜರತ್ನಂ, ಡಿ.ಎಲ್.ನರಸಿಂಹಾಚಾರ್, ಪು.ತಿ.ನ ಮೊದಲಾದವರಿಗೆ ಗುರುಗಳಾಗಿ ವಿದ್ಯಾರ್ಜನೆ ಮಾಡಿದರು. ಇವರಿಗೆ ಗರಡಿಯಲ್ಲೇ ಪಳಗಿದ ಕುವೆಂಪು ಅವರು ಗುರುಗಳನ್ನೇ ಮೀರಿಸಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು.

ಇದನ್ನೂ ಓದಿ: Kannada Rajyotsava 2022: ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ 8 ರಾಷ್ಟ್ರ ಕವಿಗಳು ಇವರು

ಸದಾ ಚಟುವಟಿಕೆಯ ಚಿಲುಮೆ ಆಗಿದ್ದರು..

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 25 ವರ್ಷಗಳ ಕಾಲ ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗಾವಣೆಗೊಂಡು ಆ ಶಾಲೆಯ ಏಳಿಗೆಗೂ ಶ್ರಮಿಸಿ ನಿವೃತ್ತಿ ಹೊಂದುತ್ತಾರೆ. ಸದಾ ಕನ್ನಡ ಕುರಿತಂತೆ ಒಂದಲ್ಲ ಒಂದು ಕಾರ್ಯ ಕೈಗೆತ್ತಿಕೊಂಡು ಚಟುವಟಿಕೆಯಿಂದ ಇರುತ್ತಿದ್ದ ಬಿ.ಎಂಶ್ರೀ ನಿವೃತ್ತಿ ಬಳಿಕ 1942ರವರೆಗೆ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಅಧ್ಯಕ್ಷರಾದರು. ಆಗ ಕನ್ನಡ ಲಿಪಿ ಸುಧಾರಣೆಗೆ ಇನ್ನಿಲ್ಲದ ಶ್ರಮಪಟ್ಟರು. 1944ರಲ್ಲಿ ಧಾರವಾಡ ಕೆ.ಇ.ಬೋರ್ಡ್‍ನ ಮುಖ್ಯಸ್ಥರಾಗಿ ನೇಮಕಗೊಂಡು ಅಲ್ಲಿಯ ಆಟ್ರ್ಸ್ ಕಾಲೇಜಿಗೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು. ಹೀಗೆ ಪ್ರಾಂಶುಪಾಲ ಹುದ್ದೆಯಲ್ಲಿರುವಾಗಲೇ 1946ರ ಜನವರಿ 5ರಂದು ಇಹಲೋಕ ತ್ಯಜಿಸಿದರು. ಅವರ ಅಂತಿಮ ದರ್ಶನ ಪಡೆಯಲು ನಾಡಿನ ಪ್ರಖ್ಯಾತ ಸಾಹಿತಿಗಳು, ಸಾರಸ್ವತ ಲೋಕದ ದಿಗ್ಗಜರು, ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಬಿ.ಎಂ.ಶ್ರೀ ಅವರ ಜನರ ಪ್ರೀತಿಯ ಸಂಪಾದನೆ ಎಷ್ಟು ಅನ್ನೋದಕ್ಕೆ ಆ ಜನಸ್ತೋಮವೇ ಸಾಕ್ಷಿಯಾಗಿತ್ತು. ಖುದ್ದು ದ.ರಾ.ಬೇಂದ್ರೆ ಅವರೇ ಆನಂದ ಭಾಷ್ಪದಿಂದ ಆಹಾ.. ಸತ್ತ ವ್ಯಕ್ತಿಗೆ ಇಂಥ ಸಂಭ್ರಮದ ಬೀಳ್ಕೊಡುಗೆ ಸಿಗುವುದಾಗಿದ್ದರೆ ಸಾವೂ ಕೂಡಾ ಸ್ವಾಗತಾರ್ಹ ಎಂದಿದ್ದರಂತೆ.

ಇದನ್ನೂ ಓದಿ: Karnataka Rajyotsava : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ, ಬಾವುಟ ; ಸಂಪೂರ್ಣ ಮಾಹಿತಿ

ಸಾಹಿತ್ಯದಲ್ಲಿ ಸದಾ ಮುಂದು..

ಅಧ್ಯಾಪಕ ವೃತ್ತಿ ಹೊರತಾಗಿಯೂ ಬಿ.ಎಂ.ಶ್ರೀ ಅವರು 1926ರಿಂದ 1930ರವರೆಗೆ 4 ವರ್ಷಗಳ ಕಾಲ ಕುಲಸಚಿವರಾಗಿ, 1928ರಲ್ಲಿ ಗುಲಬರ್ಗಾದಲ್ಲಿ ನಡೆದ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1938ರಿಂದ 1942ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, 1938ರಲ್ಲಿ ಮೈಸೂರಿನ ಮಹಾರಾಜರಿಂದ ರಾಜ ಸೇವಾಸಕ್ತ ಎಂಬ ಬಿರುದನ್ನು ಪಡೆದಿದ್ದರು. ಬಿ.ಎಂ.ಶ್ರೀ ಅವರು ಗದಾಯುದ್ಧ, ಅಶ್ವತ್ಥಾಮನ್, ಪಾರಸಿಕರು ಎಂಬ ಕನ್ನಡ ನಾಟಕಗಳನ್ನು ಬರೆದಿದ್ದಾರೆ. ಹೊಂಗನಸು, ಇಂಗ್ಲಿಷ್ ಗೀತೆಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇಂಗ್ಲಿಷ್ ಕವಿ ನ್ಯೂಮನ್ ಅವರು ಬರೆದ Lead kindly light ಎಂಬ ಕವಿತೆಯನ್ನು ಅನುವಾದ ಮಾಡಿದ ‘ಕರುಣಾಳು ಬಾ ಬೆಳಕೇ’ ಎಂಬ ಅರ್ಥಗರ್ಭಿತ ಕವನ ಇಂದಿಗೂ ಜನರ ಮನದಲ್ಲಿ ನೆಲೆಯೂರಿ ನಿಂತಿದೆ.

ಇದನ್ನೂ ಓದಿ: Kannada Rajyotsava 2022: ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಬಗ್ಗೆ ನಿಮಗೆಷ್ಟು ಗೊತ್ತು

ಇವರ ಕಾರ್ಯವೈಖರಿಗಳು ಒಂದೇ..ಎರಡೇ..

ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿ ಹುಟ್ಟಿಸಿದವರೇ ಬಿ.ಎಂ.ಶ್ರೀಗಳು. ಪರಿಷತ್ತಿನ ಬಗ್ಗೆ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಕೆಲಸ ಮಾಡಿದರು. ಪರಿಷತ್ತಿಗೆ ತಮ್ಮ ಸ್ವಂತ 6,500 ರೂ.ವೆಚ್ಚದಲ್ಲಿ ಅಚ್ಚುಕೂಟ ನಿರ್ಮಿಸಿದರು. ಮಾತ್ರವಲ್ಲದೇ ಪರಿಷತ್ತಿಗೆ ಲಾಂಛನವನ್ನೂ ತಯಾರಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. 1939ರಲ್ಲಿ ಮಹಿಳಾ ಶಾಖೆ ಪ್ರಾರಂಭಿಸಿ ಮಹಿಳೆಯರ ಕಾರ್ಯಕ್ರಮಗಳಿಗೆ ಸ್ವತಂತ್ರ ನೆಲೆಮಾಡಿಕೊಟ್ಟರು. ಪರಿಷತ್ತಿನ ವಿಶೇಷ ಕೊಡುಗೆಯಾಗಿ ಕನ್ನಡ ಬಾವುಟ ಎಂಬ ಕಾವ್ಯ ಸಂಕಲನ ಸಿದ್ಧಪಡಿಸಿದರು. ಕನ್ನಡ ಸಾಹಿತ್ಯ ಜನರಿಗೆ ತಿಳಿಸುವ ಸಲುವಾಗಿ 1940ರಲ್ಲಿ ಕನ್ನಡ ಸಾಹಿತ್ಯ ಪರೀಕ್ಷೆಗಳನ್ನು ಆರಂಭಿಸಿದರು. ಹೀಗೆ ಬಿ.ಎಂ.ಶ್ರೀಕಂಠಯ್ಯನವರು ತಮ್ಮ ಜೀವಮಾನದುದ್ದಕ್ಕೂ ಕನ್ನಡವೇ ಸರ್ವಸ್ವ ಎಂದು ಬದುಕಿದವರು. ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿ, ಯಾರಿಗೂ ಬೇಡವಾಗಿ ಅನಾಥವಾಗಿದ್ದ ಕನ್ನಡದ ಕೈಹಿಡಿದು, ಕರುನಾಡಿಗೆ ನ್ಯಾಯ ದೊರಕಿಸಿಕೊಟ್ಟ ಬಿ.ಎಂ.ಶ್ರೀಕಂಠಯ್ಯನವರು ಎಂದೆಂದಿಗೂ ಮರೆಯಲಾರದ ಮಾಣಿಕ್ಯ.

Kannada Rajyotsava 2022: What would have been the future of Kannada without him; After all, who is the Kanva of Kannada

Comments are closed.