ಹಾಲಾಡಿ ಶ್ರೀನಿವಾಸ್‌ ಶೆಟ್ಟಿ + ಕಿರಣ್‌ ಕೊಡ್ಗಿ : ಗೆಲುವು ಕಾಣುವರೇ ಮೊಳಹಳ್ಳಿ

ಕುಂದಾಪುರ : ಕರಾವಳಿ ಕರ್ನಾಟಕದಲ್ಲಿ(Karnataka assembly election 2023) ಈ ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರ (Kundapura assembly constituency) ರಾಜ್ಯದ ಗಮನ ಸೆಳೆದಿದೆ. ಹಾಲಿ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಬಿಜೆಪಿಯ ಭೀಷ್ಮ ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್‌ ಕೊಡ್ಗಿ (Kiran kodgi) ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇನ್ನೊಂದೆಡೆಯಲ್ಲಿ ಕಾಂಗ್ರೆಸ್‌ನಿಂದ ಹೊಸ ಅಭ್ಯರ್ಥಿಯಾಗಿ ಮೊಳಹಳ್ಳಿ ದಿನೇಶ್‌ ಹೆಗ್ಡೆ (Dinesh Hegde Molahalli) ಅವರನ್ನು ಕಣಕ್ಕೆ ಇಳಿಸಿದೆ. ಕ್ಷೇತ್ರದಲ್ಲಿ ಜೆಡಿಎಸ್‌, ಆಮ್‌ ಆದ್ಮಿ ಕಣಕ್ಕೆ ಇಳಿದರೂ ಕೂಡ ಈ ಬಾರಿಯೂ ಕುಂದಾಪುರದಲ್ಲಿ ಬಿಜೆಪಿ vs ಕಾಂಗ್ರೆಸ್‌ ನಡುವೆ ನೇರಹಣಾಹಣಿ ಏರ್ಪಡಲಿದೆ.

1999 ರಿಂದಲೂ ಬಿಜೆಪಿಯ ಕೈವಶದಲ್ಲಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಸದ್ಯಕ್ಕೆ ಕಬ್ಬಿಣದ ಕಡಲೆ. ಕಾಂಗ್ರೆಸ್‌ನ ಹಳೆಯ ಹುಲಿ ಪ್ರತಾಪ್‌ ಚಂದ್ರ ಶೆಟ್ಟಿ ಅವರಿಗೆ ಸೋಲಿನ ರುಚಿ ತೋರಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಇದುವರೆಗೂ ಸೋಲನ್ನು ಕಂಡಿಲ್ಲ. ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿಯೂ ಭರ್ಜರಿ ಗೆಲುವು ಕಂಡುಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಖುದ್ದು ಹಾಲಾಡಿ ಅವರೇ ಕಿರಣ್‌ ಕೊಡ್ಗಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಅಷ್ಟೇ ಅಲ್ಲಾ ತಾನೇ ಕಿರಣ್‌ ಕೊಡ್ಗಿ (kiran kodgi) ಅವರ ಮುಂದೆ ನಿಂತು ಚುನಾವಣೆ ಎದುರಿಸುವುದಾಗಿಯೂ ಘೋಷಿಸಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 1983ರಿಂದ ಸತತ 4 ಬಾರಿಗೆ ಪ್ರತಾಪ್‌ಚಂದ್ರ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರತಾಪ್‌ಚಂದ್ರ ಶೆಟ್ಟಿ ಅವರ ನಂತರದಲ್ಲಿ ಕಾಂಗ್ರೆಸ್‌ ಗೆಲುವನ್ನು ಕಂಡಿದ್ದೇ ಇಲ್ಲ. ಕಳೆದ ನಾಲ್ಕು ಸಾರ್ವತ್ರಿಕ ಚುನಾವಣೆ ಎದುರಾದಾಗಲೂ ಹೊಸ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುತ್ತಾ ಬಂದಿದೆ. ಅಶೋಕ್‌ ಕುಮಾರ್ ಶೆಟ್ಟಿ, ಕೆ.ಜಯಪ್ರಕಾಶ್‌ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ರಾಕೇಶ್‌ ಮಲ್ಲಿ ಅವರನ್ನು ಕಣಕ್ಕೆ ಇಳಿಸಿದ್ದರೂ ಕೂಡ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಧಕ್ಕಿಲ್ಲ. ಈ ಬಾರಿ ಮತ್ತೆ ಹೊಸ ಅಭ್ಯರ್ಥಿಯಾಗಿ ಗುತ್ತಿಗೆದಾರ ದಿನೇಶ್‌ ಹೆಗ್ಡೆ ಮೊಳಹಳ್ಳಿ ಕಣಕ್ಕೆ ಇಳಿದಿದ್ದಾರೆ.

ಜೋಡೆತ್ತಿನ ಗೆಲುವಿನ ಓಟಕ್ಕೆ ಬೀಳುತ್ತಾ ಬ್ರೇಕ್‌ !

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಹಾಲಾಡಿ ಹಾಗೂ ಕೊಡ್ಗಿ ಜೋಡೆತ್ತಿನಂತೆ ಕೆಲಸ ಮಾಡಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರತೀ ಗೆಲುವಿನಲ್ಲಿಯೂ ಕೊಡ್ಗಿ ಸಾಥ್‌ ಕೊಟ್ಟಿದ್ದಾರೆ. ತನ್ನ ರಾಜಕೀಯದ ಗುರು ಎ.ಜಿ. ಕೊಡ್ಗಿ ಅವರ ಪುತ್ರ ಕಿರಣ್‌ ಕೊಡ್ಗಿ ಅವರನ್ನೇ ಈ ಬಾರಿ ಕಣಕ್ಕೆ ಇಳಿಸುವ ಮೂಲಕ ತನ್ನ ಸಾಮರ್ಥ್ಯ ಪರೀಕ್ಷೆಗೆ ಸಜ್ಜಾಗಿದ್ದಾರೆ ಹಾಲಾಡಿ. ಕಳೆದ ಎರಡೂವರೆ ದಶಕಗಳಿಂದಲೂ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಮೆರೆದಿರುವ ಹಾಲಾಡಿ ಇದೀಗ ತಾವಾಗಿಯೇ ರಾಜೀನಾಮೆ ಕೊಟ್ಟು ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು ಬಿಜೆಪಿ ಆನೆಬಲ ತಂದಂತಾಗಿದೆ. ಒಂದೊಮ್ಮೆ ಹಾಲಾಡಿ ಟಿಕೆಟ್‌ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿದ್ರೆ ಬಿಜೆಪಿಗೆ ನುಂಗಲಾರದ ತುತ್ತಾಗುವ ಸಾಧ್ಯತೆಯಿತ್ತು. ಬಿಜೆಪಿಯಲ್ಲಿ ಜೋಡೆತ್ತಿನಂತೆ ಕೆಲಸ ಮಾಡುತ್ತಿರುವ ಹಾಲಾಡಿ ಹಾಗೂ ಕೊಡ್ಗಿ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುವುದು ಅಷ್ಟು ಸುಲಭದ ಮಾತಲ್ಲ.

ಬಿಜೆಪಿ ಅಭ್ಯರ್ಥಿಯಾಗಿ ಕಿರಣ್‌ ಕೊಡ್ಗಿ

ಕಿರಣ್‌ ಕೊಡ್ಗಿ ಉಡುಪಿ ಜಿಲ್ಲೆಯ ಅಮವಾಸೆಬೈಲಿನವರು. ತಂದೆ ಎ.ಜೆ.ಕೊಡ್ಗಿ ಅವರ ರಾಜಕೀಯ ಗರಡಿಯಲ್ಲಿ ಪಳಗಿರುವ ಕಿರಣ್‌ ಕೊಡ್ಗಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿನ ಸಾವಿರಾರು ಕುಟುಂಬಗಳಿಗೆ ತಮ್ಮ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಒದಗಿಸಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿಯೂ ಕೊಡ್ಗಿ (kiran kodgi) ಮಹತ್ವದ ಪಾತ್ರವಹಿಸಿದ್ದಾರೆ. ಸುಮಾರು 40 ವರ್ಷಗಳಿಂದಲೂ ಬಿಜೆಪಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕಿರಣ್‌ ಕೊಡ್ಗಿ (Kiran Kodgi ) ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರತೀ ಚುನಾವಣೆಯಲ್ಲಿಯೂ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಿದ್ದಾರೆ.

  • ಪ್ಲಸ್‌ ಪಾಯಿಂಟ್‌
  • 40 ವರ್ಷಗಳಿಂದಲೂ ಪಕ್ಷದ ಮೇಲೆ ಹಿಡಿತ, ಕಾರ್ಯಕರ್ತರ ನಡುವೆ ಒಡನಾಟ
  • ಚುನಾವಣೆಗೆ ಹಾಲಾಡಿ ಶ್ರೀನಿವಾಸ ಶೆಟ್ಟರ ನೇತೃತ್ವ
  • ಬಿಜೆಪಿಗೆ ಕ್ಷೇತ್ರದಲ್ಲಿ ಕಾರ್ಯಕರ್ತರ ಬಲ
  • ಬಿಜೆಪಿಯ ಸತತ ಗೆಲುವು
  • ಹೊಸ ಅಭ್ಯರ್ಥಿ
  • ಕ್ಷೇತ್ರದ ಸಂಪೂರ್ಣ ಪರಿಚಯ
  • ಪ್ರಾಮಾಣಿಕ ಕಾರ್ಯಕರ್ತ
  • ನೆಗೆಟಿವ್‌ ಪಾಯಿಂಟ್‌
  • ಜಾತಿಮತಗಳ ಸಂಖ್ಯೆ ಕಡಿಮೆ
  • ರಾಜ್ಯ ಸರಕಾರದ ಕಾರ್ಯವೈಖರಿ
  • ಹಾಲಾಡಿಗೆ ತಪ್ಪಿದ ಟಿಕೆಟ್‌

ಕಾಂಗ್ರೆಸ್‌ ಅಭ್ಯರ್ಥಿಯಾಗಿ ದಿನೇಶ್‌ ಹೆಗ್ಡೆ ಮೊಳಹಳ್ಳಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿಯ ದಿನೇಶ್‌ ಹೆಗ್ಡೆ (Dinesh Hegde Molahalli) ಹಲವು ದಶಕಗಳಿಂದಲೂ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಮೊಳಹಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಉತ್ತಮ ಹೆಸರು ಮಾಡಿದ್ದಾರೆ. ಪ್ರಥಮ ದರ್ಜೆ ಗುತ್ತಿಗೆದಾರರಾಗಿ ತೊಡಗಿಸಿಕೊಂಡಿರುವ ದಿನೇಶ್‌ ಹೆಗ್ಡೆ ಇದೇ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

  • ಪ್ಲಸ್‌ ಪಾಯಿಂಟ್‌
  • ಜಾತಿ ಮತಗಳು
  • ಪಂಚಾಯತ್‌ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಣೆ
  • ಹೊಸ ಅಭ್ಯರ್ಥಿ
  • ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯದಿಂದ ನಿವೃತ್ತಿ
  • ನೆಗೆಟಿವ್‌ ಪಾಯಿಂಟ್‌
  • ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸತತ ಸೋಲು
  • ಉತ್ಸಾಹ ತೋರದ ಕಾಂಗ್ರೆಸ್‌ ಕಾರ್ಯಕರ್ತರು
  • ಸಕ್ರೀಯವಾಗಿರದ ಬ್ಲಾಕ್‌ ಕಾಂಗ್ರೆಸ್‌
  • ಬಂಡಾಯ ಎದ್ದಿರುವ ನಾಯಕರು
  • ನಾಯಕರ ನಡುವಲ್ಲೇ ಮುಸುಕಿನ ಗುದ್ದಾಟ
  • ಸಮರ್ಥ ನಾಯಕತ್ವದ ಕೊರತೆ

ಕುಂದಾಪುರದಲ್ಲಿ ಗೆದ್ದವರು ಯಾರು ?

ಕರಾವಳಿ ಭಾಗ ಮದ್ರಾಸ್‌ ಪ್ರಾಂತ್ಯದಲ್ಲಿದ್ದಾಗ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ 1952ರಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ಶಾಸಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 1957ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಸ್‌ಪಿಯಿಂದ ವಕ್ವಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದರು. ನಂತರ 1962ರಲ್ಲಿ ಕಾಂಗ್ರೆಸ್‌ ಕೊಳ್ಕೆಬೈಲು ಸಂಜೀವ ಶೆಟ್ಟಿ ಶಾಸಕರಾಗುವ ಮೂಲಕ ಕಾಂಗ್ರೆಸ್‌ ಮತ್ತೆ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಂಡಿತ್ತು. 1967 ಹಾಗೂ 1972ರಲ್ಲಿ ಪಿಎಸ್‌ಪಿಯಿಂದ ಸ್ಪರ್ಧಿಸಿದ್ದ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಎರಡು ಬಾರಿ ಶಾಸಕರಾಗಿದ್ದರು. 1967ರಲ್ಲಿ ಕಾಂಗ್ರೆಸ್‌ ಪಕ್ಷದ ಎಂ.ಎಂ. ಹೆಗ್ಡೆ ಅವರನ್ನು ಸೋಲಿಸಿದ್ರೆ, ಎರಡನೇ ಅವಧಿಯಲ್ಲಿ ವಿನ್ನಿ ಫೆರ್ನಾಂಡಿಸ್‌ ಅವರು ಕಾಪು ಸಂಜೀವ ಶೆಟ್ಟಿ ಅವರಿಗೆ ಸೋಲಿನ ರುಚಿ ತೋರಿಸಿದ್ದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕಾಪು ಸಂಜೀವ ಶೆಟ್ಟಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 1983ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಸತತ ನಾಲ್ಕು ಬಾರಿಗೆ ಶಾಸಕರಾಗಿ ಮೆರೆದಿದ್ದಾರೆ. 1999 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಅಷ್ಟೇ ಅಲ್ಲಾ ಸತತ ಐದು ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾದ ಹೆಗ್ಗಳಿಕೆ ಹಾಲಾಡಿ ಅವರಿಗೆ ಸಲ್ಲುತ್ತದೆ. ಇದನ್ನೂ ಓದಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ : ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್ ಕಾಂಚನ್ ವಿರುದ್ಧ ದೂರು ದಾಖಲು

ಕುಂದಾಪುರಕ್ಕೆ ಇನ್ನೂ ಧಕ್ಕಿಲ್ಲ ಸಚಿವ ಸ್ಥಾನ !

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ (Kundapura assembly constituency) ಪಿಎಸ್‌ಪಿಯಿಂದ ವಿನ್ನಿ ಫರ್ನಾಂಡೀಸ್‌ ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಪ್ರತಾಪ್‌ಚಂದ್ರ ಶೆಟ್ಟಿ ನಾಲ್ಕು ಬಾರಿ ಹಾಗೂ ಬಿಜೆಪಿ ಹಾಗೂ ಪಕ್ಷೇತರ ಶಾಸಕರಾಗಿ ಒಟ್ಟು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ದ್ದಾರೆ. ಆದರೆ ದುರಂತವೆಂದ್ರೆ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಯಾವೊಬ್ಬ ಶಾಸಕರೂ ಕೂಡ ಇದುವರೆಗೂ ಸಚಿವರಾಗಿಲ್ಲ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಶಾಸಕರು, ವಿಧಾನಪರಿಷತ್‌ ಸದಸ್ಯರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಸರಕಾರವೇ ಅಧಿಕಾರದಲ್ಲಿ ಇದ್ದರೂ ಕೂಡ ಸಚಿವ ಸ್ಥಾನವನ್ನು ನೀಡಿಲ್ಲ. ವಿಧಾನ ಪರಿಷತ್‌ ಸಭಾಪತಿಯಾಗಿದ್ದೇ ಕುಂದಾಪುರ ಕ್ಷೇತ್ರದ ಸಾಧನೆಯಾಗಿದೆ. ಇನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದೇ ವಂಚಿಸಲಾಗಿದೆ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ.

ಯಾರಿಗೆ ಒಲಿಯಲಿದೆ ಈ ಬಾರಿ ಕುಂದಾಪುರ ಕ್ಷೇತ್ರ ?

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ (Kundapura assembly constituency) ಆರಂಭದಿಂದಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಾನ ಪೈಪೋಟಿಯನ್ನೇ ನೀಡಿವೆ. ಎರಡೂ ಪಕ್ಷಗಳಿಂದಲೂ ಈ ಬಾರಿ ಹೊಸ ಅಭ್ಯರ್ಥಿಗಳೇ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಪ್ಲಸ್‌ ಪಾಯಿಂಟ್.‌ ಕಳೆದ ಎರಡೂವರೆ ದಶಕಗಳಿಂದಲೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಹಾಲಾಡಿ ಈ ಬಾರಿಯ ಚುನಾವಣೆಯೂ ತನ್ನದೇ ಚುನಾವಣೆ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಹಾಲಾಡಿಯ ಅವರನ್ನು ಕೈ ಹಿಡಿದಂತೆ ಕಿರಣ್‌ ಕೊಡ್ಗಿ ಅವರ ಬೆಂಬಲಕ್ಕೆ ಕಾರ್ಯಕರ್ತರು, ಮತದಾರರು ನಿಂತ್ರೆ ಬಿಜೆಪಿ ಚುನಾವಣೆಯನ್ನು ಗೆಲ್ಲುವುದು ಕಷ್ಟಕರವಲ್ಲ. ಇನ್ನು ಕಾಂಗ್ರೆಸ್‌ ಪಕ್ಷಕ್ಕೆ ಕೂಡ ಈ ಬಾರಿಯ ಚುನಾವಣೆಯನ್ನು ಗೆಲ್ಲಲು ಉತ್ತಮ ಅವಕಾಶವಿದೆ. ಸೋಲಿಲ್ಲದ ಸರದಾರ, ಕುಂದಾಪುರದ ವಾಜಪೇಯಿ ಅಂತಾ ಕರೆಯಿಸಿಕೊಳ್ಳುತ್ತಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ಕಣದಿಂದ ನಿವೃತ್ತರಾಗಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಪ್ಲಸ್‌ ಪಾಯಿಂಟ್.‌ ಆದರೆ ಹಳೆಯ ಹುಲಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಚುನಾವಣೆಯಲ್ಲಿ ಸಕ್ರೀಯರಾಗಿರದೇ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮುಳಯವಾಗುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್‌ ಪಕ್ಷ ಸತತ ಸೋಲಿನಿಂದ ಕಂಗೆಟ್ಟಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕಾರ್ಯವನ್ನು ಕಾಂಗ್ರೆಸ್‌ ನಾಯಕರು ಮಾಡಿಲ್ಲ. ಇನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪದಾಧಿಕಾರಿಗಳು ಚುನಾವಣೆಯನ್ನು ಅಷ್ಷೊಂದು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಜೊತೆಗೆ ಈಗಾಗಲೇ ಕ್ಷೇತ್ರದಲ್ಲಿ ಕೆಲ ನಾಯಕರು ಬಂಡಾಯವಾಗಿ ಸ್ಪರ್ಧಿಸುವ ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್‌ ನಾಯಕರು ಮೈ ಚಳಿಬಿಟ್ಟು ಚುನಾವಣೆಯನ್ನು ಎದುರಿಸಬೇಕಾಗಿದೆ. ಇದನ್ನೂ ಓದಿ : ಬೈಂದೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ

ಒಂದು ಕಾಲದಲ್ಲಿ ಕುಂದಾಪುರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ. ಕಾಂಗ್ರೆಸ್‌ ಪಕ್ಷದಿಂದ ಯಾರೇ ಕಣಕ್ಕೆ ಇಳಿದರೂ ಗೆಲ್ಲಬಹುದು ಅನ್ನುವಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹವಾ ಇತ್ತು. ಆದರೆ ಹಾಲಾಡಿ ಅಬ್ಬರದ ಜೊತೆ ಜೊತೆಗೆ ಪಕ್ಷದ ಮುಖಂಡರ ನಡುವಿನ ತಿಕ್ಕಾಟ. ಹಿರಿಯ ನಾಯಕರ ಕಡೆಗಣನೆ. ಕಾರ್ಯಕರ್ತರ ನಿರ್ಲಕ್ಷ್ಯವೇ ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿ ಸೋಲನ್ನು ಕಾಣಲು ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನು ಕಾಂಗ್ರೆಸ್‌ ಪಕ್ಷ ಯುವ ಮುಖಂಡರ ಕೈಗೆ ಬ್ಲಾಕ್‌ ಕಾಂಗ್ರೆಸ್‌ ಅಧಿಕಾರ ನೀಡದೇ ಇರುವುದು, ಪಕ್ಷ ಯುವ ಮತದಾರರನ್ನು ತನ್ನತ್ತ ಸೆಳೆಯಲು ವಿಫಲವಾಗಿರುವುದು ಕಾಂಗ್ರೆಸ್‌ ಹಿನ್ನಡೆಗೆ ಕಾರಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಈ ಹಿಂದೆ ಮಾಡಿರುವ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಿದ್ರೆ ಗೆಲುವು ಕಷ್ಟಕರವಲ್ಲ.

Comments are closed.