Karnataka exit poll 2023 : ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ? ಯಾವ ಪಕ್ಷಕ್ಕೆ ಅಧಿಕಾರ ?

ಬೆಂಗಳೂರು : Karnataka exit poll 2023 : ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಈಗಾಗಲೇ ಮುಕ್ತಾಯಕಂಡಿದೆ. ಮೇ 13 ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಬಾರಿ ಯಾವ ಪಕ್ಷಕ್ಕೆ ಅಧಿಕಾರ ಸಿಗುತ್ತೆ ? ಮುಖ್ಯಮಂತ್ರಿ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ? ಅನ್ನೋ ಪ್ರಶ್ನೆಗಳು ಇದೀಗ ರಾಜ್ಯದ ಮತದಾರರನ್ನು ಕಾಡುತ್ತಿದೆ. ಚುನಾವಣೆಯ ಹಿನ್ನೆಲೆಯಲ್ಲಿ ನ್ಯೂಸ್‌ನೆಕ್ಸ್ಟ್‌ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 80 ಸ್ಥಾನ ಹಾಗೂ ಜೆಡಿಎಸ್‌ 37 ಸ್ಥಾನಗಳನ್ನು ಜಯಿಸಿತ್ತು. ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರಕಾರ ನಡೆಸಿದ್ದು, ಎಚ್.ಡಿ.ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೆ ಬಿಜೆಪಿ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸ್ವತಂತ್ರ ಬಲದಲ್ಲಿ ಅಧಿಕಾರಕ್ಕೆ ಬಂದಿದ್ದು, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದಿಂದ 17 ಮಂದಿ ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ತದನಂತರದಲ್ಲಿ ನಡೆದ ಉಪಚುನಾವಣೆ ಯಲ್ಲಿ ಹಲವು ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಬಿಜೆಪಿ 119ಕ್ಕೆ ಏರಿಕೆ ಮಾಡಿಕೊಂಡು ಅವಧಿ ಪೂರ್ಣ ಅಧಿಕಾರವನ್ನು ನಡೆಸಿತ್ತು. ಆದರೆ ಆಪರೇಷನ್‌ ಕಮಲದಿಂದಾಗಿ ಕಾಂಗ್ರೆಸ್‌ ಸಂಖ್ಯಾಬಲ 78ಕ್ಕೆ ಕುಸಿದಿದ್ದು, ಜೆಡಿಎಸ್‌ ಕೂಡ 28 ಸ್ಥಾನಗಳಿಗೆ ಕುಸಿತ ಕಂಡಿದೆ.

ಇದೀಗ ಕರ್ನಾಟಕ ಚುನಾವಣೆ 2023 ರ ಚುನಾವಣೋತ್ತರ ಸಮೀಕ್ಷೆ ( Karnataka exit poll 2023 ) ಹೊರಬಿದ್ದಿದ್ದು, ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಳವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 105 ಸ್ಥಾನಗಳಿಂದ 115 ಸ್ಥಾನಗಳನ್ನು ಪಡೆಯಲಿದೆ. ಇನ್ನು ಕಾಂಗ್ರೆಸ್‌ ಈ ಬಾರಿ 80 ರಿಂದ 90 ಸ್ಥಾನಗಳನ್ನು ಪಡೆಯಲಿದೆ. ಈ ಮೂಲಕ ಕಾಂಗ್ರೆಸ್‌ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇನ್ನು ಜೆಡಿಎಸ್‌ ಕೂಡ ಈ ಬಾರಿ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ 30 ರಿಂದ 40 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇನ್ನು ಪಕ್ಷೇತರರು ಈ ಬಾರಿ ಪ್ರಾಬಲ್ಯ ಮೆರೆಯುವ ಸಾಧ್ಯತೆಯಿದ್ದು, 4 ರಿಂದ 6 ಮಂದಿ ಪಕ್ಷೇತರರು ಚುನಾಯಿತರಾಗಲಿದ್ದಾರೆ.

ರಾಜ್ಯ ಸರಕಾರದ ವಿರುದ್ದ ಹಲವು ಭ್ರಷ್ಟಾಚಾರದ ಆರೋಪಗಳಿದ್ದರೂ ಕೂಡ ನರೇಂದ್ರ ಮೋದಿ, ಅಮಿತ್‌ ಶಾ ಅಬ್ಬರ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ತಂದುಕೊಡಲಿದೆ. ಇನ್ನು ಕಾಂಗ್ರೆಸ್‌ ಪ್ರನಾಳಿಕೆಯಲ್ಲಿನ ಭಜರಂಗದಳ ನಿಷೇಧ ಘೋಷಣೆ ಹಳೆ ಮೈಸೂರು, ಕರಾವಳಿ, ಮಲೆನಾಡು ಭಾಗಗಳಲ್ಲಿ ಬಿಜೆಪಿಗೆ ವರದಾನವಾಗಿ ಪರಿಣಮಿಸಲಿದೆ. ಜೊತೆಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಸಿದ ಬಿಜೆಪಿಗೆ ಹೊಸ ಪ್ರಯೋಗ ಫಲಕೊಟ್ಟಂತಿದೆ. ಆದರೆ ಕಳೆದ ಚುನಾವಣೆಗೆ ಹೋಲಿಕೆ ಮಾಡಿದ್ರೆ ಈ ಬಾರಿ ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವುದು ಸ್ಪಷ್ಟ..

ಇನ್ನು ಬಿಜೆಪಿ ಸ್ಥಾನ ವಂಚಿತರಿಗೆ ಟಿಕೆಟ್‌ ಕೊಟ್ಟಿರುವ ಕಾಂಗ್ರೆಸ್‌ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಚುನಾವಣೆಯ ಆರಂಭದಲ್ಲಿ ಕಾಂಗ್ರೆಸ್‌ ಪರ ಒಲವು ವ್ಯಕ್ತವಾಗಿದ್ದರೂ ಕೂಡ ಭಜರಂಗದಳ ನಿಷೇಧದ ಹೇಳಿಕೆ ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಗಿದೆ. ಇನ್ನು ಟಿಕೆಟ್‌ ಹಂಚಿಕೆಯಲ್ಲಿನ ಎಡವಟ್ಟು, ಕಾಂಗ್ರೆಸ್‌ ಪಕ್ಷದ ಆತಂರಿಕ ಕಚ್ಚಾಟ ಈ ಬಾರಿ ಪಕ್ಷದ ಗೆಲುವಿಗೆ ಮುಳುವಾಗಲಿದೆ. ಕಾಂಗ್ರೆಸ್‌ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಇನ್ನು ಜೆಡಿಎಸ್‌ ಪಕ್ಷ ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ತನ್ನ ಸ್ಥಾನಗಳನ್ನು ಹೆಚ್ಚಳ ಮಾಡಿಕೊಳ್ಳಬಹುದುಷ್ಟೆ.. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ವಲಸೆ ಬಂದವರಿಗೆ ಟಿಕೆಟ್‌ ನೀಡಿರುವುದು ಜೆಡಿಎಸ್‌ ಪಕ್ಷಕ್ಕೆ ವರವಾಗಲಿದೆ.

ಇದನ್ನೂ ಓದಿ : ಉಡುಪಿಯಲ್ಲಿ ಕೈಕೊಟ್ಟ ಮತಯಂತ್ರ : ಕುಕ್ಕೆಕಟ್ಟೆಯಲ್ಲಿ ರಕ್ಷಿತ್‌ ಶೆಟ್ಟಿ ಮತದಾನ

ಇದನ್ನೂ ಓದಿ : ಅನಾರೋಗ್ಯ ಪೀಡಿತರಿಗೆ ಮತದಾನ : ಮಾನವೀಯತೆ ಮೆರೆದ ಬ್ರಹ್ಮಾವರ ತಹಶೀಲ್ದಾರ್‌

Comments are closed.