ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್‌ ಸಿಗ್ನಲ್‌ : ಸರಕಾರ ವಿಧಿಸಿದೆ ಹಲವು ಷರತ್ತು

ಬೆಂಗಳೂರು : ರಾಜ್ಯದಲ್ಲಿ ಕೊನೆಗೂ ಸರಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಗಡಿಭಾಗದ ಜಿಲ್ಲೆಗಳನ್ನು ಹೊರತು ಪಡಿಸಿ, ಉಳಿದ ಜಿಲ್ಲೆಗಳಲ್ಲಿ ಕೊರೊನಾ ಮಾರ್ಗಸೂಚಿಯ ಅನ್ವಯ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ.

ಕಳೆದೊಂದು ತಿಂಗಳಿನಿಂದಲೂ ಗಣೇಶೋತ್ಸವ ಆಚರಣೆಯ ಕುರಿತು ಸಾರ್ವಜನಿಕವಾಗಿ ಸಾಷ್ಟು ಚರ್ಚೆಗಳು ನಡೆದಿತ್ತು. ಕೊರೊನಾ ಸಂಕಷ್ಟದ ನಡುವಲ್ಲೇ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಬೇಕೆ, ಇಲ್ಲಾ ಬೇಡವೇ ಅನ್ನೋ ಕುರಿತು ಪರ, ವಿರೋಧದ ಮಾತುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿ, ಷರತ್ತು ಬದ್ದವಾಗಿ ಗಣೇಶೋತ್ಸವ ಆಚರಣೆಗೆ ಸರಕಾರ ಅಸ್ತು ಎಂದಿದೆ.

ಗಣೇಶೋತ್ಸವವನ್ನು ಆಚರಣೆ ಮಾಡಬಹುದು. ಆದರೆ ಯಾವುದೇ ಮನೋರಂಜನೆ, ಕಾರ್ಯಕ್ರಮ, ಆರ್ಕೇಸ್ಟ್ರಾ, ಹಾಸ್ಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಅಲ್ಲದೇ ಮೂರು ದಿನಗಳ ಕಾಲ ಮಾತ್ರವೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದಾಗಿದ್ದು, ವಿಸರ್ಜನಾ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಸೂಚನೆ ನೀಡುವಲ್ಲಿ ಮಾತ್ರವೇ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತೆಯೂ ಕಟ್ಟಪ್ಪಣೆಯನ್ನು ಹೊರಡಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಅಲ್ಲದೇ ಕೇರಳ ಹಾಗೂ ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳಲ್ಲಿಯೂ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ರಾಜ್ಯ ಸರಕಾರ ನಿಷೇಧ ಹೇರಿದೆ.

(Karnataka Government Green signal Ganesh festival )

Comments are closed.