Indiracanteen: ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಬೇಕು….! ಸಿಎಂಗೆ ಬಿಜೆಪಿ ನಾಯಕ ಸಿ.ಟಿ.ರವಿ ಒತ್ತಾಯ…!!

ದೇಶದಲ್ಲಿ ಹೊತ್ತಿಕೊಂಡಿರೋ ಕ್ರೀಡಾಪ್ರಶಸ್ತಿ ಹೆಸರು ಬದಲಾವಣೆ ಬೆಂಕಿಗೆ ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ.ರವಿ ಮತ್ತಷ್ಟು ತುಪ್ಪ ಸುರಿದಿದ್ದು, ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸುವಂತೆ ಆಗ್ರಹಿಸುವ ಮೂಲಕ ವಿವಾದದ ಕಿಡಿ ಹಚ್ಚಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ನಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವಂತೆ ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದಾರೆ. ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಿ. ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ನಾಮಕರಣ ಮಾಡಿ ಎಂದು ಸಿ.ಟಿ.ರವಿ ಸಿಎಂ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ.

ಕನ್ನಡಿಗರು ಊಟ ಮಾಡುವಾಗ ಇಂದಿರಾಗಾಂಧಿಯವರ ಹೆಸರಿನ ಮೂಲಕ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಯಾಕೆ ನೆನಪಿಸಿಕೊಳ್ಳಬೇಕು? ಎಂದು ಪ್ರಶ್ನಿಸಿರುವ ಸಿ.ಟಿ.ರವಿ ಆದಷ್ಟು ಬೇಗ ಈ ಬಗ್ಗೆ ಸಿಎಂ ಬೊಮ್ಮಾಯಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಿ.ಟಿ.ರವಿ ಟ್ವೀಟ್ ಸಖತ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಕೆಲವರು ಹಾಗಾದ್ರೆ ಈಗಾಗಲೇ ಇಡಲಾಗಿರುವ ವಾಜಪೇಯಿ ಹಾಗೂ ಸಾವರಕರ್ ಹೆಸರನ್ನು ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರದಿಂದ ನೀಡಲಾಗುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನಚಂದ್ ಪ್ರಶಸ್ತಿ ಎಂದು ಬದಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಹೆಸರು ಬದಲಾವಣೆ ಸಂಗತಿ ಚರ್ಚೆಯಲ್ಲಿದೆ.  

Comments are closed.