ಬಿಜೆಪಿ ಕಾಂಗ್ರೆಸ್ ನಡುವೆ ಫೈಟ್ : ಹರ್ಷ ಕೊಲೆಯಲ್ಲೂ ಶುರುವಾಯ್ತು ರಾಜಕೀಯ ಲೆಕ್ಕಾಚಾರ

ಬೆಂಗಳೂರು : ಶಿವಮೊಗ್ಗದಲ್ಲಿ ಭಜರಂಗ ದಳ ಕಾರ್ಯಕರ್ತ ಹರ್ಷ ಎಂಬಾತನ ಬರ್ಬರ ಹತ್ಯೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಘ್ನತೆಯಿಂದ ಕೂಡಿದೆ. ಈ ಮಧ್ಯೆ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಆರೋಪಿಸಿದ್ದರೇ, ಕಾಂಗ್ರೆಸ್ ಇದು ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆ ವೈಫಲ್ಯ ಎಂದು ಆರೋಪಿಸಿದೆ. ಶಿವಮೊಗ್ಗದಲ್ಲಿ ನಡೆದಿರುವ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಲ್ಲೂ (Fight between BJP Congress) ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

ಶಿವಮೊಗ್ಗ ಘಟನೆಯನ್ನು ಖಂಡಿಸಿರುವ ಹಿರಿಯ ಸಚಿವ ಈಶ್ವರಪ್ಪ, ನಮ್ಮ ಶಿವಮೊಗ್ಗದಲ್ಲಿ ಸಜ್ಜನ‌ ಕಾರ್ಯಕರ್ತನ ಕೊಲೆಯಾಗಿದೆ. ಡಿಕೆಶಿಯ ಮಾತಿನಿಂದ ಬಲಪಡೆದ ಮುಸ್ಲಿಂ‌ ಗೂಂಡಾಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಹಿಂದೂ ಕಾರ್ಯಕರ್ತನನ್ನು ಹತ್ಯೆಗೈಯ್ದಿರುವುದು ದುರದೃಷ್ಟಕರ. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕೆಂದು ನಾನು ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವರಿಗೆ ಮನವಿ‌ ಮಾಡುತ್ತೇನೆ ಎಂದಿದ್ದಾರೆ.

ಇನ್ನು ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಶಾಸಕ ಪ್ರಿಯಾಂಕ ಖರ್ಗೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಶಿವಮೊಗ್ಗ ಗೃಹ ಸಚಿವರ ತವರಿನಲ್ಲೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಇದು ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯ ಎಂದು ಆರೋಪಿಸಿದ್ದಾರೆ.

ಇನ್ನು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ, ಇನ್ನೊಂದು ಹಿಂದೂ ಕಾರ್ಯಕರ್ತನ ಕೊಲೆಯಾದರೇ ಶ್ರೀರಾಮಸೇನೆ ಬೀದಿಗಿಳಿದು ಹೋರಾಟ ಮಾಡುತ್ತದೆ‌. ಸರ್ಕಾರ ರಾಷ್ಟ್ರವಿರೋಧಿ ಸಂಘಟನೆಗಳನ್ನು ಸಲಹುತ್ತಿರುವ ಪರಿಣಾಮ ಇಂಥಹ ಘಟನೆಗಳು ನಡೆಯುತ್ತಿವೆ. ಮೃತನ ಕುಟುಂಬಕ್ಕೆ ಸರ್ಕಾರ ತಕ್ಷಣವೇ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಘಟನೆಗೆ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಸರ್ಕಾರದ ಮೇಲೆ ವಿಶ್ವಾಸವಿದೆ. ಸದ್ಯದಲ್ಲೇ ತಪ್ಪಿತಸ್ಥರ ಬಂಧನವಾಗಲಿದೆ. ಎಲ್ಲರೂ ಶಾಂತಿಯಿಂದ ವರ್ತಿಸಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ‌ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಪ್ರಯತ್ನ ನಡೆಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಹರ್ಷ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಹುಟ್ಟೂರಿಗೆ ರವಾನಿಸಲಾಗಿದೆ.

ಇದನ್ನೂ ಓದಿ : ರಾಜ್ಯ ಕೈಪಡೆಗೆ ಹೈಕಮಾಂಡ್ ಬುಲಾವ್: ಸಿದ್ದು ಡಿಕೆಶಿ ಸೇರಿ ಪ್ರಮುಖ ನಾಯಕರು ದೆಹಲಿಗೆ

ಇದನ್ನೂ ಓದಿ : Harsha Murder : ಭಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ: 144 ಸೆಕ್ಷನ್ ಜಾರಿ, ಶಿವಮೊಗ್ಗದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ

( Fight between BJP Congress, Political calculation began in the murder of Harsha)

Comments are closed.