PSI Recruitment Scam : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್​ ಪೌಲ್​ ಬಂಧನ

ಬೆಂಗಳೂರು : PSI Recruitment Scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಹುದೊಡ್ಡ ಬೇಟೆಯನ್ನು ಮಾಡಿದ್ದಾರೆ. ನಾಲ್ಕು ದಿನಗಳ ಕಾಲ ಹಿರಿಯ ಐಪಿಎಸ್​ ಅಧಿಕಾರಿ ಎಡಿಜಿಪಿ ಅಮೃತ್​ ಪೌಲ್​ರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಐಡಿ ಅಧಿಕಾರಿಗಳು ಇಂದು ಅವರನ್ನು ಬಂಧಿಸಿದ್ದಾರೆ. ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ ಅಮೃತ್​ ಪೌಲ್​​ರ ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆಂದು ಅವರನ್ನು ಬೌರಿಂಗ್​ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು ಎನ್ನಲಾಗಿದೆ.


ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಲಂಚಾವತಾರ ಕೇಳಿ ಬಂದ ಬಳಿಕ ಅಮೃತ್​ ಪೌಲ್​ ಹೆಸರು ಬೆಳಕಿಗೆ ಬಂದಿತ್ತು. ಪಿಎಸ್​ಐ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್​ ಪೌಲ್​ರಿಗೆ ಈ ವಿಚಾರದಲ್ಲಿ ಸರ್ಕಾರ ಮುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶಗಳನ್ನು ನೀಡಿತ್ತು. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಅಮೃತ್​ ಪೌಲ್​ ತಮ್ಮ ಕಚೇರಿಯಲ್ಲಿಯೇ ಓಎಂಆರ್​ ಶೀಟ್​ಗಳನ್ನು ತಿದ್ದಿದ್ದಾರೆ ಎಂಬ ಆರೋಪ ಎದುರಾಗಿತ್ತು. ಅಮೃತ್​ ಪೌಲ್​ ವಿರುದ್ಧ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಇವರ ವಿರುದ್ಧ ಸಾಕ್ಷ್ಯಗಳನ್ನು ಕಲೆ ಹಾಕಿರುವ ಸಿಐಡಿ ಅಧಿಕಾರಿಗಳು ಅಮೃತ್​ ಪೌಲ್​ರನ್ನು ಬಂಧಿಸಿದ್ದಾರೆ. 1995ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ ಅಮೃತ್​ ಪೌಲ್​ ಮೂಲತಃ ಪಂಜಾಬ್​ನವರಾಗಿದ್ದು ಆರೋಪ ಎದುರಾಗುತ್ತಿದ್ದಂತೆಯೇ ಇವರಿಗೆ ಯಾವುದೇ ಹುದ್ದೆಯನ್ನು ನೀಡದೇ ಸರ್ಕಾರವು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.


ಅಮೃತ್​ ಪೌಲ್​ ಜೊತೆಯಲ್ಲಿ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ, ಸಶಸ್ತ್ರ ಮೀಸಲು ಪಡೆಯ ಸಬ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌, ಹೆಡ್‌ ಕಾನ್‌ಸ್ಟೇಬಲ್‌ ಲೋಕೇಶ್‌, ದ್ವಿತೀಯ ದರ್ಜೆ ಸಹಾಯಕ ಶ್ರೀಧರ್‌ ಹಾಗೂ ಮಧ್ಯವರ್ತಿಗಳಾದ ಮಂಜುನಾಥ್‌ ಮತ್ತು ಶರತ್​​ರನ್ನು ಬಂಧಿಸಲಾಗಿದೆ. ಇವರೆಲ್ಲರೂ ಸ್ಟ್ರಾಂಗ್​ ರೂಮ್​ನಲ್ಲಿ ಓಎಂಆರ್​ ಶೀಟ್​ಗಳನ್ನು ತಿದ್ದಿದ್ದರು ಎನ್ನಲಾಗಿದೆ. ಸಂಪೂರ್ಣ ಸ್ಟ್ರಾಂಗ್​​ ರೂಮ್​ನ ನಿಯಂತ್ರಣವು ಎಡಿಜಿಪಿ ಅಮೃತ್​ ಪೌಲ್​ರ ಕೈಯಲ್ಲೇ ಇತ್ತು. ಈ ಬಗ್ಗೆ ಸೂಕ್ತ ಸಾಕ್ಷ್ಯಗಳು ದೊರಕಿರುವ ಹಿನ್ನೆಲೆಯಲ್ಲಿ ಅಮೃತ್​ ಪೌಲ್​ರನ್ನು ಬಂಧಿಸಲಾಗಿದೆ.

ಇದನ್ನು ಓದಿ : Actor Swara Bhasker : ನಟಿ ಸ್ವರಾ ಭಾಸ್ಕರ್​ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ

ಇದನ್ನೂ ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ

karnataka psi recruitment scam adgp amrit paul arrested by cid

Comments are closed.