V.Somanna: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ; ಮಹಿಳೆ ಉಲ್ಟಾ ಹೊಡೆದಿದ್ದೇಕೆ..?

ಚಾಮರಾಜನಗರ: V.Somanna: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಿನ್ನೆ ನಡೆದಿದೆ. ಆದರೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸಚಿವ ಸೋಮಣ್ಣ ಹಾಗೂ ಸಂತ್ರಸ್ತ ಮಹಿಳೆ ಇಬ್ಬರೂ ಉಲ್ಟಾ ಹೊಡೆದಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ 175 ಜನರಿಗೆ ನಿನ್ನೆ ಮಧ್ಯಾಹ್ನ 3.30ರ ವೇಳೆ ನಿವೇಶನ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸಚಿವರು ಮಾತ್ರ ಸಂಜೆ 6.30ರ ಸುಮಾರಿಗೆ ಕಾರ್ಯಕ್ರಮಕ್ಕೆ ತೆರಳಿದ್ದರು. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ತನ್ನ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಸಲುವಾಗಿ ಹೋಗಿ ಸಚಿವರ ಕಾಲಿಗೆ ನಮಸ್ಕರಿಸಲು ಮುಂದಾದಾಗ ಆಕೆಯ ಸಮಸ್ಯೆಯನ್ನೂ ಆಲಿಸದೇ ಕೆನ್ನೆಗೆ ಹೊಡೆದಿದ್ದಾರೆ. ತಕ್ಷಣವೇ ಪೊಲೀಸರು ಮಹಿಳೆಯನ್ನು ಹೊರಗೆ ಕರೆದೊಯ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಮಹಿಳೆಯ ಸಮಸ್ಯೆ ಏನು..?
ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಯ ಪತಿ ನಿಧನ ಹೊಂದಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಹೀಗಾಗಿ ತಮ್ಮ ಕುಟುಂಬ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ನಿವೇಶನ ನೀಡುವಂತೆ ಮನವಿ ಮಾಡಲು ಬಂದಿದ್ದರು ಎನ್ನಲಾಗಿದೆ. ಸಮಸ್ಯೆ ಬಗೆಹರಿಸುವಂತೆ ಈ ಹಿಂದೆ ಇದೇ ಮಹಿಳೆಗೆ ಸಚಿವ ಸೋಮಣ್ಣ ಭರವಸೆ ನೀಡಿದ್ದರೂ, ಪದೇ ಪದೇ ಮಹಿಳೆ ನಿವೇಶನಕ್ಕಾಗಿ ಅಂಗಲಾಚುತ್ತಿರುವುದನ್ನು ಕಂಡು ಕೋಪದಿಂದ ಸಚಿವರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು..?
ನಿನ್ನೆ ಹಂಗಳ ಗ್ರಾಮದಲ್ಲಿ 173 ಜನರಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯ್ತು. ಇನ್ನು 9-10 ಸೈಟ್‍ಗಳಿದ್ದು, 25 ಮಂದಿ ಬೇಡಿಕೆ ಇಡುತ್ತಿದ್ದಾರೆ. ಆ ಮಹಿಳೆ ನಾಲ್ಕೈದು ಬಾರಿ ನನ್ನ ಕಾಲಿಗೆ ನಮಸ್ಕರಿಸಿದರು. ನಾಲ್ಕೂವರೆ ಸಾವಿರ ರೂ.ಯಾರಿಗೋ ಕೊಟ್ಟಿದ್ದೀನಿ ಎಂದರು. ಆ ವೇಳೆ ನಾನೇ ಅವರಿಗೆ ಹಣ ನೀಡಿದೆ. ಎಲ್ಲಾ ಹೆಣ್ಣುಮಕ್ಕಳನ್ನು ನಾನು ಸೋದರಿಯ ಭಾವನೆಯಲ್ಲೇ ನೋಡುತ್ತೇನೆ. ಮಹಿಳೆ ಕಾಲಿಗೆ ಬೀಳಲು ಬಂದಾಗ ತಡೆಯಲು ಹೋದಾಗ ಕೈ ತಾಗಿದೆಯೇ ಹೊರತು ತಾನು ಹೊಡೆದಿಲ್ಲ. ಒಂದು ವೇಳೆ ಈ ಘಟನೆ ನಡೆದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದರು.

ಒತ್ತಡದಲ್ಲಿ ಉಲ್ಟಾ ಹೊಡೆದ್ರಾ ಮಹಿಳೆ..?
ಇನ್ನು ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಿಳೆ ಸಚಿವರು ನನ್ನ ಕೆನ್ನೆಗೆ ಹೊಡೆದೇ ಇಲ್ಲ ಎಂದಿದ್ದಾರೆ. ನಿವೇಶನ ನೀಡುವಂತೆ ನಾನು ಸಚಿವರ ಕಾಲಿಗೆ ಬಿದ್ದೆ. ಸಚಿವರು ನನ್ನನ್ನು ಎತ್ತಿ ಕ್ಷಮೆ ಕೇಳಿ ಸಮಾಧಾನ ಮಾಡಿದರು. ಸಚಿವರು ನನಗೆ ಹೊಡೆದಿಲ್ಲ. ಆದರೆ ಈ ಬಗ್ಗೆ ಅವರ ಮೇಲೆ ಅಪವಾದ ಹೊರಿಸಲಾಗಿದೆ. ನಿವೇಶನಕ್ಕೆ ನಾನು ನೀಡಿದ್ದ ನಾಲ್ಕೂವರೆ ಸಾವಿರ ರೂ.ನ್ನು ವಾಪಸ್ ಕೊಡಿಸಿದ್ದಾರೆ. ನನಗೆ ನಿವೇಶನ ನೀಡಿ ನನ್ನ ಮಕ್ಕಳಿಗೊಂದು ದಾರಿ ತೋರಿಸಿದ್ದಾರೆ, ಮನೆಯಲ್ಲಿ ಅವರ ಫೋಟೋ ಇಟ್ಟು ನಾನು ಪೂಜೆ ಮಾಡುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.

ಸೋಮಣ್ಣ ವಿರುದ್ಧ ಕಿಡಿಕಾರಿದ ಹೆಚ್.ಡಿ.ಕುಮಾರಸ್ವಾಮಿ:
ಕಪಾಳಮೋಕ್ಷ ವಿಚಾರವಾಗಿ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಿನ್ನೆ ನಡೆದ ಘಟನೆ ಬಿಜೆಪಿಗರ ಸಂಸ್ಕøತಿಯನ್ನು ತೋರಿಸುತ್ತದೆ. ಅವರ ನಡವಳಿಕೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರದ್ದು ಎರಡು ಮುಖ. ಎದುರು ಸಿಕ್ಕಾಗ ಒಂದು ಮಾತನಾಡುತ್ತಾರೆ. ಹಿಂದಿನಿಂದ ಇನ್ನೊಂದು ಮಾತನಾಡುತ್ತಾರೆ. ಈ ಹಿಂದೆಯೂ ಕೆಲ ಸಚಿವರು ಹೀಗೆಯೇ ವರ್ತಿಸಿದ್ದಾರೆ. ಹೀಗಾಗಿ ಅವರಿಂದ ಒಳ್ಳೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: FCRA LICENCE CANCEL: ದೀಪಾವಳಿ ಹೊಸ್ತಿಲಲ್ಲೇ ಸೋನಿಯಾ ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಬಿಗ್ ಶಾಕ್..!

ಇದನ್ನೂ ಓದಿ: Chhattisgarh Nurse Gang Raped : ಆರೋಗ್ಯ ಕೇಂದ್ರದಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತ ಸೇರಿ 3 ಮಂದಿಯ ಬಂಧನ

minister v.somanna slapped women in chamarajnagar

Comments are closed.