ಮೈಸೂರು: ಕೊರೋನಾ ಮಧ್ಯೆಯೇ ನಾಡಹಬ್ಬ ದಸರಾಕ್ಕೆ ಸಿದ್ಧತೆ ಆರಂಭವಾಗಿದ್ದು, ದಸರಾ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 14 ಸಂಭಾವ್ಯ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.

ಅಕ್ಟೋಬರ್ 7 ರಿಂದ 15ರವರೆಗೆ ನಾಡಹಬ್ಬ ದಸರಾ ನಡೆಯಲಿದ್ದು, ಕೊರೋನಾ ಮೂರನೇ ಅಲೆಯ ಭೀತಿಯ ನಡುವೆ ದಸರಾ ಆಚರಣೆ ಹೇಗಿರಲಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
ಈ ಮಧ್ಯೆ ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕಾಳನ್ ನೇತೃತ್ವದಲ್ಲಿ ಅಧಿಕಾರಿಗಳು ವೈದ್ಯರು ದುಬಾರೆ, ಆನೆಕಾಡು,ಮತ್ತಿಗೋಡು ಆನೆ ಶಿಬಿರಗಳಿಗೆ ಭೇಟಿ ನೀಡಿದ್ದು, ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ,ಕಣ್ಣಿನ ಪರೀಕ್ಷೆ ನಡೆಸಿ ಒಟ್ಟು 14 ಆನೆಗಳನ್ನು ಆಯ್ಕೆ ಮಾಡಿದ್ದಾರೆ.
ಅಭಿಮನ್ಯು,ಧನಂಜಯ್,ಗೋಪಾಲ್ ಸ್ವಾಮಿ,ವಿಕ್ರಮ,ವಿಜಯ್, ಪ್ರಶಾಂತ್,ಭೀಮಾ,ಗೋಪಿ,ಕಾವೇರಿ,ಹರ್ಷ,ಲಕ್ಷಣ,ಚೈತ್ರ ಹಾಗೂ ಮಹಾರಾಷ್ಟ್ರದ ಭೀಮನನ್ನು ನಾಡಹಬ್ಬದ ಜಂಬೂಸವಾರಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಅಭಿಮನ್ಯ ಈ ಭಾರಿ ಅಂಬಾರಿ ಹೊರೋದು ಬಹುತೇಕ ಖಚಿತವಾಗಿದೆ.
ಕೊರೋನಾದಿಂದ ಹಿಂದಿನ ವರ್ಷ ಜಂಬೂಸವಾರಿಯನ್ನು ಮೊಟಕುಗೊಳಿಸಲಾಗಿದ್ದು, ಅರಮನೆ ಆವರಣದಲ್ಲಷ್ಟೇ ಜಂಬೂಸವಾರಿ ನಡೆದಿತ್ತು. ಕೇವಲ ಐದು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.