ಮೈಸೂರಿನ ಬದನವಾಳು ಸತ್ಯಾಗ್ರಹಕ್ಕೆ ಮರುಜೀವ: “ಗ್ರಾಮ ಸತ್ಯಾಗ್ರಹ” ಎಂದು ಮರುನಾಮಕರಣ
Mysuru Badanavalu movement: ಮೈಸೂರು: ಹನ್ನೊಂದು ವರ್ಷಗಳ ಹಿಂದೆ ಗಾಂಧಿವಾದಿ, ಹಿರಿಯ ರಂಗಕರ್ಮಿ ಪ್ರಸನ್ನ ಅವರ ಮುಂದಾಳತ್ವದಲ್ಲಿ ಕೈಗೊಳ್ಳಲಾದ ದೇಶಾದ್ಯಂತ ಬಹಳ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಚಾರಿತ್ರಿಕ ಬದನವಾಳು ಸತ್ಯಾಗ್ರಹಕ್ಕೆ ಮತ್ತೊಮ್ಮೆ ಜೀವ ತುಂಬಲು ನಿರ್ಧರಿಸಲಾಗಿದೆ. ಅಂದು ಬದನವಾಳು ಸತ್ಯಾಗ್ರಹದಲ್ಲಿ ಪಾಲ್ಗೊಂಡ ಅಲ್ಲಿನ ಗ್ರಾಮಸ್ಥರು, ಸತ್ಯಾಗ್ರಹಿಗಳು, ಸಮಾಜ ಸೇವಕರು, ರಂಗಕರ್ಮಿಗಳು, ಪತ್ರಕರ್ತರು ಇತ್ತೀಚೆಗೆ ಮೈಸೂರಿನಲ್ಲಿ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ. ರಂಗಕರ್ಮಿ ಪ್ರಸನ್ನ ಅವರು ಈ ಸಭೆಯ ನೇತೃತ್ವ ವಹಿಸಿದ್ದರು.
2015ರ ಬದನವಾಳು ಸತ್ಯಾಗ್ರಹದ ನಿರ್ಣಯಗಳನ್ನು ಜಾರಿಗೆ ತರಬೇಕು. ಮನುಕುಲವನ್ನೇ ವಿನಾಶದ ಅಂಚಿಗೆ ತಳ್ಳಿರುವ ಯಂತ್ರ ನಾಗರಿಕತೆಗೆ ಸೆಡ್ಡು ಹೊಡೆದು ಆ ಮೂಲಕ ಸುಸ್ಥಿರ ಬದುಕು ಮತ್ತು ಸುಸ್ಥಿರ ಆರ್ಥಿಕತೆ ನೆಲೆಗೊಳ್ಳುವಂತೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಬದನವಾಳು ಸತ್ಯಾಗ್ರಹವನ್ನೇ ಗ್ರಾಮ ಸತ್ಯಾಗ್ರಹ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಗ್ರಾಮ ಸತ್ಯಾಗ್ರಹಕ್ಕೆ ಮರುಚಾಲನೆ ನೀಡುವುದರಿಂದ ಗ್ರಾಮ ವ್ಯವಸ್ಥೆ, ಕೈ ಉತ್ಪನ್ನಗಳ ಆರ್ಥಿಕತೆ, ಸಹಜ ಕೃಷಿ, ಸ್ಥಳೀಯ ಸಂಸ್ಕೃತಿಗಳು, ಮಾತೃಭಾಷೆಗಳು, ದುರ್ಬಲ ಜನವರ್ಗಗಳು ಮತ್ತು ದುರ್ಬಲಗೊಂಡಿರುವ ಪ್ರಾಕೃತಿಕ ಸಂಪನ್ಮೂಲಗಳು-ಇವೆಲ್ಲವನ್ನೂ ಮೇಲೆತ್ತಬಲ್ಲ ಅಹಿಂಸಾತ್ಮಕ ಚಳವಳಿಯಾಗಿ ಮುಂದುವರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಸನ್ನ ಅವರು ಈಗಾಗಲೇ ಕೆಲ ದಿನಗಳಿಂದ ಬದನವಾಳುವಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಗ್ರಹಿಗಳನ್ನು, ಗ್ರಾಮಸ್ಥರನ್ನು, ನೇಕಾರರನ್ನು ಮತ್ತು ಸಮಾನ ಮನಸ್ಕರನ್ನು ಒಂದುಗೂಡಿಸುವ ಕೆಲಸದಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ. ಇದರೊಂದಿಗೆ ಚಳವಳಿಗೆ ಹೊಸ ಆಯಾಮ ನೀಡುವ ಉದ್ದೇಶಕ್ಕೆ ಚಾಲನೆ ಸಿಗಲಿದೆ.
ಪ್ರಸನ್ನ ಅವರು 2015ರಲ್ಲಿ ಬದನವಾಳು ಚಳವಳಿ ಕೈಗೊಂಡಿದ್ದರು. ʼಬದನವಾಳುವಿಗೆ ಬನ್ನಿ, ನಾಳಿನ ಬದುಕನ್ನು ಉಳಿಸಿʼ ಎಂದು ಕರೆಕೊಟ್ಟಿದ್ದ ಅವರು ಐದು ದಿಕ್ಕುಗಳಿಂದ ಬದನವಾಳುವಿಗೆ ಕಾಲ್ನಡಿಗೆಯನ್ನು ಕೈಗೊಂಡಿದ್ದರು. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನಿಷ್ಠ ಬಟ್ಟೆ, ಕನಿಷ್ಠ ಪಾತ್ರೆ, ಎಲ್ಲ ಕನಿಷ್ಠ ಸೌಲಭ್ಯಗಳೊಂದಿಗೆ ಶುದ್ಧ ಪರಿಸರದಲ್ಲಿ ಕಳೆಯುವ ಪ್ರಸನ್ನ ಅವರ ನಿಲುವು ಅನೇಕರಿಗೆ ಚೇತೋಹಾರಿಯಾಗಿತ್ತು. ಹಾಗಾಗಿ ಆ ಚಳವಳಿ ದೊಡ್ಡ ಯಶಸ್ಸನ್ನೇ ಕಂಡಿತ್ತು. ನಟ ಇರ್ಫಾನ್ ಖಾನ್ ಸೇರಿದಂತೆ ರಾಷ್ಟ್ರದ ನಾನಾ ಭಾಗಗಳಿಂದ ಆಗಮಿಸಿದ ಕಾರ್ಯಕರ್ತರು, ಚಿತ್ರನಟರು, ರಂಗಕರ್ಮಿಗಳು, ಪತ್ರಕರ್ತರು ಬೆಂಬಲ ವ್ಯಕ್ತಪಡಿಸಿದ್ದು ವಿಶೇಷ.
2015ರಲ್ಲಿ ಸತ್ಯಾಗೃಹವನ್ನು ಮಾಡಿದಾಗ ಪರಿಸ್ಥಿತಿ ಹೇಗಿತ್ತೋ ಅದಕ್ಕಿಂತ ತೀವ್ರತರವಾದ ಅಸ್ಥಿರತೆ ಇವತ್ತು ನಮ್ಮ ಸಮಾಜವನ್ನ, ಜಗತ್ತನ್ನು ಕಾಡುತ್ತಿದೆ. ಈಗ ಇಂತಹ ರಾಕ್ಷಸ ಯಂತ್ರದ ಎದುರಿಗೆ ಎರಡು ಪುಟ್ಟ ಕೈಗಗಳು ಹೇಗೆ ನಿಲ್ಲಲು ಸಾಧ್ಯ ಎಂಬುದೇ ಒಗಟಾಗಿದೆ. ಆದರೆ ಕಳೆದ ಹತ್ತು-ಹನ್ನೆರಡು ವರ್ಷಗಳಲ್ಲಿ ಕನಿಷ್ಠ ಶ್ರೀಮಂತ ವರ್ಗಗಳು, ಸಿರಿವಂತ ದೇಶಗಳು ಸಹಜ ಉತ್ಪನ್ನಗಳ ಕಡೆಗೆ ಆಕರ್ಷಿತರಾಗಿವೆ. ಅವರಿಗೀಗ ಗಾಣದಲ್ಲಿ ಮಾಡಿದ ಎಣ್ಣೆ ಬೇಕು. ಅದಕ್ಕಾಗಿ ದುಬಾರಿ ಹಣವನ್ನೂ ತೆರುವುದಕ್ಕೆ ಅವರು ಸಿದ್ಧರಿದ್ದಾರೆ. ಅವರು ಉತ್ತಮ ಅಕ್ಕಿ ಖರೀದಿಸಲು ಸಿದ್ಧರಿದ್ದಾರೆ. ಹಾಗಾಗಿ ನಾವು ಇವತ್ತು ಒಳ್ಳೆಯ ಸಂಘಟನೆಗಳನ್ನು, ಖಾದಿ ಕೇಂದ್ರಗಳನ್ನು ಆರಂಭಿಸಿದರೆ ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆಯಿದೆ ಎಂದು ಸಭೆಯಲ್ಲಿ ಮಾತನಾಡಿದ ಪ್ರಸನ್ನ ಅವರು ಹೇಳಿದರು.
ಈ ಎಲ್ಲ ಚಳವಳಿ, ಹೋರಾಟದ ಜೊತೆ ಜೊತೆಗೇ ಬದನವಾಳು ಖಾದಿ ಕೇಂದ್ರವನ್ನು ಒಂದು ಗಾಂಧಿ ಆಶ್ರಮವಾಗಿ ರೂಪಿಸುವ ದೃಢ ನಿರ್ಧಾರವನ್ನು ಬದನವಾಳು ಹೋರಾಟ ಸಮಿತಿ ಕೈಗೊಂಡಿದೆ. ಇದನ್ನು ಸತ್ಯಾಗ್ರಹಿಗಳೇ ತಮ್ಮ ಶ್ರಮದಿಂದ, ಸ್ಥಳೀಯರ ಸಹಯೋಗದೊಂದಿಗೆ ರೂಪಿಸುವ ತೀರ್ಮಾನಕ್ಕೆ ಬಂದಿದ್ದಾರೆ. “ಬದನವಾಳು ಎನ್ನುವುದು ಒಂದು ಸಂಕೇತ ಮಾತ್ರ. ಅದರ ಸ್ಪೂರ್ತಿಯಲ್ಲಿ ಪ್ರತಿಯೊಬ್ಬರ ಊರಿನಲ್ಲೂ ಇರುವ ಗಾಂಧಿ ಆಶ್ರಮವೊ, ಚರಕ ಸಂಸ್ಥೆಯೋ, ಶಾಲೆಯೋ ಇದೆ. ಅದನ್ನು ಆ ಊರಿನ ಜನರ ಶ್ರಮದ ಮೂಲಕ ಅವುಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದು ಕೂಡ ಈ ನಿರ್ಣಯದ ಆಶಯವಾಗಿದೆ,” ಎಂದು ಪ್ರಸನ್ನ ಹೇಳಿದರು.
ಚಿನ್ನಕ್ಕೆ ಸಿಗುವ ಸಾಲ ಬೆಳ್ಳಿಗೇಕಿಲ್ಲ? ಬ್ಯಾಂಕ್‌ಗಳ ಈ ನಡೆಯ ಹಿಂದಿನ ಅಸಲಿ ಸತ್ಯ ತಿಳಿಯಿರಿ
ಇದೇ ಸಂದರ್ಭದಲ್ಲಿ ಮಾತನಾಡಿದ ಬದನವಾಳು ಸತ್ಯಾಗೃಹದ ಸಂಚಾಲಕರಾಗಿದ್ದ ಜಿ.ಎಸ್. ಜಯದೇವ್ ಅವರು, ಬದನವಾಳು ಸತ್ಯಾಗ್ರಹದ ಬಳಿಕ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿದೆವು. ಆದರೆ ಕಾಲ ಕ್ರಮೇಣ ಅವೆಲ್ಲ ಸಡಿಲವಾಗುತ್ತ ಹೋದವು. ಕೆಲವರು ತಟಸ್ಥ ನಿಲುವು ತಳೆದರು. ಅಲ್ಲಿನ ಖಾದಿ ಕೇಂದ್ರದಲ್ಲಿ ದುಡಿಯುವವರಿಗೆ ಸಂಬಳವೇ ಇಲ್ಲದಂತಾಯಿತು, ಎಂದು ವಿಷಾದ ವ್ಯಕ್ತಪಡಿಸಿದರು.
ಬದನವಾಳು ಖಾದಿ ಕೇಂದ್ರಕ್ಕೆ ಸರ್ಕಾರ ನಲವತ್ತು ಕೋಟಿ ರೂ. ಮಂಜೂರು ಮಾಡಿದೆ. ಈ ಹಣದಿಂದ ಗ್ರಾಮೀಣ ಉದ್ಯೋಗ, ಉತ್ಪಾದನೆ, ಖಾದಿ ಕೇಂದ್ರಕ್ಕೆ ಜೀವ ತುಂಬುವ ಕೆಲಸ ಆಗಬೇಕಾಗಿದೆ. ಆದರೆ ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳು ಸಾಮಾನ್ಯವಾಗಿ ಕೇಂದ್ರೀಕೃತವಾಗಿರುತ್ತವೆ. ಅಭಿವೃದ್ಧಿಗಾಗಿ ಮನುಷ್ಯರೋ, ಮನುಷ್ಯರಿಗಾಗಿ ಅಭಿವೃದ್ಧಿಯೋ ಎಂಬ ಪರಿಸ್ಥಿತಿ ಇಂದು ಎಲ್ಲ ಕಡೆ ವ್ಯಾಪಕವಾಗಿದೆ. ಅಭಿವೃದ್ಧಿಗಳು ಮನುಷ್ಯರಿಗಾಗಿ ಇದೆ ಎಂದು ಅನ್ನಿಸುತ್ತಲೇ ಇಲ್ಲ. ಹಾಗಾಗಿ ಬದನವಾಳುವಿನಲ್ಲಿ ಏನೇ ಅಭಿವೃದ್ಧಿ ಆದರೂ ಅದು ಆ ಊರಿಗಾಗಿ ಮತ್ತು ಬದನವಾಳು ಗ್ರಾಮಸ್ಥರಿಗಾಗಿ ಆಗಬೇಕಿದೆ ಎಂದು ಜಯದೇವ್ ಪ್ರತಿಪಾದಿಸಿದ್ದಾರೆ.
“ಖಾದಿ ಕೇಂದ್ರದ ಉದ್ಯೋಗಿಗಳಿಗೆ ಸರ್ಕಾರ ಮೂರು ತಿಂಗಳಿಂದ ಸಂಬಳವನ್ನೇ ಕೊಟ್ಟಿರಲಿಲ್ಲ. ಅವರು ಬದುಕುವುದಾದರೂ ಹೇಗೆ? ಕೊನೆಗೆ ನಾವೆಲ್ಲ ಹೋಗಿ ಕೈಮಗ್ಗದಿಂದ ತಯಾರಿಸಿದ ಬಾತ್ ಟವೆಲ್ ಗಳನ್ನು ಹಾದಿಬದಿಯಲ್ಲಿ ನಿಂತು ಮಾರಾಟ ಮಾಡಿದೆವು. ಅದರಿಂದ ಸಂಗ್ರಹವಾಗಿದ್ದು ಎರಡೂವರೆ ಲಕ್ಷ ರೂ. ಅದರಿಂದ ನೌಕರರಿಗೆ ಸಂಬಳ ಕೊಟ್ಟೆವು,” ಎಂದು ಬದನವಾಳು ಚಳವಳಿಯ ಇನ್ನೊಬ್ಬರು ಸದಸ್ಯರಾದ ಎಂ.ಮಹದೇವಪ್ಪ ವಿವರಿಸಿದರು.
ಬದನವಾಳು ಚಳವಳಿಗೆ ಮತ್ತೆ ಜೀವ ನೀಡುವ ಕೆಲಸ ನಿಜಕ್ಕೂ ಶ್ಲಾಘನಾರ್ಹ ಎಂದು ತಿಳಿಸಿದ ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು ಅವರು, ಮತ್ತೆ ಸಮಾನ ಮನಸ್ಕರು, ಜನರನ್ನು ಒಗ್ಗೂಡಿಸಲು ಬದನವಾಳುವಿನಲ್ಲಿ ದೊಡ್ಡ ಸಮಾವೇಶವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಸಭಾಂಗಣದಲ್ಲಿ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲಿ ಸಭೆ ಸೇರಿದ ಬದನವಾಳು ಸತ್ಯಾಗ್ರಹಿಗಳು ಖಾದಿ ಗ್ರಾಮೋದ್ಯೋಗ ಕೇಂದ್ರ ಮತ್ತೆ ಜೀವ ತುಂಬುವ ಪ್ರತಿಜ್ಞೆ ಕೈಗೊಂಡರು.



