Basavaraj Bommai : ರಾಜ್ಯದಲ್ಲಿ ನಡೆಯುತ್ತಾ ಅವಧಿಪೂರ್ವ ಚುನಾವಣೆ : ಮಹತ್ವದ ಮಾಹಿತಿ ಕೊಟ್ಟ ಬೊಮ್ಮಾಯಿ

ಬೆಂಗಳೂರು : ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಬಿಜೆಪಿ ಮತ್ತಷ್ಟು ಚುನಾವಣೆಗಳನ್ನು ಗೆದ್ದು ಡಬ್ಬಲ್ ಇಂಜಿನ್ ಸರ್ಕಾರಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈ ಗಾಸಿಪ್ ಗೆ ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai ) ಸ್ಪಷ್ಟನೆ ನೀಡಿದ್ದು ತಾವು ಇನ್ನೊಂದಿಷ್ಟು ಕಾಲ ಸಿಎಂ ಆಗಿಯೇ ಮುಂದುವರೆಯೋದಾಗಿ ಹೇಳಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆದ್ದರೇ ಇದು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಇದೇ ರೀತಿ ಕರ್ನಾಟಕದಲ್ಲೂ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರಕಾರ ಅಧಿಕಾರವನ್ನು ಮರುಸ್ಥಾಪನೆ ಮಾಡಿದೆ. ಇದೇ ಮಾದರಿ ಯಲ್ಲೇ ಕರ್ನಾಟಕದಲ್ಲಿಯೂ ಚುನಾವಣೆ ನಡೆಸಿ ಮತ್ತೊಮ್ಮೆ ಅಧಿಕಾರಕ್ಕೆ ಬರೋ ಕನಸಿನಲ್ಲಿತ್ತು ಬಿಜೆಪಿ.

ಎಲ್ಲೆಡೆ ಬಿಜೆಪಿ ಹವಾ ಇರುವಾಗಲೇ ಚುನಾವಣೆ ನಡೆಸೋದು ಮತದಾರನ ಮನಃ ಪರಿವರ್ತನೆಗೆ ನೆರವಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿತ್ತು. ಅಲ್ಲದೇ ಕಾಂಗ್ರೆಸ್ ನಲ್ಲೂ ಸದ್ಯ ಒಗ್ಗಟ್ಟಿನ ಕೊರತೆ ಇದ್ದು, ನಾಯಕತ್ವಕ್ಕಾಗಿ ಕಿತ್ತಾಟ ನಡೆದಿದೆ . ಇದೇ ಹೊತ್ತಿನಲ್ಲಿ ಚುನಾವಣೆ ನಡೆದರೇ ಮತಬ್ಯಾಂಕ್ ಸೆಳೆಯೋದು ಸುಲಭ ಎಂಬ ಲೆಕ್ಕಾಚಾರವೂ ಮಹತ್ವ ಪಡೆದುಕೊಂಡಿತ್ತು.

ಹೀಗಾಗಿ 2023 ರ ಮೇ ವೇಳೆಗೆ ನಡೆಯಬೇಕಿದ್ದ ಚುನಾವಣೆಯನ್ನು 2022 ರ ಡಿಸೆಂಬರ್ ವೇಳೆಗೇ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿತ್ತು. ಆದರೆ ಈಗ ಈ ಸುದ್ದಿಯನ್ನು ಬಿಜೆಪಿ ಸಿಎಂ ಬಸವರಾಜ್ ಬೊಮ್ಮಾಯಿ ನಿರಾಕರಿಸಿದ್ದು, ಅವಧಿಪೂರ್ವ ಚುನಾವಣೆ ಮಾಧ್ಯಮದಲ್ಲಿ ನಡೆದಿದೆ ಎಂದು ಲೇವಡಿ ಮಾಡಿದ್ದಾರೆ. ನಮ್ಮ ಪಕ್ಷದ ಮಟ್ಟದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಎಲ್ಲೂ ಚರ್ಚೆಯೇ ನಡೆದಿಲ್ಲ. ಕೇಂದ್ರದ ನಾಯಕರಿಂದಲೂ ಯಾವುದೇ ರೀತಿಯ ಸೂಚನೆಗಳು ಬಂದಿಲ್ಲ. ಪಕ್ಷದ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಕೂಡ ಆಗಿಲ್ಲ.ಮಾಧ್ಯಮಗಳೇ ಈ ಬಗ್ಗೆ ಚರ್ಚೆ ಹುಟ್ಟುಹಾಕಿವೆ. ಮಾಧ್ಯಮದಲ್ಲಷ್ಟೇ ಈ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದಾರೆ.

ಅಲ್ಲದೇ ಯಾರೂ ಬಿಜೆಪಿ ಪಕ್ಷ ಬಿಡೋದಿಲ್ಲ. ಬಿಜೆಪಿಯನ್ನು ತೊರೆಯುವಂತಹ ಸ್ಥಿತಿಯಲ್ಲಿ ಯಾರೂ ಇಲ್ಲ. ಬೇರೆ ಪಕ್ಷದವರು ಯಾರಾದ್ರೂ ಬಿಜೆಪಿ ಸೇರ್ಪಡೆಯಾಗುತ್ತಾರೆ. ಎಂಬುದನ್ನು ನೀವು ಕಾದು ನೋಡಬೇಕಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಒಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಅವಧಿ ಪೂರ್ವ ಚುನಾವಣೆ ಗಾಸಿಪ್ ಗೆ ತೆರೆ ಎಳೆದಿದೆ.

ಇದನ್ನೂ ಓದಿ : ಪಂಚ ರಾಜ್ಯ ಚುನಾವಣೆ ಎಫೆಕ್ಟ್: ಸಚಿವ ಸಂಪುಟ ಸಭೆಯಲ್ಲೇ ಎಲೆಕ್ಷನ್ ಪ್ಲ್ಯಾನಿಂಗ್

ಇದನ್ನೂ ಓದಿ : ಕಾಂಗ್ರೆಸ್ ಆತ್ಮಾವಲೋಕನ ಸಭೆ : ದೆಹಲಿಗೆ ದೌಡಾಯಿಸಿದ ಡಿಕೆಶಿ

( The pre-election polls in Karnataka, CM Basavaraj Bommai who provided important information)

Comments are closed.