Seat belt Mandatory : ಕಾರಿನಲ್ಲಿ ಪ್ರಯಾಣಿಸುವ ಹಿಂಬದಿ ಪ್ರಯಾಣಿಕರಿಗೂ ಸೀಟು ಬೆಲ್ಟ್ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ದಂಡ!

ಬೆಂಗಳೂರು: Seat belt Mandatory: ಕಾರು ಚಾಲನೆ ವೇಳೆ ಚಾಲಕನ ಹಿಂದಿನ ಸೀಟಿನಲ್ಲಿ ಕುಳಿತ ಪ್ರಯಾಣಿಕರಿಗೂ ಸೀಟು ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ದೇಶದಲ್ಲಿ ಅಪಘಾತ, ಸಾವು-ನೋವುಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಂತೆಯೇ ದೇಶದ ಎಲ್ಲಾ ರಾಜ್ಯಗಳ ಸರ್ಕಾರಗಳು ಈ ಮಹತ್ವದ ಆದೇಶವನ್ನು ಪಾಲಿಸುವಂತೆ ಕೇಂದ್ರ ಸೂಚನೆಯನ್ನು ನೀಡಿದೆ. ಹೊಸ ಆದೇಶದನ್ವಯ ಕಾರಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಸೀಟು ಬೆಲ್ಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ 1 ಸಾವಿರ ರೂ. ದಂಡ ವಿಧಿಸುವಂತೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಲಾಗಿದೆ. ಈ ಮೂಲಕ ಮೊದಲಿದ್ದ 500 ರೂ. ದಂಡವನ್ನು ಸಾವಿರ ರೂ.ಗಳಿಗೆ ಏರಿಕೆ ಮಾಡಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲಿಸ್ ಇಲಾಖೆ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಎಲ್ಲಾ ರಾಜ್ಯಗಳ ಕಮಿಷನರೇಟ್ ಹಾಗೂ ಎಸ್ಪಿಗಳಿಗೆ ಹೊಸ ನಿಯಮ ಜಾರಿಗೆ ತರುವಂತೆ ಕೇಂದ್ರ ಸೂಚನೆ ನೀಡಿದೆ. ಈ ಹಿಂದೆ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತ ಚಾಲಕ ಹಾಗೂ ಪ್ರಯಾಣಿಕರು ಸೀಟು ಬೆಲ್ಟ್ ಕಡ್ಡಾಯವಾಗಿ ಧರಿಸಬೇಕಿತ್ತು. ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಇದೀಗ ನಿಯಮ ಬದಲಾಗಿದೆ. ಕಾರಿನಲ್ಲಿ ಕುಳಿತ ಎಲ್ಲಾ ಪ್ರಯಾಣಿಕರಿಗೂ ಸೀಟು ಬೆಲ್ಟ್ ಕಡ್ಡಾಯವಾಗಿದ್ದು, ಸೀಟು ಬೆಲ್ಟ್ ಧರಿಸದಿದ್ದವರಿಗೆ 1 ಸಾವಿರ ದಂಡ ವಿಧಿಸಲಾಗುತ್ತದೆ.

ರಾಜ್ಯ ಪೊಲೀಸ್ ಇಲಾಖೆಯ ಹೊಸ ನಿಯಮಗಳೇನು..?

ಪ್ರಯಾಣಿಕರ ಸಂಖ್ಯೆ 8 ಮೀರದಂತೆ ಇರುವ ವಾಹನಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಸೀಟು ಬೆಲ್ಟ್ ಹಾಕಿಕೊಳ್ಳಬೇಕು ಎಂಬ ಆದೇಶ ಜಾರಿಯಾಗಿದೆ. ಹೀಗಾಗಿ ಕಾರು, ಖಾಸಗಿ ಬಾಡಿಗೆ ವಾಹನಗಳಲ್ಲಿ ಪ್ರಯಾಣ ಮಾಡುವವರು ಕೂಡಾ ಕಡ್ಡಾಯವಾಗಿ ಸೀಟು ಬೆಲ್ಟ್ ಧರಿಸಬೇಕು.

2019ರ ಮೋಟಾರು ವಾಹನ ಕಾಯ್ದೆ ಪ್ರಕಾರ ಸೆಕ್ಷನ್ 194ರಡಿಯಲ್ಲಿ ಸೀಟು ಬೆಲ್ಟ್ ಧರಿಸದೇ ವಾಹನ ಚಲಾವಣೆ ಶಿಕ್ಷಾರ್ಹ ಅಪರಾಧವಾಗಿದೆ. ಸೀಟು ಬೆಲ್ಟ್ ಇಲ್ಲದ ವಾಹಗಳಲ್ಲಿ ಸೀಟು ಬೆಲ್ಟ್ ಅಳವಡಿಸಲು ನವೆಂಬರ್ 1ರವರೆಗೆ ಕಾಲಾವಕಾಶ ನೀಡಲಾಗಿದೆ. ದೆಹಲಿ, ಮುಂಬೈ ಮುಂತಾದ ಪ್ರಮುಖ ನಗರಗಳಲ್ಲಿ ಈ ನಿಯಮ ಜಾರಿಯಾಗಿದೆ.

ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭ: ಈ ಬಾರಿಯೂ ಭರಪೂರ ಮನರಂಜನೆ ಸಿಗೋದು ಪಕ್ಕಾ

ಇದನ್ನೂ ಓದಿ: KSRTC Good News : ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 50 ಲಕ್ಷ ಅಪಘಾತ ವಿಮೆ ಯೋಜನೆ ಜಾರಿ

Seat belt Mandatory rule enforced in Karnataka, if violated pay fine Rs.1000

Comments are closed.